ಪಾಕಿಸ್ತಾನದ ಇಡೀ ವ್ಯವಸ್ಥೆಯೇ ಭಯೋತ್ಪಾದನೆಯನ್ನು ಪೋಷಿಸುತ್ತಿದೆ: ರಾಜನಾಥ್

Update: 2016-10-17 12:56 GMT

ಚಂಡಿಗಡ, ಅ.17: ಪಾಕಿಸ್ತಾನದ ಇಡೀ ಸರಕಾರವೇ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆಯೆಂದು ತೀಕ್ಷ್ಣ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಹಾವುಗಳನ್ನು ಸಾಕುವವರು ಅವುಗಳಿಂದಲೇ ಕಡಿಯಲ್ಪಡುತ್ತಾರೆಂದು ಇಂದು ಎಚ್ಚರಿಕೆ ನೀಡಿದ್ದಾರೆ.

ಭಾರತವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ವಿರೋಧಿಸುತ್ತಿದೆ. ಆದರೆ, ಅಲ್ಲಿನ ಜನರನ್ನು ದ್ವೇಷಿಸುವುದಿಲ್ಲ ಎಂದ ಅವರು, ‘ಭಯೋತ್ಪಾದಕರ ಕಾರ್ಖಾನೆಗಳನ್ನು ಮುಚ್ಚುವುದಕ್ಕಾಗಿ’ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನಾ ವಿರೋಧಿ ಅಭಿಯಾನ ನಡೆಸಲು ನೆರವಿನ ಕೊಡುಗೆಯನ್ನು ಮುಂದಿರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಯ್ನೆಲವೆಂದು ಟೀಕಿಸಿದ ಮರುದಿನವೇ ರಾಜನಾಥ್ ಸಿಂಗ್ ಈ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಹಾಗೂ ಈಶಾನ್ಯ ರಾಜ್ಯಗಳ ಪ್ರಾದೇಶಿಕ ಸಂಪಾದಕರ 2 ದಿನಗಳ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಇಡೀ ವ್ಯವಸ್ಥೆಯೇ ಭಾರತದಲ್ಲಿ ಭಯೋತ್ಪಾದನೆಗೆ ಇಂಧನ ಸುರಿಯುತ್ತಿದೆ. ಅದರಿಂದಾಗಿ ಭಾರತ-ಪಾಕ್ ಗಡಿಯುದ್ಧದ ಪ್ರದೇಶದ ಮೇಲ್ವಿಚಾರಣೆ ಸವಾಲಿನ ಕೆಲಸವಾಗಿದೆ. ಆದರೆ, ಹಾವುಗಳನ್ನು ಸಾಕುವವರು, ಅವರನ್ನೇ ಅವು ಕಡಿಯಲಿವೆಯೆಂಬುದನ್ನು ಅರಿಯಬೇಕು ಎಂದರು.

ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಅಳವಡಿಸಿಕೊಳ್ಳುವ ಮೂಲಕ ಪಾಕಿಸ್ತಾನವು ಕೇವಲ ದಕ್ಷಿಣ ಏಶ್ಯದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಸಮುದಾಯದಲ್ಲೂ ಏಕಾಂಗಿಯಾಗುತ್ತಿದೆಯೆಂದು ರಾಜನಾಥ್ ಹೇಳಿದರು.

ಇತರರಿಗೂ ಲಾಭವಿಲ್ಲದ ತನಗೂ ಲಾಭ ನೀಡದ ಕೆಲವು ವಿಷಯಗಳ ಭಾರದಿಂದ ಪಾಕಿಸ್ತಾನ ಬಳಲುತ್ತಿದೆ. ಭಯೋತ್ಪಾದಕ ಹಾಗೂ ಸ್ವಾತಂತ್ರ ಹೋರಾಟಗಾರನ ನಡುವೆ ವ್ಯತ್ಯಾಸ ತಿಳಿಯದಷ್ಟು, ಕಾಶ್ಮೀರದ ಕುರಿತು ಅದರ ಭಾರ ತಲುಪಿದೆ. ಭಯೋತ್ಪಾದನೆಯ ಕಡೆಗೆ ಅದರ ಬಾಗುವಿಕೆ ದ್ವಿಪಕ್ಷೀಯ ಸಂಬಂಧಕ್ಕೆ ದೊಡ್ಡ ತೊಡಕಾಗಿದೆಯೆಂದು ಅವರು ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News