'ಪಿಚ್ ಕ್ಲಿಯರ್' ಮಾಡಿದ ಅಶ್ವಿನ್, ಭಜ್ಜಿ

Update: 2016-10-17 15:19 GMT

  ಹೊಸದಿಲ್ಲಿ, ಅ.17: ಭಾರತದ ಇಬ್ಬರು ಅಗ್ರಮಾನ್ಯ ಸ್ಪಿನ್ನರ್‌ಗಳಾದ ಹರ್ಭಜನ್ ಸಿಂಗ್ ಹಾಗೂ ರವಿಚಂದ್ರನ್ ಅಶ್ವಿನ್ ಟ್ವಿಟರ್‌ನ ಮೂಲಕ ಪಿಚ್ ಬಗೆಗಿನ ಚರ್ಚೆಗೆ ತೆರೆ ಎಳೆದರು. ಪರಸ್ಪರ ಗೌರವ ಹಾಗೂ ಶ್ಲಾಘನೆಯ ಮೂಲಕ ತಮ್ಮಾಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

  ನಾಲ್ಕು ವರ್ಷದ ಹಿಂದಿನ ಪಿಚ್‌ಗಿಂತ ಈಗಿನ ಪಿಚ್ ಭಿನ್ನವಾಗಿದೆ. ಭಾರತ ಕಳೆದ 4 ವರ್ಷಗಳಿಂದ ಸ್ಪಿನ್ನರ್‌ಗಳ ಸ್ನೇಹಿ ಪಿಚ್‌ಗಳನ್ನು ನಿರ್ಮಿಸುತ್ತಾ ಬಂದಿದೆ. ನಾನು ಹಾಗೂ ಅನಿಲ್ ಕುಂಬ್ಳೆ ಆಡುತ್ತಿದ್ದ ಸಮಯದಲ್ಲಿ ಇಂತಹ ಪಿಚ್ ಇರುತ್ತಿದ್ದರೆ, ನಾವು ಇನ್ನಷ್ಟು ವಿಕೆಟ್ ಪಡೆಯುತ್ತಿದ್ದೆವು ಎಂದು ಟ್ವೀಟ್ ಮಾಡಿದ್ದ ಹರ್ಭಜನ್ ವಿವಾದ ವನ್ನು ಸೃಷ್ಟಿಸಿದ್ದರು.

ಕಳೆದ ವಾರ ಭಾರತ-ನ್ಯೂಝಿಲೆಂಡ್‌ನ ನಡುವೆ ಇಂದೋರ್‌ನಲ್ಲಿ ನಡೆದ 3ನೆ ಟೆಸ್ಟ್ ಮೂರು ದಿನದೊಳಗೆ ಕೊನೆಗೊಂಡ ಬಳಿಕ ಹರ್ಭಜನ್ ಭಾರತದ ಪಿಚ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಹರ್ಭಜನ್ ಸಂಶಯಕ್ಕೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನೀವು ಆಡುತ್ತಿದ್ದ ಸಮಯದಲ್ಲಿ ಪಿಚ್ ಬಗ್ಗೆ ದೂರು ನೀಡಿಲ್ಲವೇಕೆ? ಎಂದು ಟ್ವೀಟರ್‌ನಲ್ಲಿ ಭಜ್ಜಿಗೆ ಪ್ರಶ್ನಿಸಲಾಗಿತ್ತು.

ಪಿಚ್ ಬಗ್ಗೆ ಅನಾರೋಗ್ಯಕರ ಚರ್ಚೆ ನಡೆಯುತ್ತಿದ್ದು, 2001ರಲ್ಲಿ ಆಸ್ಟ್ರೇಲಿಯ ವಿರುದ್ಧ ಹರ್ಭಜನ್ ನೀಡಿರುವ ಪ್ರದರ್ಶನದಿಂದ ಸ್ಫೂರ್ತಿ ಪಡೆದು ನಾನು ಆಫ್-ಸ್ಪಿನ್ ಬೌಲಿಂಗ್ ಮಾಡಲು ಆರಂಭಿಸಿದ್ದೆ ಎಂದು ಅಶ್ವಿನ್ ಟ್ವೀಟ್ ಮಾಡಿದ್ದರು.

ತನಗೆ ಹರ್ಭಜನ್‌ರೊಂದಿಗೆ ಭಿನಾಭಿಪ್ರಾಯವಿದೆ ಎಂಬ ವದಂತಿಗೆ ತೆರೆ ಎಳೆಯಲು ಟ್ವಿಟರ್‌ನ್ನು ಬಳಸಿಕೊಂಡ ಅಶ್ವಿನ್, ‘‘ಹಿರಿಯ ಆಫ್-ಸ್ಪಿನ್ನರ್ ತನಗೆ ಸ್ಫೂರ್ತಿಯಾಗಿದ್ದಾರೆ. ಪಿಚ್ ಬಗ್ಗೆ ಅನಾರೋಗ್ಯಕರ ಚರ್ಚೆ ಇಲ್ಲಿಗೆ ಕೊನೆಯಾಗಬೇಕು’’ ಎಂದು ಆಗ್ರಹಿಸಿದರು.

ಅಶ್ವಿನ್ ಟ್ವೀಟ್‌ಗೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ ಹರ್ಭಜನ್, ‘‘ನನಗೆ ನಿಮ್ಮ ಬಗ್ಗೆ(ಅಶ್ವಿನ್)ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವು ಕಾರಣಗಳಿಂದ ನಾನು ಬಳಸಿದ್ದ ಶಬ್ದ ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ನೀವು ಇದೇ ರೀತಿ ಉತ್ತಮ ಪ್ರದರ್ಶನ ಮುಂದುವರಿಸುತ್ತಿರಬೇಕು’’ ಎಂದು ಶುಭ ಹಾರೈಸಿದರು.

 ಪ್ರಸ್ತುತ ಅಶ್ವಿನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಅತ್ಯಂತ ವೇಗವಾಗಿ 200 ವಿಕೆಟ್ ಮೈಲುಗಲ್ಲು ತಲುಪಿದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News