ಚೆನ್ನೈಯಲ್ಲಿ ಮೂರು ದಶಕಗಳ ಬಳಿಕ ಮರುಕಳಿಸಿದ ಇತಿಹಾಸ
ನವದೆಹಲಿ,ಅ.13: ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಹೊಂದಿದ್ದ ಖಾತೆಗಳನ್ನು ವಿತ್ತ ಸಚಿವ ಪನ್ನೀರ್ ಸೆಲ್ವಂ ಅವರಿಗೆ ವರ್ಗಾಯಿಸಿರುವುದು ಹಾಗೂ ಸಚಿವ ಸಂಪುಟದ ಸಭೆಯ ನೇತೃತ್ವ ವಹಿಸುವ ಅಧಿಕಾರ ಅವಿಗೆ ನೀಡಿರುವುದು ಇತಿಹಾಸ ಮರುಕಳಿಸಿದಂತಾಗಿದೆ. ಮೂರು ದಶಕಗಳ ಹಿಂದೆ, ಇಂತಹುದೇ ಒಂದು ವ್ಯವಸ್ಥೆಯನ್ನು ಆಗಿನ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ ಆವರನ್ನು ಅಮೇರಿಕಾಗೆ ಚಿಕಿತ್ಸೆಗಾಗಿ ಕರೆದೊಯ್ಯುವ ಸಂದರ್ಭ ಮಾಡಲಾಗಿತ್ತು.
ಜಯಲಲಿತಾ ಅವರ ರಾಜಕೀಯ ಗುರು ಎಂ ಜಿ ಆರ್ 1984 ರಲ್ಲಿ ಪಾರ್ಶ್ವವಾಯು ಪೀಡಿತರಾದಾಗ ಹಾಗೂ ಅಮೇರಿಕಾಗೆ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಅವರು ಹೊಂದಿದ್ದ ಖಾತೆಗಳನ್ನು ಅವರ ಹಿರಿಯಕ್ಯಾಬಿನೆಟ್ ಸಚಿವರುಗಳಾದ ನೆಡುಂಚೆಝಿಯನ್ ಹಾಗೂ ಪಿ ಎಸ್ ರಾಮಚಂದ್ರನ್ ಅವರಿಗೆ ವಹಿಸಲಾಗಿತ್ತು.
ಆರು ತಿಂಗಳ ನಂತರ ಎಂ ಜಿ ಆರ್ ಮತ್ತೆ ಅಧಿಕಾರ ವಹಿಸಿಕೊಂಡರೂ ಮಾತನಾಡುವಾಗ ಅವರು ಕೊನೆಯವರೆಗೂ ತಡವರಿಸುತ್ತಿದ್ದರು. ಅವರು 1988 ರಲ್ಲಿ ಸಾವಿಗೀಡಾದಾಗ ಎಡಿಎಂಕೆ ಸಾಕಷ್ಟು ಗೊಂದಲಗಳಿಗೀಡಾಗಿ ಪಕ್ಷ ಹಲವಾರು ಬಾರಿ ಒಡೆದಿತ್ತು ಕೂಡ. ನಂತರದ ಬೆಳವಣಿಗೆಗಳಲ್ಲಿ 1989 ರ ಚುನಾವಣೆಯಲ್ಲಿಪಕ್ಷ ಸೋಲನ್ನೂ ಅನುಭವಿಸಿತ್ತು. ಮುಂದೆ 1991 ರಲ್ಲಿ ಡಿಎಂಕೆ ಸರಕಾರ ವಜಾಗೊಂಡ ನಂತರ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸಾಧಿಸಿ ಜಯಲಲಿತಾ ಬಣ ಅಧಿಕಾರ ಹಿಡಿದಿತ್ತು.
ಈಗ ಎಐಎಡಿಎಂಕೆ ಬಳಿ ಒಟ್ಟು 235 ಸದಸ್ಯರ ವಿಧಾನಸಭೆಯಲ್ಲಿ 134 ಸದಸ್ಯರ ಬಲವಿದ್ದುಮುಖ್ಯ ವಿಪಕ್ಷವಾದ ಡಿಎಂಕೆಬಳಿ ಕೇವಲ 98 ಸದಸ್ಯರಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ಇನ್ನಷ್ಟು ಸಮಯ ಮುಂದುವರಿದಿದ್ದೇ ಆದಲ್ಲಿ ಆಡಳಿತ ಪಕ್ಷ ತನ್ನ ಏಕತೆಯನ್ನು ಮುಂದುವರಿಸಿಕೊಂಡು ಹೋಗುವುದೇ ಎಂಬುದು ಈಗಿನ ಪ್ರಶ್ನೆಯಾಗಿದೆ. ಪಕ್ಷಕ್ಕೆ ಜಯಲಲಿತಾ ಅವರ ವರ್ಚಸ್ಸು ಅತಿ ಮುಖ್ಯವಾಗಿದ್ದು ಆಕೆ ಇಲ್ಲಿಯ ತನಕ ಯಾರನ್ನೂ ತನ್ನ ಉತ್ತರಾಧಿಕಾರಿಯೆಂದು ಬಿಂಬಿಸಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಮುಖ್ಯಮಂತ್ರಿಯ ಅನಾರೋಗ್ಯದ ಕುರಿತಾಗಿ ಡಿಎಂಕೆಸಾಕಷ್ಟು ರಾಜಕೀಯ ಕೂಡ ಮಾಡುತ್ತಿದೆ.