" ಮುಸ್ಲಿಮ್ ಮಹಿಳೆಯರ ಬಗ್ಗೆ ತಲೆಕೆಡಿಸಿಕೊಳ್ಳುವ ಮೊದಲು ಮೋದಿ ತನ್ನ ಪತ್ನಿಯ ಬಗ್ಗೆ ಯೋಚಿಸಲಿ "
ಹೊಸದಿಲ್ಲಿ,ಅ.17: ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಮಹಿಳೆಯರ ಬಗ್ಗೆ ತಲೆ ಕೆಡಿಸಿಕೊಳ್ಳುವ ಮೊದಲು ತನ್ನ ಪತ್ನಿಯ ಬಗ್ಗೆ ಯೋಚಿಸಲಿ ಎಂದು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿರುವ ಪ್ರತಿಷ್ಠಿತ ಮುಸ್ಲಿಮ್ ಧುರೀಣ ಉಬೈದುಲ್ಲಾ ಖಾನ್ ಆಝ್ಮಿ ಅವರು ಕುಟುಕಿದ್ದಾರೆ. ಆಝ್ಮಿ ರವಿವಾರ ಇಲ್ಲಿಯ ಕಾಂಗ್ರೆಸ್ ಕೇಂದ್ರ ಕಚೇರಿ ಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷಕ್ಕೆ ಅವರು ವಾಪಸ್ ಬಂದಿರುವುದು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ನೀಡಲಿದೆ. ಉ.ಪ್ರದೇಶದಲ್ಲಿ ಮುಸ್ಲಿಮ್ ಮತಗಳು ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ತ್ರಿವಳಿ ತಲಾಕ್ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಆ ವಿಷಯವು ನ್ಯಾಯಾಲಯದಲ್ಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನುಣುಚಿಕೊಂಡಿದ್ದರೆ, ಈ ವಿಷಯದಲ್ಲಿ ಸರಕಾರದ ಯಾವುದೇ ತಪ್ಪುಹೆಜ್ಜೆಯನ್ನು ತಾನು ಬಲವಾಗಿ ವಿರೋಧಿಸುವುದಾಗಿ ಆಝ್ಮಿ ಹೇಳಿದರು.
ಶಾಬಾನು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪ್ರಬಲವಾಗಿ ವಿರೋಧಿಸಿದ್ದ ಆಝ್ಮಿ, ತಾನು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಪದಾಧಿಕಾರಿಯಾಗಿದ್ದೇನೆ. ತ್ರಿವಳಿ ತಲಾಕ್ ವಿಷಯದಲ್ಲಿ ಸರಕಾರವು ತಪ್ಪು ಹೆಜ್ಜೆಯನ್ನಿರಿಸಿದರೆ ತಾನು ಅದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದರು.
ತ್ರಿವಳಿ ತಲಾಕ್ ವಿಷಯದಲ್ಲಿ ಇಸ್ಲಾಮ್ ಅತ್ಯಂತ ಸ್ಪಷ್ಟವಾಗಿದೆ. ಆದರೆ ಯಾರಾದರೂ ತ್ರಿವಳಿ ತಲಾಕ್‌ನ್ನು ದುರುಪಯೋಗಿಸಿಕೊಂಡರೆ ನಾವು ಕಾನೂನನ್ನೇ ಬದಲಿಸಬೇಕು ಎಂದು ಅದರರ್ಥವಲ್ಲ. ಈ ವಿಷಯವನ್ನೆತ್ತಿರುವುದರ ಹಿಂದೆ ಬಿಜೆಪಿಯ ಗುಪ್ತ ಅಜೆಂಡಾ ಇದೆ. ಮೋದಿಯವರು ಮುಸ್ಲಿಮ್ ಮಹಿಳೆಯರ ಬಗ್ಗೆ ತಲೆಕೆಡಿಸಿಕೊಳ್ಳುವ ಮೊದಲು ತನ್ನ ಪತ್ನಿ ಜಶೋದಾ ಬೆನ್ ಅವರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಆ ಬಡಮಹಿಳೆ ತನ್ನ ಪಾಸ್‌ಪೋರ್ಟ್ ಮಾಡಿಸಲೂ ಒದ್ದಾಡುತ್ತಿದ್ದಾರೆ ಎಂದು ಆಝ್ಮಿ ಹೇಳಿದರು.