×
Ad

ಮೂರು ತಿಂಗಳಲ್ಲಿ ತನಿಖೆ ಮುಗಿಸಲು:ಸಿಬಿಐಗೆ ಸುಪ್ರೀಂ ತಾಕೀತು

Update: 2016-10-17 16:37 IST

ಹೊಸದಿಲ್ಲಿ.ಅ.17:ಬಿಹಾರದ ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಸಿಬಿಐಗೆ ನಿರ್ದೇಶ ನೀಡಿದೆ.

ಆರೋಪ ಪಟ್ಟಿಯನ್ನು ಸಲ್ಲಿಸಲಾಗಿಲ್ಲ ಎಂಬ ಕಾನೂನು ಕಾರಣದಿಂದ ಪ್ರಕರಣದ ಆರೋಪಿಗಳು ಜಾಮೀನು ಕೋರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ್ ರಾಯ್ ಅವರ ಪೀಠವು ಸ್ಪಷ್ಟಪಡಿಸಿತು.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಾದ ಮೊಹಮ್ಮದ್ ಕೈಫ್ ಮತ್ತು ಮೊಹಮ್ಮದ್ ಜಾವೇದ್ ಅವರು ಬಿಹಾರದ ಆರೋಗ್ಯ ಸಚಿವ ತೇಜ್ ಪ್ರತಾಪ ಯಾದವ ಮತ್ತು ವಿವಾದಾತ್ಮಕ ಆರ್‌ಜೆಡಿ ನಾಯಕ ಶಹಾಬುದ್ದೀನ್ ಜೊತೆ ಕಾಣಿಸಿಕೊಂಡಿದ್ದ ದಿನ ಅವರು ತಲೆಮರೆಸಿಕೊಂಡಿರುವ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದರೇ ಎನ್ನುವುದನ್ನು ತಿಳಿಸುವಂತೆ ಪೀಠವು ಸಿವಾನ್‌ನ ಸೆಶನ್ಸ್ ನ್ಯಾಯಾಧೀಶರಿಗೆ ಸೂಚಿಸಿದೆ.

ತನ್ಮಧ್ಯೆ ಬಿಹಾರ ಸರಕಾರವು, ಇಬ್ಬರೂ ಆರೋಪಿಗಳು ಯಾದವರನ್ನು ಭೇಟಿಯಾಗಿದ್ದ ದಿನ ಅವರು ತಲೆಮರೆಸಿಕೊಂಡಿದ್ದ ಅಪರಾಧಿಗಳು ಎಂದು ಘೋಷಿಸಲ್ಪಟ್ಟಿರಲಿಲ್ಲ ಎಂದು ಪೀಠಕ್ಕೆ ತಿಳಿಸಿತು. ರಾಜಕೀಯ ಪ್ರಭಾವ ಮತ್ತು ಶಹಾಬುದ್ದೀನ್‌ರ ಭೀತಿಯಿಂದಾಗಿ ಸಿಬಿಐ ಇನ್ನೂ ಪ್ರಕರಣದ ತನಿಖೆಯನ್ನೇ ಆರಂಭಿಸಿಲ್ಲ ಎಂದು ರಂಜನ್ ಪತ್ನಿ ಆಶಾ ರಂಜನ್ ಅವರು ಸೆ.23ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News