×
Ad

ಗಾಯಾಳುವನ್ನು ಆಸ್ಪತ್ರೆಗೊಯ್ಯಲು ಈ ಮಹಿಳೆ ಮಾಡಿದ್ದೇನು ?

Update: 2016-10-15 19:22 IST

ಥಾಣೆ, ಅ.15: ರೈಲು ಅಪಘಾತವೊಂದರ ಸಂತ್ರಸ್ತನನ್ನು ಆಸ್ಪತ್ರೆಗೆ ಒಯ್ಯಲು ತನ್ನ ಸೀರೆಯನ್ನೇ ಸ್ಟ್ರೆಚರನ್ನಾಗಿ ಪರಿವರ್ತಿಸಿದ್ದ ಕಲ್ಯಾಣ್ ರೈಲ್ವೆ ಆಸ್ಪತ್ರೆಯ ಉದ್ಯೋಗಿಯೊಬ್ಬಳನ್ನು ಥಾಣೆಯ ಮೇಯರ್ ಸಂಜಯ್ ಮೋರೆ ಸನ್ಮಾನಿಸಿದ್ದಾರೆ.

ನಗರಪಾಲಿಕೆಯಲ್ಲಿ ನಿನ್ನೆ ನಡೆದ ಸಮಾರಂಭವೊಂದರಲ್ಲಿ ಮೇಯರ್, ಆ ಉದ್ಯೋಗಿಗೆ, ಶಾಲು, ತೆಂಗಿನ ಕಾಯಿ ಹಾಗೂ ಪ್ರಶಂಸಾ ಪತ್ರವನ್ನಿತ್ತು ಅಭಿನಂದಿಸಿದ್ದಾರೆ.

2016 ಸೆ.27ರಂದು ವಿಷ್ಣು ಕಿರಾಜಿ ಅಂದಾಳೆ ಎಂಬ ರೈಲ್ವೆ ನೌಕರನ ಮೇಲೆ ರೈಲು ಹರಿದು ಆತನ ಕಾಲುಗಳೆರಡೂ ತುಂಡಾಗಿದ್ದವು. ಗ್ಯಾಂಗ್‌ಮನ್ ಆಗಿದ್ದ ಆತ ಕೆಲಸದಲ್ಲಿ ನಿರತನಾಗಿದ್ದ ವೇಳೆ ವಾಶಿಂದ್ ರೈಲು ನಿಲ್ದಾಣದ ಬಳಿ ಈ ದುರಂತ ಸಂಭವಿಸಿತ್ತು. ಗಾಯಾಳು ನೌಕರ ನೋವಿನಿಂದ ಚಡಪಡಿಸುತ್ತ ಹಳಿಗಳ ಮೇಲೆಯೇ ಬಿದ್ದಿದ್ದನಾದರೂ, ಆತನ ರಕ್ಷಣೆಗೆ ಯಾರೂ ಮುಂದೆ ಬಂದಿರಲಿಲ್ಲ.

ಅಲ್ಲಿಂದ ಸಾಗುತ್ತಿದ್ದ ಕಲ್ಯಾಣ್ ರೈಲ್ವೆ ಆಸ್ಪತ್ರೆಯ ಸಿಬ್ಬಂದಿ ಮನೀಷಾ ಶಿಂಧೆ ಎಂಬವರಿಗೆ ಅಪಘಾತದ ಬಗ್ಗೆ ತಿಳಿಯಿತು. ಅವರು ಕಾಲ ವಿಳಂಬ ಮಾಡದೆ, ತನ್ನ ಸೀರೆಯನ್ನೇ ಸ್ಟ್ರೆಚರ್‌ನಂತೆ ಬದಲಾಯಿಸಿ ಅಂದಾಳೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು.

ಆದಾಗ್ಯೂ, ಗಾಯಾಳು ಚಿಕಿತ್ಸೆಯ ವೇಳೆ ಕೊನೆಯುಸಿರೆಳೆದಿದ್ದನು. ಆ ಸಂದರ್ಭ ರೈಲು ನಿಲ್ದಾಣದಲ್ಲಿ ಸ್ಟ್ರೆಚರ್ ಲಭ್ಯವಿರಲಿಲ್ಲವೆಂದು ಆರೋಪಿಸಲಾಗಿದೆ.

ಸೀರೆಯನ್ನು ಸ್ಟ್ರೆಚರ್ ಆಗಿ ಬದಲಾಯಿಸುವಲ್ಲಿ ಮನೀಷಾ ತೋರಿಸಿದ ಸಮಯಪ್ರಜ್ಞೆಗೆ ಬೆಲೆ ಕಟ್ಟಲಾಗದು. ಇದು ಸಮಾಜದ ಇತರ ಸದಸ್ಯರಿಗೆ ಮಾದರಿಯಾಗಬೇಕೆಂದು ಮೇಯರ್ ಸನ್ಮಾನ ಸಮಾರಂಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News