×
Ad

ಬೆಂಕಿಯಿಂದ ಮೂವರನ್ನು ರಕ್ಷಿಸಿದ ಮಹಿಳಾ ಅಗ್ನಿಶಾಮಕ ಅಧಿಕಾರಿ

Update: 2016-10-15 15:10 IST

ಚೆನ್ನೈ,ಅ.15: ವಿರುಗಂಬಕ್ಕಮ್‌ನ ಮಹಿಳಾ ಅಗ್ನಿಶಾಮಕ ಅಧಿಕಾರಿಯೋರ್ವರು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಮನೆಯೊಳಗೆ ನುಗ್ಗಿ ವೃದ್ಧ ದಂಪತಿ ಸೇರಿದಂತೆ ಮೂವರನ್ನು ಸಾವಿನ ದವಡೆಯಿಂದ ರಕ್ಷಿಸಿ ಸಾಹಸ ಮೆರೆದಿದ್ದಾರೆ.

ಶುಕ್ರವಾರ ಇಲ್ಲಿನ ರಾಮಪುರಮ್‌ನಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ವಕೀಲರಾಗಿರುವ ಪಾಲ್(37),ಅವರ ತಂದೆ ಪೌಲೊ(75) ಮತ್ತು ತಾಯಿ ಮೇರಿ(65) ಬದುಕುಳಿದಿರುವ ಅದೃಷ್ಟವಂತರು. ಬೆಳಗಿನ ಜಾವ ಈ ಮೂವರೂ ಗಾಢನಿದ್ರೆಯಲ್ಲಿದ್ದಾಗ ಮನೆಗೆ ಬೆಂಕಿ ಹತ್ತಿಕೊಂಡಿತ್ತು. ನೆರೆಕರೆಯವರು ಮೂವರನ್ನೂ ಎಬ್ಬಿಸಲು ಪ್ರಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಕ್ಷಣಾರ್ಧದಲ್ಲಿ ಇಡೀ ಮನೆಯನ್ನು ಬೆಂಕಿಯ ಜ್ವಾಲೆಗಳು ಆವರಿಸಿಕೊಂಡಿದ್ದವು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ವಿರುಗಂಬಕ್ಕಂ ಅಗ್ನಿಶಾಮಕ ಠಾಣೆಯ ಅಧಿಕಾರಿ ಮು ಆರೀಫಾ ಅವರು ಸಿಬ್ಬಂದಿಗಳೊದಿಗೆ ಸ್ಥಳಕ್ಕೆ ಧಾವಿಸಿದ್ದರು. ಎದುರಿನ ಗ್ರಿಲ್ ಮುರಿದು ಒಳನುಗ್ಗಿದಾಗ ಪೀಠೋಪಕರಣಗಳು ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳು ಹೊತ್ತಿ ಉರಿಯುತ್ತಿದ್ದವು. ಬೆಂಕಿ ಅಡುಗೆಮನೆಗೂ ಹಬ್ಬತೊಡಗಿತ್ತು. ಆರೀಫಾ ಸಿಬ್ಬಂದಿಗಳ ನೆರವಿನೊಂದಿಗೆ ಅಲ್ಲಿದ್ದ ಗ್ಯಾಸ್ ಸಿಲಿಂಡರ್‌ನ್ನು ಮೊದಲು ಹೊರಕ್ಕೆ ತಂದಿದ್ದರು.ಆರೀಫಾ ಬೆಂಕಿಯ ಜ್ವಾಲೆಗಳ ನಡುವೆಯೇ ಬೆಡ್ ರೂಮ್‌ಗೆ ನುಗ್ಗಿದಾಗ ಪೌಲೊ ದಂಪತಿಗಳು ಇನ್ನೂ ನಿದ್ರೆಯಲ್ಲಿಯೇ ಇದ್ದರು. ಅವರನ್ನು ಎಬ್ಬಿಸಿದಾಗ ಸಮವಸ್ತ್ರದವರನ್ನು ಕೋಣೆಯೊಳಗೆ ಕಂಡು ದಿಗ್ಭ್ರಮೆಗೊಂಡಿದ್ದರು. ಪಕ್ಕದ ಕೋಣೆಯಲ್ಲಿ ಮಲಗಿದ್ದ ಪಾಲ್‌ರನ್ನೂ ಎಬ್ಬಿಸಿ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತರುವಲ್ಲಿ ಆರೀಫಾ ಸಫಲರಾಗಿದ್ದಾರೆ. ಅವರ ಸಾಹಸಕ್ಕೆ ಸ್ಥಳೀಯರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News