ನೋಡ್ತಾ ಇರಿ...ಆರೆಸ್ಸೆಸ್‌ನೋರು ಮೂಗಲ್ಲಿ ಮಕ್ಕಳು ಹುಟ್ಟಿಸ್ತಾರೆ...!

Update: 2016-10-16 07:14 GMT

ವಿಶ್ವದ ಎಲ್ಲವೂ ಮೊತ್ತ ಮೊದಲು ಘಟಿಸಿದ್ದು ಭಾರತದಲ್ಲಿ ಎನ್ನುವುದು ಪತ್ರಕರ್ತ ಕಾಸಿಯವರಿಗೆ ಮನವರಿಕೆಯಾಯಿತು. ‘ಮೊತ್ತ ಮೊದಲ ಸರ್ಜಿಕಲ್ ಸ್ಟ್ರೈಕ್‌ನ್ನು ಮಾಡಿದವರು ಹನುಮಂತ. ಲಂಕಾದಹನದ ಮೂಲಕ. ಹಾಗೆಯೇ ಭಯೋತ್ಪಾದಕರ ವಿರುದ್ಧ ಮೊತ್ತ ಮೊದಲು ಹೋರಾಡಿದ್ದು ಜಟಾಯು. ರಾವಣನನ್ನು ತಡೆಯುವ ಮೂಲಕ ಆತ ಪ್ರಾಣವನ್ನು ಅರ್ಪಿಸಿದ’ ಎಂದೆಲ್ಲ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಶೋಧನೆಯನ್ನು ಇತ್ತೀಚೆಗೆ ವಿಜಯದಶಮಿ ಸಮಾರಂಭದಲ್ಲಿ ವಿಶ್ವದ ಮುಂದಿಟ್ಟಿರುವುದರಿಂದ ಆತ ರೋಮಾಂಚನಗೊಂಡ. ಹಾಗಾದರೆ ಇನ್ನುಳಿದ ಬೇರೆ ಬೇರೆ ಮೊತ್ತಮೊದಲುಗಳು ಭಾರತದಲ್ಲಿ ಯಾವಾಗ ಹೇಗೆ ಸಂಭವಿಸಿದವು ಎನ್ನುವುದರ ವಿವರಗಳನ್ನು ತಿಳಿಯಲು ಆತ ಹನುಮಂತನಂತೆ ಅನಿಲ್ ಅಂಬಾನಿಯವರ ಮನೆಗೆ ಧಾವಿಸಿದ. ಅವರ ನಿವಾಸದ ಬಾಲ್ಕನಿಯಲ್ಲಿ ಕುಳಿತು ನರೇಂದ್ರ ಮೋದಿಯವರು ಅದ್ಯಾವುದೋ ಹೊಸ ಭಾಷಣಕ್ಕೆ ಸಿದ್ಧತೆ ನಡೆಸುತ್ತಿದ್ದರು. ಪತ್ರಕರ್ತ ಎಂಜಲು ಕಾಸಿ ಅವರ ಮುಂದೆ ಕುಕ್ಕರಿಸಿ ‘‘ಸಾರ್, ವಿಶೇಷ ಆರ್ಥಿಕ ವಲಯ, ಸೆಝ್ ಮೊತ್ತ ಮೊದಲು ಆರಂಭವಾದದ್ದು ಎಲ್ಲಿ ?’’ ಎಂದು ಕೇಳಿದ.
ಮೋದಿಯವರು ತನ್ನ ಇತಿಹಾಸದ ಪುಸ್ತಕವನ್ನು ಬಿಡಿಸಿ ಹೇಳಿದರು ‘‘ನೋಡ್ರಿ ಮೊತ್ತ ಮೊದಲು ಜಾಗತೀಕರಣ ಆರಂಭವಾದುದೇ ಭಾರತದಲ್ಲಿ. ಅದೂ ಸಹಸ್ರಾರು ವರ್ಷಗಳ ಹಿಂದೆ. ಪಾಂಡವರು ತಮ್ಮ ನಗರವನ್ನು ನಿರ್ಮಾಣ ಮಾಡುವುದಕ್ಕಾಗಿ ಖಾಂಡವ ದಹನ ಮಾಡಿದರಲ್ಲ...ಅದೇ ಮೊತ್ತ ಮೊದಲ ಸೆಝ್ ಭೂಮಿ ಒತ್ತುವರಿ. ಇಡೀ ಕಾಡಿಗೆ ಬೆಂಕಿ ಕೊಟ್ಟು ಅಲ್ಲಿರುವವರನ್ನೆಲ್ಲ ಓಡಿಸಿ, ಪ್ರಾಣಿ, ಪಕ್ಷಿ, ಕಾಡು ಎಲ್ಲವನ್ನೂ ನಾಶ ಮಾಡಿ ಅದರಲ್ಲಿ ಇಂದ್ರಪ್ರಸ್ಥ ಎನ್ನುವ ವಿಶೇಷ ಆರ್ಥಿಕ ವಲಯವನ್ನು ನಿರ್ಮಾಣಮಾಡಿದರು...’’
‘‘ಅಂದರೆ ಸೆಝ್ ಮಹಾಭಾರತದ ಕಾಲದಲ್ಲೇ ನಿರ್ಮಾಣವಾಯಿತು ಎನ್ನುತ್ತೀರಾ?’’ ಕಾಸಿ ಅಚ್ಚರಿಯಿಂದ ಕೇಳಿದರು.
‘‘ನೋಡ್ರಿ. ಇಡೀ ವಿಶ್ವದ ಜನರು ಮಹಾಭಾರತವನ್ನು ಓದಿಯೇ ವಿಶೇಷ ಆರ್ಥಿಕವಲಯಗಳನ್ನು ಸ್ಥಾಪಿಸಲು ಆರಂಭಿಸಿದರು. ಹಳ್ಳಿಗಳು, ಕಾಡುಗಳು, ರೈತರು ಇವರ ಬದುಕಿಗೆ ಬೆಂಕಿ ಕೊಟ್ಟು ಅಲ್ಲಿ ಸೆಝ್ ಸ್ಥಾಪಿಸುವುದಕ್ಕೆ ಐಡಿಯಾ ಕೊಟ್ಟದ್ದೇ ಭಾರತ. ಆದರೆ ದುರದೃಷ್ಟವಶಾತ್, ಇಂದು ಭಾರತದಲ್ಲೇ ಸೆಝ್‌ನಂತಹ ಆರ್ಥಿಕ ಯೋಜನೆಗಳಿಗೆ ವಿರೋಧಗಳು ಕೇಳಿ ಬರುತ್ತಿವೆ. ಇಂತಹ ವಿರೋಧಗಳು ಭಾರತೀಯ ಪರಂಪರೆಗೆ ಮಾಡುವ ವಿರೋಧವಾಗಿದೆ. ಆದುದರಿಂದ ಅವರನ್ನು ಹಿಂದೂ ಸಂಸ್ಕೃತಿಯ ವಿರೋಧಿಗಳೆಂದೂ ನಾವು ಕರೆಯಬೇಕು. ದೇಶದ ಮೂಲೆಮೂಲೆಗಳಲ್ಲಿರುವ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಅಲ್ಲಿರುವವರ ಬದುಕಿಗೆ ಬೆಂಕಿ ಕೊಟ್ಟು ಇನ್ನಷ್ಟು ಇಂದ್ರಪ್ರಸ್ಥಗಳನ್ನು ನಿರ್ಮಾಣ ಮಾಡಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವುದು ನನ್ನ ಗುರಿ...’’ ಮೋದಿ ಗಡ್ಡ ಸವರಿ ಹೇಳಿದರು.
‘‘ಸಾರ್, ಮೊತ್ತ ಮೊದಲು ಚಂದ್ರನೆಡೆಗೆ ಕಾಲಿಟ್ಟದ್ದು...’’ ಕಾಸಿ ಪೂರ್ತಿ ಮಾಡುವ ಮೊದಲೇ ಮೋದಿ ಶುರು ಹಚ್ಚಿದರು.
‘‘ಏನ್ರೀ ಇದು...ಚಂದ್ರನೆಡೆಗೆ ಕಾಲಿಡುವುದು ಏನು ಬಂತು.... ಮೊತ್ತ ಮೊದಲು ಚಂದ್ರನೆಡೆಗೆ ಉಪಗ್ರಹ, ನೌಕೆಗಳನ್ನು ಕಳುಹಿಸಿರುವುದು ವಿದೇಶಿಯರಲ್ಲ. ಭಾರತೀಯರೇ ಆಗಿದ್ದಾರೆ. ಭಾರತೀಯ ಗ್ರಂಥಗಳಲ್ಲಿ ಹೇಳಿಲ್ಲವೆ....ತನ್ನ ದಂತವನ್ನು ಮುರಿದು ಚಂದ್ರನೆಡೆಗೆ ಎಸೆದದ್ದು. ಅದು ಬರೇ ದಂತವಾಗಿರಲಿಲ್ಲ. ಭೂಮಿಯಿಂದ ಚಂದ್ರನೆಡೆಗೆ ಕಳುಹಿಸಿದ ಮೊತ್ತ ಮೊದಲ ಉಪಗ್ರಹವಾಗಿತ್ತು. ಅದೆಲ್ಲ ಇರಲಿ....ಚಂದ್ರ, ಸೂರ್ಯ ಇವೆಲ್ಲದರ ಜೊತೆಗೆ ನಮಗೆ ಸಂಬಂಧಗಳು ಇರುವುದನ್ನು ಪುರಾಣಗಳೇ ಹೇಳುತ್ತವೆ. ನಮ್ಮ ನಡುವೆ ವ್ಯಾಪಾರ ಸಂಬಂಧಗಳೂ ಇದ್ದವು. ಅನ್ಯಗ್ರಹಗಳಿಂದ ಇಲ್ಲಿಗೆ, ಇಲ್ಲಿಂದ ಅನ್ಯಗ್ರಹಗಳಿಗೆ ಜನರು ಸುಲಭವಾಗಿ ವೀಸಾಗಳಿಲ್ಲದೆ ಹೋಗಿ ಬರುತ್ತಿದ್ದರು. ಆದರೆ ನಾವು ನಮ್ಮ ಪರಂಪರೆಯನ್ನು ಇಂದು ಮರೆತಿದ್ದೇವೆ. ಅದನ್ನೆಲ್ಲ ಓದಿಕೊಂಡು ಈಗ ವಿದೇಶಿಯರು ಚಂದ್ರನಿಗೆ ಉಪಗ್ರಹಗಳನ್ನು ಕಳುಹಿಸುತ್ತಿದ್ದಾರೆ. ಅನ್ಯಗ್ರಹದ ಜೊತೆಗೆ ನಾವು ಕಡಿದುಕೊಂಡಿರುವ ಸಂಪರ್ಕವನ್ನು ಬೇಗನೇ ಪಡೆದುಕೊಳ್ಳಲಿದ್ದೇವೆ. ಅದಕ್ಕಾಗಿ ನಾನು ಈಗಾಗಲೇ ಹಲವು ವೈದಿಕ ವಿದ್ವಾಂಸರನ್ನು ಸಂಪರ್ಕಿಸಿದ್ದೇನೆ. ಹಿಂದಿನಂತೆ ಮತ್ತೆ ಸುಲಭದಲ್ಲಿ ನಾವು ಅನ್ಯಗ್ರಹವಾಸಿಗಳ ಜೊತೆಗೆ ವ್ಯಾಪಾರ ವಹಿವಾಟುಗಳನ್ನು ಮಾಡಲಿದ್ದೇವೆ...’’ ಮೋದಿ ಭರವಸೆ ನೀಡಿದರು. ‘‘ಸಾರ್...ಮೊತ್ತ ಮೊದಲ ಟಿವಿ ಕಂಡು ಹಿಡಿದಿರುವುದು...’’ ಕಾಸಿ ಕುತೂಹಲದಿಂದ ಕೇಳಿದ.
ಮೋದಿ ಪತ್ರಕರ್ತ ಕಾಸಿಯ ಹೆಗಲಿಗೆ ಕೈ ಇಟ್ಟು ಹೇಳಿದರು ‘‘ನೋಡ್ರಿ...ಟಿ.ವಿ. ತಂತ್ರಜ್ಞಾನದ ಮೂಲವೇ ಮಹಾಭಾರತವಾಗಿದೆ. ಪಾಶ್ಚಿಮಾತ್ಯ ಜಗತ್ತು ಇನ್ನೂ ಹುಟ್ಟಿಯೇ ಇರದ ಸಂದರ್ಭದಲ್ಲಿ ನಾವು ಬೃಹತ್ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಯುದ್ಧ ಮಾಡುವಷ್ಟು ಸಮರ್ಥರಿದ್ದೆವು. ಕಳೆದ ಕಾರ್ಗಿಲ್ ಯುದ್ಧವನ್ನು ಹಲವು ಟಿವಿ ವಾಹಿನಿಗಳು ವರದಿ ಮಾಡಿಕೊಂಡು ಟಿಆರ್‌ಪಿ ಗಿಟ್ಟಿಸಿದವು. ಆದರೆ ಮೊದಲ ಯುದ್ಧರಂಗದ ಪತ್ರಕರ್ತ ಸಂಜಯ....’’
‘‘ಅದು ಯಾವ ಚಾನೆಲ್ ಪತ್ರಕರ್ತ ಸಾರ್?’’ ಕಾಸಿ ಬೆಚ್ಚಿ ಬಿದ್ದು ಕೇಳಿದ.
 ‘‘ನೋಡ್ರಿ...ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆಯುತ್ತಿತ್ತಲ್ಲ. ಧೃತರಾಷ್ಟ್ರ ಕುರುಡ. ಅವನಿಗೆ ಯುದ್ಧಭೂಮಿಯ ಸನ್ನಿವೇಶವನ್ನೆಲ್ಲ ವಿವರಿಸಿದ್ದು ಸಂಜಯ. ಆದರೆ ಸಂಜಯ ಎನ್ನುವುದು ಮಹಾಭಾರತದ ಕಾಲದ ಟಿವಿ ಚಾನೆಲ್ ಹೆಸರು. ಆಗಲೇ ಭಾರತದಲ್ಲಿ ಟಿವಿ ಕಂಡು ಹಿಡಿದಿರುವುದು ಮತ್ತು ಸಾಕಷ್ಟು ಸುದ್ದಿ ಚಾನೆಲ್‌ಗಳು ಕೆಲಸ ಮಾಡುತ್ತಿದ್ದವು. ಅಂತಹ ಚಾನೆಲ್‌ಗಳಲ್ಲಿ ಒಂದಾಗಿರುವ ಸಂಜಯ್ ಚಾನೆಲ್‌ಗಳ ಮೂಲಕ, ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ವಿವರಗಳನ್ನು ‘ಬ್ರೇಕಿಂಗ್ ನ್ಯೂಸ್’ಗಳಾಗಿ ಬಿಸಿಬಿಸಿಯಾಗಿ ದೊರಕುತ್ತಿದ್ದವು....’’
‘‘ಸಾರ್...ಈ ಚಾನೆಲ್‌ಗಳು ಖಾಸಗಿ ಚಾನೆಲ್ ಅಥವಾ ಸರಕಾರಿ ಚಾನೆಲ್‌ಗಳಾಗಿದ್ದವೋ...’’ ಕಾಸಿ ಇನ್ನಷ್ಟು ಕುತೂಹಲದಿಂದ ಕೇಳಿದ.
‘‘ನೋಡ್ರಿ...ನಾರದ ಚಾನೆಲ್ ಅಧಿಕೃತ ದೇವತೆಗಳ ಚಾನೆಲ್ ಆಗಿತ್ತು. ಅಂದರೆ ಕೇವಲ ಅಂತಾರಾಷ್ಟ್ರೀಯ ಚಾನೆಲ್ ಅಲ್ಲ, ಅನ್ಯಗ್ರಹಗಳ ಸುದ್ದಿಗಳನ್ನೂ ಈ ಚಾನೆಲ್ ನೀಡುತ್ತಿತ್ತು. ಸಂಜಯ್ ಚಾನೆಲ್ ದೃತರಾಷ್ಟ್ರನೇ ಹಣ ಹೂಡಿರುವ ಖಾಸಗಿ ಚಾನೆಲ್ ಆಗಿತ್ತು...ನಾರದ ಚಾನೆಲ್ ಕೌಟುಂಬಿಕ ಜಗಳಗಳನ್ನೆಲ್ಲ ರಸವತ್ತಾಗಿ ಹಂಚುತ್ತಿತ್ತು. ಈಗಿನ ಚಾನೆಲ್‌ಗಳಂತೆ ಇಬ್ಬರು ರಾಜಕಾರಣಿಗಳ ನಡುವೆ ಜಗಳ ಬಿತ್ತುವುದಕ್ಕೆ ಹೆಸರುವಾಸಿಯಾದ ಚಾನೆಲ್ ಆಗಿತ್ತು....ಈ ಎಲ್ಲ ಚಾನೆಲ್‌ಗಳನ್ನು ಅಧ್ಯಯನ ಮಾಡಿದ ಬಳಿಕವೇ ವಿದೇಶಗಳಲ್ಲಿ ಸುದ್ದಿಚಾನೆಲ್‌ಗಳು ಹುಟ್ಟಿದವು. ಆದರೆ ನಾವೆಲ್ಲ ಇವುಗಳನ್ನು ಮರೆತು ಬಿಟ್ಟಿದ್ದೇವೆ...ಇದು ಭಾರತದ ದುರಂತ...’’ ಎಂದು ವಿಷಾದನೀಯ ಧ್ವನಿಯಿಂದ ಹೇಳಿದರು.
‘‘ಸಾರ್...ಇನ್ನು ಯಾವ ಯಾವ ಸಂಶೋಧನೆಗಳು...’’ ಎಂದು ಕೇಳುತ್ತಿರುವಂತೆಯೇ ಪಟ್ಟಿಯನ್ನು ತೆರೆದಿಡತೊಡಗಿದರು.
‘‘ನೋಡ್ರಿ....ಪ್ರಣಾಳ ಶಿಶು ಸಂಶೋಧನೆಗೆ ಕಾರಣವೇ ಭಾರತ. ಭಾರತದಲ್ಲೇ ಮೊತ್ತ ಮೊದಲ ಪ್ರಣಾಳ ಶಿಶು ಹುಟ್ಟಿಕೊಂಡಿತು. ಗಾಂಧಾರಿಯ ಹೊಟ್ಟೆಯಿಂದ ಬಿದ್ದ ಪಿಂಡಗಳನ್ನು ಭರಣಿಯಲ್ಲಿಟ್ಟು ಹೊರತೆಗೆದಾಗ ನೂರು ಮಕ್ಕಳು ಹುಟ್ಟಿದರು. ಇದುವೇ ವಿಶ್ವದ ಮೊತ್ತ ಮೊದಲ ಪ್ರಣಾಳ ಶಿಶು. ನಮ್ಮ ವಿಜ್ಞಾನಿಗಳು ಅದೆಷ್ಟು ಶ್ರೇಷ್ಠರಿದ್ದರೆಂದರೆ ಮರದ ಎಲೆಯ ದೊಣ್ಣೆಯಲ್ಲಿ ಮಗುವನ್ನು ಹುಟ್ಟಿಸಿ ಅವನಿಗೆ ದ್ರೋಣ ಎಂದು ಹೆಸರಿಟ್ಟರು. ಮಹಾಭಾರತದ ಮಹಾಗುರು ದ್ರೋಣ ಹುಟ್ಟಿದ್ದು ಹೀಗೆ. ಹಾಗೆಯೇ ಅದೆಷ್ಟೋ ಋಷಿಗಳು ಹೆಂಡತಿಯಿಲ್ಲದೆಯೇ ಮಕ್ಕಳನ್ನು ಹುಟ್ಟಿಸುತ್ತಿದ್ದರು...’’
‘‘ಬಹುಶಃ ಈ ಕಾರಣಕ್ಕಾಗಿ ಆರೆಸ್ಸೆಸ್‌ನ ನಾಯಕರು ಮದುವೆಯಾಗದೆಯೇ ಮಕ್ಕಳು ಹುಟ್ಟಿಸಿ ಎಂದು ಹಿಂದೂಗಳಿಗೆ ಕರೆ ನೀಡುತ್ತಿದ್ದಾರೆಯೇ?’’ ಕಾಸಿ ಮುಗ್ಧನಂತೆ ಕೇಳಿದ.
‘‘ನೋಡ್ರಿ...ಮಕ್ಕಳಾಗುವುದಕ್ಕೆ ಮದುವೆಯಾಗಬೇಕಾಗಿಲ್ಲ ಎನ್ನುವ ಅಂಶವನ್ನು ಮಹಾಭಾರತ ಓದಿ ಆರೆಸ್ಸೆಸ್‌ನೋರು ತಿಳಿದುಕೊಂಡಿದ್ದಾರೆ. ಆದುದರಿಂದ ಅವರು ಮದುವೆಯಾಗಲಿಲ್ಲ ಎನ್ನುವ ಕಾರಣಕ್ಕಾಗಿ, ಮಕ್ಕಳು ಮಾಡಲು ಅಸಮರ್ಥರು ಎಂದು ಅರ್ಥವಲ್ಲ. ಪುರಾಣದಲ್ಲಿ ಮದುವೆಯಾಗದೆಯೇ ಋಷಿಮುನಿಗಳ ಮೂಗಿನಲ್ಲಿ, ಕಿವಿಯಲ್ಲಿ ಮಕ್ಕಳು ಹುಟ್ಟಿದ ಉದಾಹರಣೆಗಳಿವೆ. ಹಿಂದೂಧರ್ಮವನ್ನು ಉಳಿಸುವುದಕ್ಕಾಗಿ ನಮ್ಮ ಭಾರತದ ಸನ್ಯಾಸಿನಿಯರು, ಆರೆಸ್ಸೆಸ್‌ನ ಬ್ರಹ್ಮಚಾರಿ ಮುಖಂಡರು ಮುಂದೊಂದು ದಿನ ತಮ್ಮ ಮೂಗಿನಲ್ಲಿ, ಕಿವಿಯಲ್ಲಿ ಮಕ್ಕಳನ್ನು ಹುಟ್ಟಿಸಿ ಇಡೀ ಹಿಂದೂದೇಶದ ಕುರಿತಂತೆ ವಿಶ್ವ ಬೆರಗಾಗುವಂತೆ ಮಾಡಲಿದ್ದಾರೆ....’’ ಮೋದಿ ಭವಿಷ್ಯ ನುಡಿದರು. ‘‘ಸಾರ್...ದುಷ್ಯಂತ-ಶಕುಂತಳಾ ಪುರಾಣ ಕತೆಯ ಬಗ್ಗೆ ಏನನ್ನಿಸುತ್ತದೆ?’’ ಕಾಸಿ ಮೆಲ್ಲಗೆ ಪ್ರಶ್ನಿಸಿದ.
‘‘ಅದರಲ್ಲೇನಿದೆ?’’ ಮೋದಿ ಕೇಳಿದರು.
‘‘ಸಾರ್...ವಿಶ್ವದಲ್ಲೇ ಹೆಂಡತಿಯನ್ನು ಮದುವೆಯಾಗಿ ದೂರ ಮಾಡಿದ ಮೊದಲ ದೊರೆ ದುಷ್ಯಂತ ಸಾರ್...ಆ ಕೀರ್ತಿಯೂ ಭಾರತಕ್ಕೇ ಸೇರುತ್ತದೆ. ನಿಮ್ಮಂತೆಯೇ ಅವನೂ ಹೆಂಡತಿಯನ್ನು ಅರ್ಧದಲ್ಲೇ ಕೈ ಬಿಟ್ಟಿದ್ದ ಸಾರ್....’’ ಕಾಸಿ ಹೇಳಿದ್ದೇ...‘‘ಸರ್ಜಿಕಲ್ ಸ್ಟ್ರೈಕ್...ಸರ್ಜಿಕಲ್ ಸ್ಟ್ರೈಕ್....’’ ಎಂದು ನರೇಂದ್ರ ಮೋದಿ ಅಬ್ಬರಿಸತೊಡಗಿದರು.
ಎಂಜಲು ಕಾಸಿ ಹೆದರಿ ಕಂಗಾಲಾದವನು....ನೇರವಾಗಿ ರಾಮಾಯಣದ ಪುಷ್ಪಕಾವಿಮಾನ ಏರಿ, ಬೆಂಗಳೂರು ತಲುಪಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News