ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ 'ಕಾವೇರಿ' ತಾಂತ್ರಿಕ ಸಮಿತಿ
ಹೊಸದಿಲ್ಲಿ, ಅ.17: ಕಾವೇರಿ ಕೊಳ್ಳದ ವಾಸ್ತವ ಸ್ಥಿತಿಗತಿಯ ಪ್ರತ್ಯಕ್ಷಾವಲೋಕನಕ್ಕಾಗಿ ರಚಿಸಲಾಗಿದ್ದ ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಉನ್ನತ ಮಟ್ಟದ ಕೇಂದ್ರೀಯ ತಾಂತ್ರಿಕ ತಂಡವು ಸುಪ್ರೀಂ ಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಸಿದೆ.
ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಕರ್ನಾಟಕದ ಕಾವೇರಿ ಪಾತ್ರದ 48ರಲ್ಲಿ 42 ತಾಲೂಕುಗಳಲ್ಲಿ ಬರಗಾಲವಿದೆ. ತಮಿಳುನಾಡಿನಲ್ಲಿ ಜಾನುವಾರುಗಳಿಗೆ ನೀರಿಲ್ಲ. ಎರಡೂ ರಾಜ್ಯಗಳಲ್ಲಿ ಕಬ್ಬು ಬೆಳೆಯಲು ಉತ್ತೇಜನ ನೀಡಬಾರದೆಂದು ವರದಿ ಹೇಳಿದೆ.
ನೀರಿನ ಅಭಾವದಿಂದ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೂ ಬಾಧೆಯಾಗಿದೆ. ಕರ್ನಾಟಕದ ಮಂಡ್ಯ ಜಿಲ್ಲೆ ಅತಿ ಹೆಚ್ಚು ಬಾಧಿತವಾಗಿದ್ದು, ಇದುವರೆಗೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅದು ತಿಳಿಸಿದೆ.
ಕರ್ನಾಟಕವು ಕಾವೇರಿ ನೀರನ್ನು ಬಿಡುಗಡೆ ಮಾಡದಿದ್ದಲ್ಲಿ ಸಾಂಬಾ ಬೆಳೆಗೆ ಹಾನಿಯಾಗಲಿದೆಯೆಂದು ತಿರುಚಿರಾಪಳ್ಳಿ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರು ಕೇಂದ್ರದ ತಂಡಕ್ಕೆ ಹೇಳಿದ್ದಾರೆ. ಇದೇ ವೇಳೆ, ಕಾವೇರಿಯ ವಿಚಾರವಾಗಿ ರೈತರ ಒಕ್ಕೂಟ ಘೋಷಿಸಿರುವ ರೈಲು ತಡೆ ಪ್ರತಿಭಟನೆಗೆ ಡಿಎಂಕೆ ಸಹಿತ ವಿಪಕ್ಷಗಳು ಕೈಜೋಡಿಸಿವೆ. ಕಾವೇರಿ ಜಲ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಅವು ಕೇಂದ್ರ ಸರಕಾರವನ್ನು ಆಗ್ರಹಿಸಿವೆ.
ಚೆನ್ನೈ ಹಾಗೂ ಕಾವೇರಿ ಪಾತ್ರದ ಜಿಲ್ಲೆಗಳು ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಈ ಹಿಂದೆ ನಡೆದಿದ್ದ ಪ್ರತಿಭಟನೆಗಳಲ್ಲಿ ಡಿಎಂಕೆ ಖಜಾಂಚಿ ಹಾಗೂ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಸಹಿತ ಹಲವು ನಾಯಕರು ಭಾಗವಹಿಸಿದ್ದರು.
ವರದಿಯಲ್ಲಿನ ಮುಖ್ಯಾಂಶಗಳು ತಮಿಳುನಾಡು ಮತ್ತು ಕರ್ನಾಟಕಗಳಲ್ಲಿಯ ರೈತರ ಬವಣೆಗಳನ್ನು ತಂಡವು ಗಮನಿಸಿದೆ. ಅಗತ್ಯ ನೀರಿನ ಕೊರತೆಯಿಂದಾಗಿ ಕೃಷಿ ಕಾರ್ಯ ಮತ್ತು ಮೀನುಗಾರಿಕೆಗೆ ಕಾರ್ಮಿಕರ ನೇಮಕ ಸೀಮಿತಗೊಂಡಿದೆ ಮತ್ತು ಇದು ಅವರಿಗೆ ನಿರುದ್ಯೋಗ ಮತ್ತು ಹಣಕಾಸು ಮುಗ್ಗಟ್ಟಿಗೆ ಕಾರಣವಾಗಿದೆ.
ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರದ ಮಾರ್ಗಸೂಚಿಗಳಡಿ ಕರ್ನಾಟಕ ಸರಕಾರವು ಕಾವೇರಿ ಜಲಾನಯನ ಪ್ರದೇಶದಲ್ಲಿಯ 48 ತಾಲೂಕುಗಳ ಪೈಕಿ 42ನ್ನು ಬರಪೀಡಿತವೆಂದು ಘೋಷಿಸಿದೆ.
ಕರ್ನಾಟಕವು ತಮಿಳುನಾಡು ಮತ್ತು ಪುದುಚೇರಿಗಳ ಸ್ಥಾಪಿತ ನೀರಾವರಿ ಸೌಲಭ್ಯಗಳ ರಕ್ಷಣೆಯಲ್ಲಿ ಆ ರಾಜ್ಯಗಳ ಹಿತಾಸಕ್ತಿಗಳ ವೌಲ್ಯಮಾಪನ ಮಾಡುವ ಅಗತ್ಯವಿದೆ ಮತ್ತು ತಮಿಳುನಾಡು ಕರ್ನಾಟಕದ ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪರಿಗಣಿಸಬೇಕಿದೆ. ಇವೆರಡೂ ರಾಜ್ಯಗಳು ತಮ್ಮ ಜನತೆಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.
ಎರಡೂ ರಾಜ್ಯಗಳಲ್ಲಿ ರೈತರ ಬೆಳೆಗಳಿಗೆ ನೀರು ಹರಿಸುವ ಮೂಲಸೌಕರ್ಯಗಳು ಶತಮಾನದಷ್ಟು ಹಳೆಯದಾಗಿದ್ದು,ಅತ್ಯಂತ ಕಡಿಮೆ ಸಾಮರ್ಥ್ಯವನ್ನು ಹೊಂದಿವೆ. ಕಡಿಮೆ ನೀರಿನ ಗರಿಷ್ಠ ಬಳಕೆ ಸಾಧ್ಯವಾಗುವಂತೆ ಇವುಗಳನ್ನು ಆಧುನೀಕರಿಸುವ ಅಗತ್ಯವಿದೆ. ಕೊಳವೆಗಳ ಮೂಲಕ ನೀರು ಪೂರೈಕೆ ಜಾಲವನ್ನು ಇನ್ನಷ್ಟು ಸುಧಾರಣೆಗೊಳಿಸುವ ಮತ್ತು ಸ್ಪ್ರಿಂಕ್ಲರ್ ಹಾಗೂ ಹನಿ ನೀರಾವರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರು ಪೂರೈಕೆ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ.
ಕರಾವಳಿ ಸಮೀಪದ ಪ್ರದೇಶಗಳಲ್ಲಿ ಅಂತರ್ಜಲವು ಉಪ್ಪುಮಿಶ್ರಿತವಾಗಿರುವುದರಿಂದ ಅದನ್ನು ಕೃಷಿಗೆ ಬಳಸಲಾಗುವುದಿಲ್ಲ. ಇಂತಹ ಪ್ರದೇಶಗಳಲ್ಲಿ ಮೆಟ್ಟೂರು ಜಲಾಶಯದ ನೀರು ನೀರಾವರಿಯ ಏಕಮಾತ್ರ ಮೂಲವಾಗಿದೆ.
ಸಂಪೂರ್ಣ ಬೆಳೆಯ ಅವಧಿಗೆ ಸಾಕಷ್ಟು ನೀರು ಲಭ್ಯವಾದಾಗ ಮಾತ್ರ ಕೃಷಿಗೆ ಸಬ್ಸಿಡಿಗಳನ್ನು ನೀಡುವ ಮೂಲಕ ತಮಿಳುನಾಡು ಮಾಡಿರುವ ಪ್ರಯತ್ನಗಳು ನಿರೀಕ್ಷಿತ ಫಲಗಳನ್ನು ನೀಡಬಹುದಾಗಿದೆ.
ಆನ್‌ಲೈನ್ ಟ್ರಾನ್ಸ್‌ಮಿಷನ್ ಮತ್ತು ಡ್ಯಾಷ್‌ಬೋರ್ಡ್ ಮೂಲಕ ದತ್ತಾಂಶ ಸಂಗ್ರಹದ ವ್ಯವಸ್ಥೆಯ ಜೊತೆಗೆ ನೀರಿನ ಹರಿವು ಮತ್ತು ತಿರುಗಿಸಲಾದ ನೀರಿನ ಪಾರದರ್ಶಕ ದಾಖಲಾತಿಗಾಗಿ ಸ್ವಯಂಚಾಲಿತ ಜಲಮಾಪಕ ಸಾಧನವನ್ನು ಒದಗಿಸಬೇಕಾದ ಅಗತ್ಯವಿದೆ. ಬೆಳೆಗಳ ಹೊಂದಾಣಿಕೆ ಮತ್ತು ಬೆಳೆಗಳಲ್ಲಿ ವೈವಿಧ್ಯತೆಯನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ.