ಆರ್‌ಟಿಐ ಕಾರ್ಯಕರ್ತನ ಹತ್ಯೆ: ಮಾಜಿ ಕಾರ್ಪೊರೇಟರ್-ಪುತ್ರನ ಬಂಧನ
ಮುಂಬೈ, ಅ.17: ಇಲ್ಲಿನ ಸಾಂತಾಕ್ರೂಜ್‌ನಲ್ಲಿ ನಡೆದಿದ್ದ 61ರ ಹರೆಯದ ಆರ್‌ಟಿಐ ಕಾರ್ಯಕರ್ತನೊಬ್ಬನ ಹತ್ಯೆಗೆ ಸಂಬಂಧಿಸಿ ಒಬ್ಬ ಮಾಜಿ ಕಾರ್ಪೊರೇಟರ್ ಹಾಗೂ ಆತನ ಪುತ್ರನನ್ನು ಸೋಮವಾರ ಬಂಧಿಸಲಾಗಿದೆ.
ಸಾಂತಾಕ್ರೂಜ್‌ನ ಕಲಿನಾದ ನಿವಾಸದಲ್ಲಿ ಶನಿವಾರ ರಾತ್ರಿ ನಡೆದಿದ್ದ ಭೂಪೇಂದ್ರ ವೀರ ಎಂಬವರ ಹತ್ಯೆಯ ಆರೋಪದಲ್ಲಿ ಮಾಜಿ ಕಾರ್ಪೊರೇಟರ್ ರಝಾಕ್ ಖಾನ್ ಹಾಗೂ ಆತನ ಮಗ ಅಮ್ಜದ್ ಎಂಬವರನ್ನು ಬಂಧಿಸಲಾಗಿದೆಯೆಂದು ಮುಂಬೈ ಪೊಲೀಸ್ ವಕ್ತಾರ ಅಶೋಕ್ ದುಬೆ ತಿಳಿಸಿದ್ದಾರೆ.
ಆಸ್ತಿ ವಿವಾದ ಹತ್ಯೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದರು. ಈ ಮೊದಲು 6 ಮಂದಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ವೀರ, ರಜಾಕ್ ಚಾಳ್‌ನಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಅವರ ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿ ಅವರ ಹೆಂಡತಿಯರು ಹಾಗೂ ಗಂಡನ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವೀರ ಮನೆಯಲ್ಲಿ ಕುಳಿತಿದ್ದಾಗ ಮುಂಬಾಗಿಲಿಂದ ಪ್ರವೇಶಿಸಿದ ಹಂತಕ, ಸೈಲೆನ್ಸರ್ ಅಳವಡಿಸಿದ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.