×
Ad

ಸಾರ್ವಜನಿಕ ಸ್ಮಶಾನದಲ್ಲಿ ದಲಿತ ವ್ಯಕ್ತಿಯ ಶವ ಸಂಸ್ಕಾರಕ್ಕೆ ವಿರೋಧ!

Update: 2016-10-15 19:27 IST

ಭುವನೇಶ್ವರ, ಅ.15: ಎಚ್‌ಐವಿ ವೈರಾಣುವಿಗೆ ಬಲಿಯಾದ ದಲಿತನೊಬ್ಬನ ಅಂತ್ಯಸಂಸ್ಕಾರವನ್ನು ಸಾರ್ವಜನಿಕ ಶ್ಮಶಾನದಲ್ಲಿ ನಡೆಸಲು ಸ್ಥಳೀಯರು ಆಕ್ಷೇಪಿಸಿದುದರಿಂದ ಆತನ ಮನೆಯೆದುರೇ ಅಂತಿಮಕ್ರಿಯೆ ನಡೆಸಬೇಕಾಯಿತು.

35ರ ಹರೆಯದ ಪ್ರಕಾಶ್ ಜೇನಾ (ಹೆಸರು ಬದಲಾಯಿಸಲಾಗಿದೆ) ಎಂಬ ಈ ವ್ಯಕ್ತಿಗೆ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎಚ್‌ಐವಿ ಸೋಂಕು ತಗಲಿತ್ತೆನ್ನಲಾಗಿದೆ. ಆರೋಗ್ಯ ಹದಗೆಡಲು ತೊಡಗಿದ ಬಳಿಕ ಆತ ಒಡಿಶಾದ ಬಾಲ್ಸೂರು ಜಿಲ್ಲೆಯ ಸೋರೊ ಬ್ಲಾಕ್‌ನ ತನ್ನ ತಂದೆಯ ಗ್ರಾಮಕ್ಕೆ ಮರಳಿ ಬಂದಿದ್ದನು. ಜೇನಾನನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಶುಕ್ರವಾರ ಕೊನೆಯುಸಿರೆಳೆದಿದ್ದನು.

ಜೇನಾನ ಮೃತದೇಹವನ್ನು ಹಂಸಿಯಾನಿಪಾಡದ ಸಾರ್ವಜನಿಕ ಶ್ಮಶಾನಕ್ಕೆ ಒಯ್ಯಲು ಕುಟುಂಬಿಕರು ಯೋಚಿಸಿದಾಗ, ಅವರು ಅಲ್ಲಿಗೆ ಹೋಗಬಾರದೆಂದು ಗ್ರಾಮಸ್ಥರು ತಡೆದರು.

ತಾವು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದೆವಾದರೂ, ಅವರು ಕಿವಿಗೊಡಲಿಲ್ಲ. ಎಚ್‌ಐವಿಗೆ ಬಲಿಯಾದವನ ಅಂತ್ಯಕ್ರಿಯೆಯನ್ನು ಸಾರ್ವಜನಿಕ ರುದ್ರಭೂಮಿಯಲ್ಲಿ ಮಾಡಬಾರದೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಅನಿವಾರ್ಯವಾಗಿ ಮೃತನ ಮನೆಯ ಮುಂದೆಯೇ ಚಿತೆಯನ್ನು ನಿರ್ಮಿಸಬೇಕಾಯಿತೆಂದು ಸೋರೊ ಪೊಲೀಸ್ ಠಾಣೆಯ ನಿರೀಕ್ಷಕ ಕಾರ್ತಿಕ್ ಮಲಿಕ್ ತಿಳಿಸಿದ್ದಾರೆ.

ಮೃತನ ಪತ್ನಿಯೂ ಎಚ್‌ಐವಿ ಪೀಡಿತಳಾಗಿದ್ದು, ಅವರ ಒಂದು ಮಗುವೂ ಕಾಯಿಲೆಗೆ ಬಲಿಯಾಗಿತ್ತೆನ್ನಲಾಗಿದೆ.

ಎಚ್‌ಐವಿ ಪೀಡಿತರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಎಚ್‌ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ-2014ರ ತಿದ್ದುಪಡಿಗಳಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ಕೆಲವೇ ದಿನಗಳಲ್ಲಿ ಮೃತ ಎಚ್‌ಐವಿ ಪೀಡಿತನ ವಿರುದ್ಧ ತಾರತಮ್ಯದ ಈ ಪ್ರಕರಣ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News