×
Ad

ಸರ್ಜಿಕಲ್ ದಾಳಿಯ ಸಾಕ್ಷ ಕೇಳಿದವರ ವಿರುದ್ಧ ರಕ್ಷಣಾ ಸಚಿವರಿಂದ ವಾಗ್ದಾಳಿ

Update: 2016-10-17 19:12 IST

ಅಹ್ಮದಾಬಾದ್, ಅ.17: ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ಸೂಕ್ತ ಉತ್ತರ ನೀಡುತ್ತಿದೆಯೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಇಂದು ಹೇಳಿದ್ದಾರೆ. ಇದೇ ವೇಳೆ, ನಿಯಂತ್ರಣ ರೇಖೆಯಾಚೆಗೆ ನಡೆಸಿದ್ದ ಸೀಮಿತ ದಾಳಿಗೆ ಸಾಕ್ಷಿ ಕೇಳುತ್ತಿರುವವರ ವಿರುದ್ಧ ಅವರು ಕಿಡಿಗಾರಿದ್ದಾರೆ.

ಕಳೆದ 5-6 ವರ್ಷಗಳಿಂದ ಕದನ ವಿರಾಮ ಉಲ್ಲಂಘನೆ ಆಗಾಗ ನಡೆಯುತ್ತಿದೆ. ಆದರೆ, ಈಗ ಬದಲಾಗಿರುವುದೆಂದರೆ, ನಾವವರಿಗೆ ಸರಿಯಾದ ಉತ್ತರ ನೀಡುತ್ತಿದ್ದೇವೆಂದು ಅವರು ಹೇಳಿದ್ದಾರೆ.

ಭದ್ರತಾ ಲೋಪಗಳ ಕುರಿತಾದ ಪ್ರಶ್ನೆಯೊಂದಕ್ಕೆ, ನಾವು ಕೆಲಸ ಮಾಡುವಾಗ ಲೋಪ ನಡೆದರೆ, ತಪ್ಪನ್ನು ಸರಿಪಡಿಸಿಕೊಳ್ಳಬೇಕೆಂದು ಪಾರಿಕ್ಕರ್ ಉತ್ತರಿಸಿದ್ದಾರೆ.

ಸರ್ಜಿಕಲ್ ದಾಳಿಯು, ರಾಷ್ಟ್ರೀಯ ಭದ್ರತೆಯ ಕುರಿತಾಗಿ ಭಾರತೀಯರಲ್ಲಿ ಸೂಕ್ಷ್ಮತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ. ದಾಳಿ ನಡೆಸಿದಾಗಿನಿಂದಲೂ ಭಾರತದ ಕೆಲವು ರಾಜಕಾರಣಿಗಳು ಅದಕ್ಕೆ ಸಾಕ್ಷವನ್ನು ಕೇಳುತ್ತಿದ್ದಾರೆ. ಭಾರತೀಯ ಸೇನೆ ಏನಾದರೂ ಹೇಳಿದರೆ ಅದನ್ನು ನಾವು ನಂಬಲೇ ಬೇಕು. ಅದು ವಿಶ್ವದಲ್ಲೇ ಅತ್ಯುತ್ತಮ, ವೃತ್ತಿಪರ, ಸಾಹಸಿ ಹಾಗೂ ಅತ್ಯುನ್ನತ ಸಮಗ್ರತೆಯಿಂದ ಕೂಡಿದೆ. ಅಹ್ಮದಾಬಾದ್‌ನಲ್ಲಿ ಯಾರೂ ಸೇನೆಯಿಂದ ಪುರಾವೆ ಕೇಳುವುದಿಲ್ಲವೆಂಬುದು ತನ್ನ ಭಾವನೆಯಾಗಿದೆಯೆಂದು ಅವರು ಹೇಳಿದ್ದಾರೆ.

ಸರ್ಜಿಕಲ್ ದಾಳಿಯ ಬಳಿಕ ಎರಡು ಉತ್ತಮ ವಿಷಯಗಳಾಗಿವೆ. ಮೊದಲನೆಯದು, ಕೆಲವು ಮಂದಿ ರಾಜಕಾರಣಿಗಳ ಹೊರತಾಗಿ ಪ್ರತಿ ಭಾರತೀಯನೂ ಒಗ್ಗಟ್ಟಿನಿಂದ ಮೇಲೆದ್ದು, ನಮ್ಮ ವೀರ ಸೈನಿಕರ ಬೆಂಬಲಕ್ಕೆ ನಿಂತಿದ್ದಾನೆ. ಎರಡನೆಯದಾಗಿ ಭಾರತೀಯರು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸೂಕ್ಷ್ಮತೆಯನ್ನು ಪಡೆದುಕೊಂಡಿದ್ದಾರೆಂದು ಪಾರಿಕ್ಕರ್ ತಿಳಿಸಿದ್ದಾರೆ.

ಅವರು ಇಲ್ಲಿನ ನಿರ್ಮಾ ವಿಶ್ವವಿದ್ಯಾನಿಲಯದಲ್ಲಿ ‘ನನ್ನ ಸೇನೆಯನ್ನು ತಿಳಿಯಿರಿ’ ಎಂಬ ಸಮಾರಂಭದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News