ಕಾಂಗ್ರೆಸ್ ನಾಯಕಿ ರೀಟಾ ಬಹುಗುಣ ಜೋಷಿ ಬಿಜೆಪಿಗೆ?

Update: 2016-10-17 12:07 GMT

ಲಕ್ನೊ,ಅಕ್ಟೋಬರ್ 17: ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಶಾಸಕಿ ರೀಟಾ ಬಹುಗುಣ ಜೋಷಿ ಬಿಜೆಪಿ ಸೇರಲಿದ್ದಾರೆಂದು ಸೂಚನೆ ಲಭಿಸಿದ್ದು, ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಪಕ್ಷಾಂತರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆಂದು ವರದಿಯೊಂದು ತಿಳಿಸಿದೆ. 2007ರಿಂದ 2012ರವರೆಗೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್‌ರನ್ನು ಕಾಂಗ್ರೆಸ್ ಬಿಂಬಿಸಿರುವುದು ಅವರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಲಕ್ನೊ ಕಂಟೋನ್ಮೆಂಟ್ ಅಸೆಂಬ್ಲಿ ಕ್ಷೇತ್ರದ ಶಾಸಕಿಯಾಗಿರುವ ರೀಟಾ ಬಹುಗುಣ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ನಾಯಕರನ್ನು ಈಗಾಗಲೇ ಭೇಟಿಯಾಗಿದ್ದಾರೆ. ಆದರೆ ಈ ಸುದ್ದಿಯನ್ನು ರೀಟಾ ಬಹುಗುಣ ಸಹೋದರ ಮತ್ತು ಬಿಜೆಪಿ ನಾಯಕರೂ ಆದ ವಿಜಯ್ ಬಹುಗುಣ ನಿರಾಕರಿಸಿದ್ದಾರೆ. ಇದೊಂದು ಗಾಳಿಸುದ್ದಿ, ನಿಜವಲ್ಲ ಎಂದು ಅವರು ಹೇಳಿದ್ದಾರೆ. ರೀಟಾ ಬಹುಗುಣ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್‌.ಎನ್ ಬಹುಗುಣರ ಪುತ್ರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News