ರೋಹಿತ್ ವೇಮುಲಾ ದಲಿತ ಎಂಬುದಕ್ಕೆ ಮತ್ತೊಂದು ಪ್ರಬಲ ಪುರಾವೆ

Update: 2016-10-17 10:36 GMT

ಹೈದರಾಬಾದ್, ಅ.17: ‘‘ನನ್ನ ಹೆಸರು ರೋಹಿತ್ ವೇಮುಲಾ. ನಾನು ಗುಂಟೂರಿನಿಂದ ಬಂದವು. ನಾನು ಒಬ್ಬ ದಲಿತ’’ ಹೀಗೆಂದು ಆತ್ಮಹತ್ಯೆಗೈದಿರುವ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಹೇಳಿರುವ ವೀಡಿಯೋವೊಂದು ಈಗ ಹೊರಬಿದ್ದಿದೆ. ವಿಶ್ವವಿದ್ಯಾಲಯದ ಹಾಸ್ಟೆಲ್ ನಿಂದ ಅವರನ್ನು ಹೊರ ಹಾಕಿದ ನಂತರದ ವೀಡಿಯೋ ಇದಾಗಿದೆಯೆನ್ನಲಾಗಿದೆ. ತನ್ನ ಮೇಲೆ ವೇಮುಲಾ ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಕೆಲ ಸದಸ್ಯರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿ ನಾಯಕನೊಬ್ಬ ಕಳೆದ ವರ್ಷದ ಆಗಸ್ಟ್ ನಲ್ಲಿ ನೀಡಿದ ದೂರಿನನ್ವಯ ವಿಶ್ವವಿದ್ಯಾನಿಲಯದ ಆಡಳಿತ 26 ವರ್ಷದ ವೇಮುಲಾರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರನ್ನು ಹಾಸ್ಟೆಲ್ ನಿಂದ ಹೊರ ಹಾಕಿದ ನಂತರ ಈ ವರ್ಷದ ಜನವರಿ 17ರಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಎಬಿವಿಪಿಯೊಂದಿಗೆ ಜಗಳಗಳು ಹೊಸತೇನಲ್ಲ ಹಾಗೂ ತನ್ನನ್ನು 2012ರಲ್ಲಿ ಒಂದೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿಡಲಾಗಿತ್ತು ಎಂದು ವೇಮುಲಾ ವೀಡಿಯೋದಲ್ಲಿ ಹೇಳಿದ್ದಾರೆ.
ವೀಡಿಯೋದಲ್ಲಿ ವೇಮುಲಾ ತಾನೊಬ್ಬ ದಲಿತನೆಂದು ಹೇಳಿಕೊಂಡಿದ್ದರೂ ಅವರ ಸಾವಿನ ನಂತರ ಏಕ ಸದಸ್ಯ ನ್ಯಾಯಾಂಗ ಆಯೋಗದಿಂದ ನಡೆಸಲಾದ ತನಿಖೆಯಲ್ಲಿ ಆತ ನಿಜವಾಗಿಯೂ ದಲಿತನಾಗಿರಲಿಲ್ಲ ಹಾಗೂ ಆತನ ತಾಯಿ ಕೇವಲ ಜಾತಿ ಪ್ರಮಾಣಪತ್ರ ಪಡೆಯುವ ಸಲುವಾಗಿ ತಾನೊಬ್ಬ ದಲಿತಳೆಂದು ಹೇಳಿಕೊಂಡಿದ್ದಳು ಹಾಗೂ ವೇಮುಲಾನನ್ನು ವಿಶ್ವವಿದ್ಯಾನಿಲಯದಿಂದ ಹೊರ ಹಾಕಿದ ಕ್ರಮದಲ್ಲಿ ವಿಶ್ವವಿದ್ಯಾನಿಲಯದ ತಪ್ಪೇನೂ ಇಲ್ಲವೆಂದು ಹೇಳಿತ್ತು. ಸುಮಾರು 50 ಮಂದಿ ಆಯೋಗದ ಮುಂದೆ ಸಾಕ್ಷ್ಯ ನುಡಿದಿದ್ದರೂ ಅವರಲ್ಲಿ ಹೆಚ್ಚಿನವರು ವಿಶ್ವವಿದ್ಯಾನಿಲಯದವರೇ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News