ಪಾಕಿಸ್ತಾನವು ಭಯೋತ್ಪಾದನೆಯನ್ನು ಸರಕಾರಿ ನೀತಿಯನ್ನಾಗಿ ಮಾಡಿಕೊಂಡಿದೆ:ರಾಜನಾಥ್

Update: 2016-10-17 09:56 GMT

ಚಂಡಿಗಡ,ಅ.17: ಚೀನಾದೊಂದಿಗೆ ಭಿನ್ನಾಭಿಪ್ರಾಯಗಳಿದ್ದರೂ ಅದರೊಡಭಾರತದ ಸಂಬಂಧವು ಬಲಗೊಂಡಿದೆ,ಆದರೆ ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ಸರಕಾರಿ ನೀತಿಯಾಗಿ ಅಳವಡಿಸಿಕೊಳ್ಳುವ ಮೂಲಕ ತನ್ನನ್ನು ತಾನು ಮೂಲೆಗುಂಪು ಮಾಡಿಕೊಂಡಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಇಂದಿಲ್ಲಿ ಹೇಳಿದರು.

ಚಂಡಿಗಡದಲ್ಲಿ ಎರಡು ದಿನಗಳ ‘ಪ್ರಾದೇಶಿಕ ಸಂಪಾದಕರ ಸಮ್ಮೇಳನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಭಾರತ ಮತ್ತು ಚೀನಾ ನಡುವೆ ಗಡಿಗಳ ಕುರಿತು ಕೆಲವು ಭಿನ್ನಾಭಿಪ್ರಾಯಗಳಿವೆಯಾದರೂ ಅತಿಕ್ರಮಣದ ಘಟನೆಗಳು ಕಡಿಮೆ ಯಾಗಿವೆ. ಇನ್ನೊಂದೆಡೆ ಪಾಕಿಸ್ತಾನವು ತನ್ನದೇ ತಪ್ಪುಗಳಲ್ಲಿ ತೊಳಲಾಡುತ್ತಿದೆ ಎಂದರು.

ಭಯೋತ್ಪಾದಕರು ಮತ್ತು ಸ್ವಾತಂತ್ರ ಹೋರಾಟಗಾರರ ನಡುವಿನ ವ್ಯತ್ಯಾಸವನ್ನು ಪಾಕಿಸ್ತಾನವು ಮರೆತಿದೆ. ಭಾರತದಲ್ಲಿಯ ಹೆಚ್ಚಿನ ಭಯೋತ್ಪಾದನೆ ಗಡಿಯಾಚೆಯಿಂದ ಪ್ರಾಯೋಜಿತವಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟದ ಬಗ್ಗೆ ಪಾಕಿಸ್ತಾನವು ಗಂಭೀರವಾಗಿದ್ದರೆ ಭಯೋತ್ಪಾದನೆಯನ್ನು ಅಳಿಸಿ ಹಾಕುವಲ್ಲಿ ಅದಕ್ಕೆ ನೆರವಾಗಲು ನಾವು ಸಿದ್ಧರಿದ್ದೇವೆ. ಆದರೆ ಅವರ ಉದ್ದೇಶ ಅದಲ್ಲ ಎಂದು ಸಿಂಗ್ ಕಳೆದ ತಿಂಗಳ ಉರಿ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿ ಹೇಳಿದರು.

ಗಡಿಯಾಚೆಯ ಭಯೋತ್ಪಾದನೆಯ ವಿರುದ್ಧ ಸುರಕ್ಷತಾ ಕ್ರಮವಾಗಿ ಪಾಕಿಸ್ತಾನ ದೊಂದಿಗಿನ ಗಡಿಯನ್ನು 2018,ಡಿಸೆಂಬರ್‌ನಿಂದ ಮುಚ್ಚಲಾಗುವುದು ಎಂದು ಅವರು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News