ಬಿಸಿಸಿಐ ವಿರುದ್ಧ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

Update: 2016-10-17 12:08 GMT

 ಹೊಸದಿಲ್ಲಿ, ಅ.17: ನ್ಯಾ. ಲೋಧಾ ಸಮಿತಿ ಶಿಫಾರಸು ಮಾಡಿರುವ ಸುಧಾರಣೆಗಳ ಜಾರಿಗೆ ಬಿಸಿಸಿಐ ಅಡ್ಡಿ ಉಂಟು ಮಾಡುತ್ತಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳು ವರದಿಯನ್ನು ಜಾರಿಗೆ ತರುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಬಿಸಿಸಿಐಗೆ ಸೋಮವಾರ ಆದೇಶಿಸಿದೆ.
ಲೋಧಾ ಸಮಿತಿ ವರದಿಯ ಸುಧಾರಣೆಯನ್ನು ಜಾರಿಗೆ ತರಲು ಇನ್ನಷ್ಟು ಸಮಯಾವಕಾಶ ನೀಡಬೇಕೆಂದು ಬಿಸಿಸಿಐ ನ್ಯಾಯಾಲಯಕ್ಕೆ ವಿನಂತಿಸಿತು. ವಾದ-ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತು.

  ಒಂದು ವೇಳೆ ಬಿಸಿಸಿಐ ಲೋಧಾ ಸಮಿತಿ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ವಿಫಲವಾದರೆ ನ್ಯಾಯಾಲಯವು ಬಿಸಿಸಿಐನ ಈಗಿನ ಉನ್ನತಾಧಿಕಾರಿಗಳನ್ನು ಉಚ್ಚಾಟಿಸಿ ಆಡಳಿತಾಧಿಕಾರಿಗಳ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ.

ಬಿಸಿಸಿಐ ಶನಿವಾರ ನಡೆಸಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಲೋಧಾ ಸಮಿತಿ ಶಿಫಾರಸು ಮಾಡಿರುವ ಕೆಲವು ನಿರ್ದಿಷ್ಟ ಸುಧಾರಣೆಯ ವಿರುದ್ಧ ತಮ್ಮ ವಿರೋಧವನ್ನು ಮುಂದುವರಿಸಲು ನಿರ್ಧರಿಸಿತ್ತು. ಇಂದು ನಡೆದ ವಿಚಾರಣೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ನ್ಯಾಯಾಲಯದ ಸೂಚನೆಯಂತೆ ವೈಯಕ್ತಿಕ ಅಫಿಡವಿಟ್‌ನ್ನು ಸಲ್ಲಿಸಿದರು.

ಮಂಡಳಿಯ ಮಾಜಿ ಅಧ್ಯಕ್ಷ ಹಾಗು ಹಾಲಿ ಐಸಿಸಿ ಚೇರ್‌ಮನ್ ಶಶಾಂಕ್ ಮನೋಹರ್ ಅವರನ್ನು ಲೋಧಾ ಸಮಿತಿಯ ಸುಧಾರಣೆ ಜಾರಿಯಿಂದ ಸರಕಾರದ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವುದೇ ಎಂದು ವಿಚಾರಿಸಲು ಅವರನ್ನು ಭೇಟಿಯಾಗಿದ್ದೆ ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದರು.

ಬಿಸಿಸಿಐ ಲೋಧಾ ಸಮಿತಿ ಮಾಡಿರುವ ಸುಧಾರಣೆಗಳ ಪೈಕಿ ಒಂದೇ ರಾಜ್ಯ, ಒಂದೇ ಮತ, ಅಧಿಕಾರಿಗಳಿಗೆ ನಿರ್ದಿಷ್ಟ ಅವಧಿ ನಿಗದಿಯನ್ನು ಬಲವಾಗಿ ವಿರೋಧಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News