×
Ad

ಏಕರೂಪನಾಗರಿಕ ಸಂಹಿತೆಗೆ “ಸಮಸ್ತ’’ದ ತೀವ್ರ ವಿರೋಧ

Update: 2016-10-13 14:41 IST

ಕಲ್ಲಿಕೋಟೆ,ಅ.13: ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕರೂಪನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಹಾಗೂ ಅದರ ಪೋಷಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಭಾರತದಲ್ಲಿ ಸಮಾನ ಕಾನೂನು ಜಾರಿಗೆ ತರುವುದರಿಂದ ದೇಶದ ಸಂವಿಧಾನವು ಪ್ರಜೆಗಳಿಗೆ ಕಲ್ಪಿಸಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ವಿವಿಧ ಧರ್ಮಿಯವರು ವಾಸಿಸುತ್ತಿರುವ ಭಾರತದಲ್ಲಿ ಇಂತಹ ಕಾನೂನು ಜಾರಿಗೆ ತರುವುದರಿಂದ ದೇಶದ ಜಾತ್ಯಾತೀತೆ ಹಾಗೂ ವೈವಿಧ್ಯತೆಗೆ ಭಂಗವುಂಟಾಗುತ್ತದೆ. ನಂಬಿಕೆ ಸ್ವಾತಂತ್ರವು ಕೂಡ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಹೀಗಿರುವಾಗ ದೇಶದ ಕಾನೂನಿನಲ್ಲಿ ಬದಲಾವಣೆಯ ತರುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿರುವ ಕೇಂದ್ರ ಸರಕಾರದ ನಿಗೂಢ ತಂತ್ರವನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕೆಂದು ಸಭೆಯು ಅಭಿಪ್ರಾಯಪಟ್ಟಿತು. ಅಲ್ಲದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಮಾನಮನಸ್ಕರ ಜೊತೆ ಚರ್ಚಿಸಿ ಬೃಹತ್ ಮಟ್ಟದ ಪ್ರತಿಭಟನೆಗಳನ್ನು ಏರ್ಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಕಲ್ಲಿಕೋಟೆಯ ಸಮಸ್ತ ಆಡಿಟೋರಿಯಂನಲ್ಲಿ ನಡೆದ ಸಭೆಯನ್ನು ಸಮಸ್ತದ ಪ್ರಧಾನ ಕಾರ್ಯದರ್ಶಿ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸಿದರು. ಉಪಾಧ್ಯಕ್ಷ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಮತವಿದ್ಯಾಭ್ಯಾಸ ಬೋರ್ಡಿನ ಪ್ರಧಾನ ಕಾರ್ಯದರ್ಶಿ ಕೋಟುಮಲ ಟಿ.ಎಂ. ಬಾಪು ಮುಸ್ಲಿಯಾರ್ ಸ್ವಾಗತಿಸಿದರು.

 ಸಯ್ಯದ್ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ, ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ ಕೂರಿಯಾಡ್, ಕೆ. ಉಮ್ಮರ್ ಫೈಝಿ ಮುಕ್ಕಂ, ಎಂ.ವಿ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಡಾ. ಎನ್.ಎ.ಎಂ. ಅಬ್ದುಲ್ ಖಾದಿರ್, ಕೆ. ಮುಹಮ್ಮದ್ ಫೈಝಿ ತಿರೂರ್‌ಕ್ಕಾಡ್, ಕೆ. ಮುಹಿನುದ್ದೀನ್ ಮಾಸ್ಟರ್, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವ್, ಕೆ. ಮೋಹಿನ್ ಕುಟ್ಟಿ ಮಾಸ್ಟರ್, ಅಡ್ವಕೇಟ್ ಓನಂಪಲ್ಲಿ ಮುಹಮ್ಮದ್ ಫೈಝಿ, ನಾಸರ್ ಫೈಝಿ ಕೂಡತ್ತಾಯಿ, ಪಿ.ಎ. ಜಬ್ಬಾರ್ ಹಾಜಿ, ಕೆ.ಎ. ಅಬ್ದುಲ್ಲ ಮಾಸ್ಟರ್ ಕೊಟ್ಟುಪ್ಪುರಂ, ಎಂ.ಎ. ಇಬ್ಬಿಚ್ಚಿಕ್ಕೋಯ ತಂಙಳ್, ಎಂ.ಎ. ಚೇಳಾರಿ, ರಶೀದ್ ಫೈಝಿ ವೆಳ್ಳಾಯಿಕ್ಕೋಡ್, ಪ್ರೊ. ಟಿ. ಅಬ್ದುಲ್ ಮಜೀದ್, ಅಡ್ವಕೇಟ್ ಮುಹಮ್ಮದ್ ತ್ವಯ್ಯಿಬ್ ಹುದವಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News