ಅಭಿವೃದ್ಧಿಯ ಮಲಮಗಳು ಧಾರಾವಿ

Update: 2016-10-17 15:20 GMT



ಖಾಸಗಿ ಸಂಸ್ಥೆ ಮಶಾಲ್(2010)ರಲ್ಲಿ ಮಾಡಿದ ಸರ್ವೆ ಪ್ರಕಾರ ಧಾರಾವಿಯಲ್ಲಿರುವ ವಸತಿ ಜೋಪಡಿಗಳು 45,583. ವಸತಿ ಮತ್ತು ಅಂಗಡಿ ಇರುವ ಜೋಪಡಿಗಳು 11,719. ಕೇವಲ ಅಂಗಡಿ, ಶಾಲಾ ಇತ್ಯಾದಿ 502. ಸಣ್ಣ, ದೊಡ್ಡ ಕೈಗಾರಿಕೆ ಘಟಕಗಳು 1,625. ಮಂದಿರ, ಮಸೀದಿ, ಇತ್ಯಾದಿ ಪೂಜಾ ಸ್ಥಳಗಳು 306. ಸುಲಭ ಶೌಚಾಲಯ ನೀರು ಮುಂತಾದ ಮೂಲಭೂತ ಸೌಕರ್ಯ ಒದಗಿಸುವ ಸ್ಥಳಗಳು 643.

ಧಾರಾವಿ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವ ಚಿತ್ರಣ ಒಂದೇ ತೆರವಾದದ್ದು. ಏಶಿಯಾದ ಅತೀ ದೊಡ್ಡ ಕೊಳಗೇರಿ, ವಾಸಿಸಲು ಅಯೋಗ್ಯ, ಅನಾರೋಗ್ಯ ಗಲೀಜು ಪ್ರದೇಶ. ಆದರೆ ಇಷ್ಟೇ ಸತ್ಯ ಅಲ್ಲ. ಮುಂಬೈಯಲ್ಲಿ ಕೊಳಗೇರಿ ಪ್ರದೇಶ ಧಾರಾವಿ ಒಂದೇ ಅಲ್ಲ. ಗೋವಂದಿ, ಸಯನ್-ಕೊಲಿವಾಡ, ಕೊಲಾಬಾ-ಸಂಜಯಗಾಂನಗರ, ಬಾಂದ್ರಾ ಬೆಹರಂ ಪಾಡಾ, ಜೋಗೇಶ್ವರಿ ಹೀಗೆ ಸಣ್ಣ ದೊಡ್ಡ ಚರಂಡಿ, ಸಾಲಾ ಅಕ್ಕಪಕ್ಕ ಸ್ಲಮ್ ಬೀಜಗಳು ಮೊಳಕೆಯೊಡೆಯುತ್ತಲೇ ಇರುತ್ತವೆ. ಆದರೆ ಧಾರಾವಿಯ ಕಥೆ ಭಿನ್ನಾತಿಭಿನ್ನ ಹಾಗೂ ಕುತೂಹಲಕಾರಿಯಾದುದು.

ಈಚೆಗೆ ಮಾಹಿಮ್-ಬಾಂದ್ರಾ-ಮೀರಿ ನದಿ, ಆಚೆಗೆ ಸಯನ್ ಕೋಲಿವಾಡ ನಡುವೆ ಸುಮಾರು 175 ಹೆಕ್ಟೆರ್ ಭೂಪ್ರದೇಶದಲ್ಲಿ ಅತ್ಯಂತ ಅವ್ಯವಸ್ಥಿತ ಹಾಗೂ ಅನಕೃತವಾಗಿ ಸರಕಾರಿ ವ್ಯವಸ್ಥೆಗೆ ಸಡ್ಡೆ ಹೊಡೆದು ನಿಂತಿರುವುದು ಈ ಧಾರಾವಿ. ಸುಮಾರು 12 ಲಕ್ಷಕ್ಕೂ ಮೀರಿ ವಾಸಿಸುವ ಧಾರಾವಿಯಲ್ಲಿ ತೊಂಬತ್ತು ಪ್ರತಿಶತ ಜನರ ನೆಲೆ ಬೆಲೆ ಅನಕೃತವಾದುದು.
  ಧಾರಾವಿಯ ಮೂಲ ನಿವಾಸಿಗಳು ಮರಾಠಿ ಮೀನುಗಾರ ‘ಕೋಳಿ’ ಜನಾಗಂಗ. ಶತಮಾನದ ಹಿಂದೆ ಸೌರಾಷ್ಟ್ರ ಭೀಕರ ಕ್ಷಾಮಕ್ಕೆ ತುತ್ತಾದಾಗ ಅಲ್ಲಿನ ಕುಂಬಾರ ಜನಾಂಗ; ರಾಜಸ್ಥಾನದಿಂದ ಚಿನ್ನಾಭರಣ, ನೇಯ್ಗೆ ಮುಂತಾದ ಕುಶಲ ಕರ್ಮಿಗಳು; ಉತ್ತರ ಪ್ರದೇಶ, ಬಿಹಾರದಿಂದ ಮುಸ್ಲಿಂ ಧರ್ಮೀಯ ಚರ್ಮ ಹದ ಮಾಡುವುದು; ದಕ್ಷಿಣದ ತಮಿಳುನಾಡಿನ ತಿರುವೆಲ್‌ವೆಲ್ಲಿನಿಂದ ತಮಿಳಿಗರು; ಆಂಧ್ರ, ಉತ್ತರ ಕರ್ನಾಟಕ ಜಿಲ್ಲೆಗಳಿಂದ ಕನ್ನಡಿಗರು ಕಟ್ಟಡ ನಿರ್ಮಾಣ ದಿನಗೂಲಿ ಕಾರ್ಮಿಕರಾಗಿ ತುತ್ತು ಅನ್ನ ಅರಸಿಕೊಂಡು ಮುಂಬೈಗೆ ಬಂದವರಿಗೆ ಅಸಹ್ಯವೆನಿಸುವ ಧಾರಾವಿಯೊಂದೇ ಅನಿವಾರ್ಯ ಆಶ್ರಯ ತಾಣವಾಗಿತ್ತು. ಆಯಾ ಜನಾಂಗದವರ ಗುಂಪು ಪಂಗಡಗಳ ಪುಟ್ಟ ಪುಟ್ಟ ಕಚ್ಚಾ ಜೋಪಡಿಗಳು ದುರ್ನಾತ, ಕೊಚ್ಚೆಯನ್ನು ನಿರ್ಲಕ್ಷಿಸಿ ಗಬ್ಬೆನ್ನುವ ಕತ್ತಲೆಯಲ್ಲಿ ಮಿಸುಕಾಡತೊಡಗಿದವು.

ಹೊರ ಜಗತ್ತಿಗೆ ಧಾರಾವಿ ತೆರೆದುಕೊಂಡದ್ದು ಹತ್ತರ ಒಂದು ಭಾಗ ಮಾತ್ರ. ಇಲ್ಲಿ ನೆಲೆ ನಿಂತ ದಿನಗೂಲಿ ಶ್ರಮಿಕ ಜೀವಿಗಳು ನಿರಂತರವಾಗಿ ಅವ್ಯವಸ್ಥೆಯ ಅಸಹಾಯಕತೆಯಲ್ಲೇ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡಿದವರು. ಸರಕಾರದ, ಸ್ಥಿತಿವಂತ ಸಮಾಜದ ದಿವ್ಯ ನಿರ್ಲಕ್ಷ ಅವಮಾನವನ್ನು ಸಹಿಸಿಕೊಂಡವರು. ಮುಂಬೈ ಈ ದೇಶದ ಆರ್ಥಿಕ ರಾಜಧಾನಿಯಾಗಿ ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿದ್ದರೆ, ಅಂತಹ ಮುಂಬೈಯ ನಿರ್ಮಾಣ ಕಾರ್ಯದಲ್ಲಿ ದಿನಗೂಲಿಗಳಾಗಿ ಜನರು ಸುರಿಸಿದ , ಎಷ್ಟೋ ವೇಳೆ ಜೀವವನ್ನೇ ತೆತ್ತ ಅಸಹಾಯಕ ಕಾರ್ಮಿಕರು, ಶಹರಿನ ನೈರ್ಮಲ್ಯ ಕಾರ್ಯದಲ್ಲಿ ತೊಡಗಿಸಿಕೊಂಡವರು, ಸರಕು ಸಾಗಣೆಗೆ ಡ್ರೈವರ್, ಹಮಾಲಿಗಳು, ಇಂತಹವರ ಸೇವೆಯನ್ನು ಕಡೆಗಣಿಸುವುದು ಸಾಧುವೆ?
 ಇಲ್ಲಿ ಹೆಚ್ಚಿನ ಎಲ್ಲವೂ ಅನಕೃತವಾಗಿರುವಾಗ ಸರಕಾರಿ ಮೂಲಭೂತ ಸೌಕರ್ಯಗಳನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಎಲ್ಲಿಂದಲೋ ಕದ್ದುಮುಚ್ಚಿ ಕರೆಂಟು ಕನೆಕ್ಷನ್, ಇನ್ನೆಲ್ಲಿಂದಲೋ ನೀರಿನ ಸರಬರಾಜು, ಯಾರದ್ದೊ ಟೆಲಿೆನ್ ಲೈನ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಶೌಚಾಲಯ ವ್ಯವಸ್ಥೆ-ವಿಶಾಲವಾಗಿ ಹರಡಿಕೊಂಡಿರುವ ಕೊಳಚೆ-ನಾಲಾಗಳು, ರೈಲ್ವೆ ಹಳಿಗಳು, ಮಾರಿ ನದಿ ದಂಡೆ. ಅಷ್ಟರ ಮಟ್ಟಿಗೆ ಧಾರಾವಿ ಜನ ಯಾವುದೇ ರೀತಿಯ ಸರಕಾರಿ ಬಿಲ್, ಟ್ಯಾಕ್ಸ್ ಕಟ್ಟುವುದರಿಂದ ಬಚಾವ್!

ಧಾರಾವಿ ಬರೆ/ಸ್ಲಮ್ ಅಲ್ಲ; ಆಧುನಿಕತೆಯ ಬಣ್ಣ ಉಳಿದು ‘ಬೆಳೆದಂತೆ’ ಸೋಗು ಹಾಕುವ ಎಲ್ಲ ನಗರ ಮಹಾನಗರಗಳ ಉಪವಸ್ತು ಈ ಇಂತಹ ಧಾರಾವಿ.
 ಧಾರಾವಿಯ ಹೃದಯ ಭಾಗದಿಂದ ಹರಡಿಕೊಂಡಿದೆ. 60 ಫೀಟ್ 90 ಫೀಟ್ ಮೈನ್ ರೋಡ್, ಇನ್ನೊಂದು ಮುಖ್ಯ ರಸ್ತೆ ಸಯನ್-ಬಾಂದ್ರಾ ಲಿಂಕ್ ರೋಡ್. ರಸ್ತೆಯ ಇಕ್ಕೆಲಗಳಲ್ಲಿ ಚಿನ್ನಾಭರಣಗಳ ಮಳಿಗೆಗಳು, ಬ್ರಾಂಡೆಡ್ ಇಲೆಕ್ಟ್ರಾನಿಕ್ ಅಂಗಡಿಗಳು, ಲೆದರ್ ಮಾರುಕಟ್ಟೆ, ಸುಸಜ್ಜಿತವಾಗಿ ವ್ಯಾಪಾರ ನಡೆಸುತ್ತವೆ. ಆಚೆ ಕುಂಬಾರವಾಡಿಯಲ್ಲಿ ವಿವಿಧ ಮಡಿಕೆ ತಯಾರಿಕೆ; ಮುಂದೆ ಸಿದ್ಧ ಉಡುಪುಗಳ ಕಾರ್ಖಾನೆ, ಮಳಿಗೆಗಳು, ಸಾಬೂನು ರಬ್ಬರ್ ವಸ್ತು ತಯಾರಿಸುವ ಕಾರ್ಖಾನೆಗಳು, ಇನ್ನೊಂದು ಕಡೆ ಅಕ್ಕಸಾಲಿಗರು, ಬಚನ್, ಚೈನ್, ಚಿಂದಿ ಸಾಮಾನು, ಹಪ್ಪಳ, ಚಿಕ್ಕಿ, ಚಕ್ಕುಲಿ, ಸಿಹಿ ತಿಂಡಿ, ಚರ್ಮ ಹದ ಮಾಡುವ ಪುಟ್ಟ ಪುಟ್ಟ ಗಾಲಾಗಳು, ಅಬ್ಬಾ! ಒಂದೇ ಎರಡೇ.... ಸರಿ ಸುಮಾರು ಹತ್ತು ಹನ್ನೆರಡು ಸಾವಿರ ಔದ್ಯೋಗಿಕ ಘಟಕಗಳು! ಧಾರಾವಿ ಪರಿಸರ ಕೊಳಕಾಗಿರಬಹುದು, ಅಲ್ಲಿನ ಜನರ ಕಸುಬು, ಬದುಕು ಮಾತ್ರ ಕೆಸರಿನಲ್ಲಿ ಅರಳಿದ ಕಮಲದಂತಿದೆ.

  ಸರಕಾರದ ಅಸಡ್ಡೆಗೊಳಗಾಗಿರುವ ಧಾರಾವಿಯ ಈ ದೇಶದ ಅರ್ಥ ವ್ಯವಸ್ಥೆಗೆ ದೇಣಿಗೆಯನ್ನು ಗಮನಿಸಿರಿ. ಮುಂಬೈಯ ಅತ್ಯಂತ ದೊಡ್ಡ ಲೆದರ್ ಮಾರುಕಟ್ಟೆ ಧಾರಾವಿಯಲ್ಲಿದೆ. ಇಲ್ಲಿ ಉತ್ಪನ್ನವಾಗುವ ಅಪಾರ ಬೇಡಿಕೆ ಇದೆ. ಇನ್ನೊಂದು ಮುಖ್ಯ ರ್ತು ಮಾರುಕಟ್ಟೆ ಸಿದ್ಧ ಉಡುಪುಗಳದ್ದು. ಒಟ್ಟು ಧಾರಾವಿಯ ವಾರ್ಷಿಕ ರ್ತು ವ್ಯವಹಾರ ಸುಮಾರು 3,000 ಕೋಟಿ ರೂಪಾಯಿಗಳು. ಅತ್ಯಂತ ಕನಿಷ್ಠ ಸ್ಥಿತಿಯಲ್ಲಿರುವ ಧಾರಾವಿ ಜೋಪದ ಪಟ್ಟ ಕುಟುಂಬದ ತಿಂಗಳ ಆದಾಯ ಸುಮಾರು 15 ಸಾವಿರ ರೂಪಾಯಿ!
ಹೌದು ಇದು ಸಾಧ್ಯವಾಗಲು ಕಾರಣ ಧಾರಾವಿಯಲ್ಲಿ ಯಾರೂ ಕೆಲಸ ಇಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. 90 ಪ್ರತಿಶತ ಜನರು ಧಾರಾವಿಯಲ್ಲೇ ಏನಾದರೊಂದು ಕೆಲಸದಲ್ಲಿ ನಿರತರಾಗಿರುತ್ತಾರೆ. ಇದೇ ಇಲ್ಲಿನ ವಿಶೇಷತೆ. ಶಿಕ್ಷಿತ ಯುವ ಪೀಳಿಗೆ ಮಾತ್ರ ಆಫೀಸು, ಕಚೇರಿ ಅಂತ ಉದ್ಯೋಗ ಅರಸಿ ಧಾರಾವಿ ಹೊರಗೆ ಹೋಗುತ್ತಾರೆ. ಈಗ ಧಾರಾವಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್, ಓಎನ್‌ಜಿಸಿ ಮುಂತಾದ ಬೃಹತ್ ಕಂಪೆನಿಗಳೂ ತಲೆ ಎತ್ತಿವೆ.

ಇಡೀ ಧಾರಾವಿಯನ್ನು ಈ ರೀತಿಯಾಗಿಯೂ ಗಮನಿಸಬಹುದು. ಕಾಮ್‌ರಾಜ್‌ನಗರ, ಮಂಗಲಪಾಡಿ, ಪಾಲ್‌ವಾಡಿ, ನಯಾ ಬಾಶ್ ಡುಪ್ಲಿಕೇಟ್ ತಮಿಳುನಾಡನ್ನು ನೆನಪಿಸಿದರೆ, ನವಾಬ್ ನಗರ, ದರ್ಗಾಚಾಶ್, ಜಲೀಲ್ ಕಾಂಪೌಂಡ್, ನಯಾ ನಗರ ಡುಪ್ಲಿಕೇಟ್ ಜಾನ್‌ಪುರ, ಗೊಂಡಾವನ್ನು ದರ್ಶಿಸುತ್ತದೆ. ಕಸ ಕೊಳಚೆಗಳಿಂದ ರಾಚುವ ನಾಯಕ್ ನಗರ ಮತ್ತು ಅಂಬೇಡ್ಕರ್ ನಗರ ಹಾಗೆಯೇ ಕೋಳಿವಾಡದ ಹೋಶಿ ಮೈದಾನದ ಮೂಲೆಯೊಂದರಲ್ಲಿರುವ ಏಕವೀರ ದೇಸೀ ಸರಾಯಿ ಅಂಗಡಿ ಬೆಳಗಾಗುವ ಮೊದಲೇ (4 ಗಂಟೆಗೆ) ತೆರೆದು ರಾತ್ರಿ 1ರ ನಂತರ ಮುಚ್ಚುವುದು ಸಹ ಹಳೆ ಧಾರಾವಿಯ ಪಳೆಯುಳಿಕೆಗಳಂತೆ ಭಾಸವಾಗುತ್ತವೆ.

ಧಾರಾವಿಯ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ 60ರಷ್ಟು ಹಿಂದು, 30ರಷ್ಟು ಮುಸ್ಲಿಂ, 6ರಷ್ಟು ಕ್ರಿಶ್ಚಿಯನ್ ಹಾಗೂ 4ರಷ್ಟು ಜೈನ, ಇತ್ಯಾದಿ ಧರ್ಮೀಯರಿದ್ದಾರೆ.

 ಮಧ್ಯ ಧಾರಾವಿಯ ಮುಖ್ಯ ರಸ್ತೆಯಲ್ಲಿ 1887ರಲ್ಲಿ ಸ್ಥಾಪನೆಗೊಂಡ ಜಾಮಾ ಮಸೀದಿ, ‘ಬಡೇ ಮಶ್‌ಜಿದ್’ ಅಂತ ಕರೆಯಲ್ಪಡುತ್ತಿದೆ. ಮಂಗಲಪಾಡಿ ಸ್ಥಾಪನೆಗೊಂಡಿದೆ. ನಿರಂತರ 102 ವರ್ಷಗಳಿಂದ ಇಲ್ಲಿ ಗಣೇಶೋತ್ಸವ ಆಚರಿಸುತ್ತ ಬಂದಿರುವುದು ಉಲ್ಲೇಖನೀಯ. ಇದೇ ಮಂದಿರದ ವಠಾರದಲ್ಲಿ 1924ರಿಂದ ತಮಿಳು ಮತ್ತು ಆಂಗ್ಲ ಮಾಧ್ಯಮದ ಶಾಲೆಯನ್ನೂ ತೆರೆದಿರುತ್ತಾರೆ.
 ಪಶ್ಚಿಮ ಮಾಟುಂಗ ರೈಲ್ವೆ ಲೇನಿಗೆ ಚಾಚಿಕೊಂಡು ಧಾರಾವಿಯನ್ನು ತಲುಪುವ ಜೋಪಡಿಗಳ ಸಾಲೇ ಲೇಬರ್ ಕ್ಯಾಂಪ್. ಹರ್ಯಾನದಿಂದ ಬಂದು ನೆಲೆನಿಂತ ವಾಲ್ಮೀಕಿ ಎಂಬ ಅತ್ಯಂತ ತಳವರ್ಗದ ದಲಿತ ಜನಾಂಗ. ಇವರು ತಲಾಂತರದಿಂದ ಮಹಾನಗರದ ಶೌಚಾಲಯಗಳ ಸಾಯಿ ಕೆಲಸದಲ್ಲಿ ನಿರತರಾಗಿರುವರು.

ಧಾರಾವಿಯಲ್ಲಿ ಇನ್ನೊಂದು ಮಹತ್ವದ ಉದ್ಯಮ ತ್ಯಾಜ್ಯ ವಸ್ತುಗಳ ಪುನರ್ ನಿರ್ಮಾಣ ಹಾಗೂ ಚರ್ಮ ಹದಮಾಡುವ ಉದ್ಯಮ. ಸರಕಾರ ಪ್ರಾಣಿ ಹತ್ಯೆ ಹಾಗೂ ಚರ್ಮ ಹದಮಾಡುವ ಘಟಕವನ್ನು ದೂರ ದೇವನಾರಿಗೆ ಸ್ಥಳಾಂತರಿಸಿದ ಮೇಲೆ ಧಾರಾವಿಯಲ್ಲಿ ಈ ಘಟಕಗಳಲ್ಲಿ ದುಡಿಯುವ ಮುಸ್ಲಿಂ ಕಾರ್ಮಿಕರು ಚಿಂತಾಕ್ರಾಂತರಾದುದು ನಿಜ. ಆದರೂ ಅಬುಬಕರ್ ಬಾಶ್, ಮಂಗಲವಾಡಿ ಓಣಿಗಳಲ್ಲಿ ಘಮ್ಮೆಂದು ಹಬ್ಬುವ ವಾಸನೆ ಈಗಲೂ ಪ್ರಾಣಿಗಳ ಚರ್ಮ ಹದ ಮಾಡುವುದನ್ನು ಸಾರುತ್ತವೆ.

ಸುಮಾರು ಎಪ್ಪತ್ತು ಎಂಬತ್ತರ ದಶಕ. ಧಾರಾವಿಯಲ್ಲಿ ಕಳ್ಳಭಟ್ಟಿ ಸರಾಯಿ, ಕಪ್ಪು ಹಣ ಮತ್ತು ದಾದಾಗಿರಿ ತಾರಕಕ್ಕೇರಿ ಮಚ್ಚು ಕತ್ತಿ ಝಳಪಿಸುತ್ತಿದ್ದ ಕಾಲ. ಪೊಲೀಸರೂ ಅತ್ತ ಸುಳಿಯುವಂತಿರದೆ ಅಕ್ಷರಶಃ ಜಂಗಲ್ ರಾಜ್ಯ. ನಸುಗತ್ತಲಾಗುತ್ತಲೇ ಹೆಂಡ, ಹಣ, ಹೆಣ್ಣು ಸರಬಾರಾಜಿಗೆ ಸಜ್ಜಾಗುವ ಸಮಯ. ಪ್ರಶ್ನಿಸಿದರೆ ಯಾವುದೇ ಕ್ಷಣ ಎಲ್ಲೆಂದರಲ್ಲಿ ಹೆಣ ಉರುಳುತ್ತಿದ್ದವು. ಹಾಗಾಗಿ ಸಂಜೆಯಾಗುತ್ತಲೇ ಯಾವುದೇ ಟ್ಯಾಕ್ಸಿ ಧಾರಾವಿಗೆ ಬಾಡಿಗೆಗೆ ಹೋಗಲು ಸಿದ್ಧರಿರುತ್ತಿರಲಿಲ್ಲ. ಹಳೇ ಮಂದಿ ಈಗಲೂ ಆ ಕರಾಳ ದಿನಗಳನ್ನು ಭಯದಿಂದಲೇ ನೆನೆಯುತ್ತಾರೆ.

1992ರಲ್ಲಿ ಬಾಬರಿ ಮಸೀದಿ ಧ್ವಂಸ ನಂತರ 1993ರ ಆದಿಯಲ್ಲಿ ನಡೆದ ಕೋಮು ಗಲಭೆಗೆ ಧಾರಾವಿಯೂ ಹೊರತಾಗಿರಲಿಲ್ಲ. ಅಲ್ಲಿ ತನಕ ಕೇವಲ 2-3 ಅಡಿ ಅಂತರದ ಓಣಿಯ ಆಚೆ ಈಚೆ ಅನ್ಯೋನ್ಯವಾಗಿ ಸುಃಖ ದುಃಖ ಹಂಚಿಕೊಳ್ಳುತ್ತಿದ್ದವರು ಕತ್ತಿ ಮಚ್ಚು ಹಿಡಿದು ನಿಲ್ಲುವಂತಾಯಿತು. ಜೋಪಡಿಗಳ ನಡುವೆ ದಿಡೀರನೆ ತಗಡು ಝರಿಗಳ ಗೋಡೆಗಳು ಎದ್ದುನಿಂತವು. ಮಿನಿ ಭಾರತದಂತಿದ್ದ ಧಾರಾವಿ ‘ಹಿಂದೂ-ಮುಸ್ಲಿಂ’ ಎಂದು ಇಬ್ಭಾಗವಾಗಿ ಬುಸುಗುಡತೊಡಗಿತು.

  ಚುನಾವಣೆಗಳ ಸಂದರ್ಭ ಧಾರಾವಿಗೆ ಹೊಸ ಹುರುಪು. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಚಿದಂಬರಂ, ನವಜೋತ್ ಸಿಂಗ್ ಸಿಧು, ಮಲ್ಲಿಕಾರ್ಜುನ ಖರ್ಗೆ, ಸೂಪರ್ ಸ್ಟಾರ್ ಶರತ್ ಹೀಗೆ ಅತಿರಥರು ತಂದು ತಮ್ಮ ತಮ್ಮ ಜನರನ್ನು ಓಲೈಸಿದ್ದನ್ನು ಸ್ಥಳೀಯರು ನೆನೆಯುತ್ತಾರೆ. ಹಬ್ಬ ಹರಿದಿನಗಳ ಸಂದರ್ಭ ಇದು ಧಾರಾವಿ ಸಂಭ್ರಮಿಸುತ್ತದೆ. ಗೋಲ್ಡ್ ಫೀಲ್ಡ್ ಕಾಂಪೌಂಡ್ ಪಕ್ಕದಲ್ಲಿ(ಜೈನ ದೆರಾಸರ್ ಕಟ್ಟಡ) ‘ಧಾರಾವಿ ಕಾ ರಾಜ’ ಗಣಪತಿ ವಿಜೃಂಭಿಸುತ್ತಾನೆ. ನವರಾತ್ರಿ ಉತ್ಸವ, ಕೋಳಿವಾಡದ ಹೋಶಿ ಮೈದಾನದಲ್ಲಿ ನಡೆದವ ಹೋಶಿ ಹುಣ್ಣಿಮೆ ಸಂಭ್ರಮ; ಹನುಮ ಜಯಂತಿ ಸಂದರ್ಭ ಹನುಮ ಪಲ್ಲಕಿಯಲ್ಲಿ ಕುಳಿತು ಇಡೀ ಧಾರಾವಿಯನ್ನು ಸುತ್ತುವ ಸಡಗರ; ದೀಪಾವಳಿಯಲ್ಲಿ ಪಟಾಕಿ ಸದ್ದುಗಳೊಂದಿಗೆ ಕುಂಬಾರವಾಡದ ಮಣ್ಣು ಹಣತೆಗಳ ಮಿನುಗು ಲೋಕ, ರಮಝಾನ್, ಈದ್ ಹೀಗೆ ಧಾರಾವಿ ಶ್ರಮಜೀವಿಗಳು ಬಿಚ್ಚು ಮನಸ್ಸಿನಿಂದ ಜೀವನೋಲ್ಲಾಸ ಮೊೆಯುತ್ತಾರೆ.

  ಮುಂಬೈಯ ಹೃದಯ ಭಾಗದಲ್ಲಿರುವ ಈ ಇಂತಹ ಧಾರಾವಿಗೆ ಕಾರ್ಪೊರೇಟ್ ಜಗತ್ತಿನ ಹದ್ದಿನ ಕಣ್ಣು ಬೀಳದಿರಲು ಸಾಧ್ಯವೇ. ಕಳೆದೆರಡು ದಶಕಗಳಿಂದ ಬದಲಾವಣೆಯ ಗಾಳಿ ಬೀಸತೊಡಗಿದೆ. ಕಚ್ಚಾ ಜೋಪಡಿಗಳು ಪಕ್ಕಾ ಆಗಿವೆ. ಅನೇಕ ಕಟ್ಟಡಗಳೂ ಪುನರ್ ವಸತಿ ಯೋಜನೆಯಡಿ ಎದ್ದುನಿಂತಿವೆ. ಆದರೂ ಯಾವುದೇ ದಾಖಲಾತಿ ಒದಗಿಸಲಾಗಿದೆ ತ್ರಿಶಂಕು ಸ್ಥಿತಿಯಲ್ಲಿರುವವರು ಲಕ್ಷಾಂತರ ಇದ್ದಾರೆ. ಸ್ಲಮ್ ಪುನರ್ ಅಭಿವೃದ್ಧಿ ಪ್ರಾಕಾರ 2,000 ದಿಂದಲೇ ಧಾರಾವಿ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಬಂದಿದೆ. ಈ ಹಿಂದಿನ 4 ಯೋಜನೆಗಳು ವಿಲಗೊಳ್ಳಲು ಮುಖ್ಯ ಕಾರಣ. ವಿಶಾಲ ಧಾರಾವಿಯ ಅಸಂಖ್ಯ ಅನಕೃತ ವಾಸ್ತವ್ಯ. ಆಗ 15 ಸಾವಿರ ಕೋಟಿ ವೆಚ್ಚದ ಅಂದಾಜು ಈಗ 22 ಸಾವಿರ ಕೋಟಿಗೇರಿದೆ. ಇದೀಗ ಇಡೀ ಧಾರಾವಿಯನ್ನು ಇದು ಸೆಕ್ಟರ್‌ಗಳನ್ನಾಗಿ ವಿಂಗಡಿಸಿ, ಪ್ರತಿ ಸೆಕ್ಟರ್‌ನಲ್ಲಿ 10ರಿಂದ 15 ಸಾವಿರ ಜೋಪಡಿಗಳನ್ನು ಒಳಗೊಳ್ಳುವಂತೆ ವಿಂಗಡಿಸಲಾಗುವುದು. ಸಣ್ಣ ಸಣ್ಣ ಬಿಲ್ಡರ್‌ಗಳನ್ನು ಇತ್ತ ಸೆಳೆಯಲು ಪ್ರತೀ ವಿಭಾಗವನ್ನು ಇನ್ನೂ ಚಿಕ್ಕ ಚಿಕ್ಕ ಉಪವಿಭಾಗಗಳನ್ನಾಗಿ ವಿಂಗಡಿಸುವ ಆಲೋಚನೆಯೂ ಇದೆ. ಸುಮಾರು 3 ಕೋಟಿ ಚದರ ಅಡಿ ಭೂಮಿ ವಾಸ್ತವ್ಯ, ಶಾಲೆ, ರಸ್ತೆ, ಉದ್ಯಾನವನ ಇತ್ಯಾದಿಗಳೀಗೆ ಮೀಸಲಾದರೆ ಸರಿಸುಮಾರು ಅಷ್ಟೇ ಸ್ಥಳ ವಾಣಿಜ್ಯ ಬಳಕೆಗೂ ದೊರೆಯುವಂತಾಗುವುದು.

ಧಾರಾವಿ ಮತ್ತು ಕನ್ನಡಿಗರು
 
 ಧಾರಾವಿಯಲ್ಲಿ ಏನಿಲ್ಲವೆಂದರೂ ಎಪ್ಪತ್ತೈದು ಸಾವಿರ ಕನ್ನಡಿಗರಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಕೂಲಿನಾಲಿ ಅರಸುತ್ತ ಬಂದವರು. ಧಾರಾವಿಯ ಮುಕುಂದ ನಗರದ ಆಸುಪಾಸು ಅಕ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನವರು ರೈಲ್ವೆ ಇಲಾಖೆಯಲ್ಲಿ ದಿನಗೂಲಿಗಳಾಗಿ ಭರ್ತಿ ಹೊಂದಿದವರು. ‘ಆಗ ರೈಲ್ವೆಯಲ್ಲಿ ಸ್ವಚ್ಛತಾ ವಿಭಾಗದಲ್ಲಿ ಭರ್ತಿ ನಡೆಯುತ್ತಿತ್ತು. ಅಲ್ಲಿ ಅತೀ ಕಡಿಮೆ ದಿನಗೂಲಿ ಸಿಗುತ್ತಿದ್ದುದರಿಂದ ಯಾರೂ ಅತ್ತ ಗಮನಹರಿಸುತ್ತಿರಲಿಲ್ಲ. ಆದರೆ ಕನ್ನಡಿಗರು ತಮ್ಮವರನ್ನು ಹುಡುಕಿ ಹುಡುಕಿ ಎಳೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸುತ್ತಿದ್ದರು. ’ ಎಂದು ಸಂಜಯ್‌ಗಾಂ ನಗರದಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಕನ್ನಡಿಗ ಮಾರಪ್ಪ-ಗುಂಜಲಮ್ಮ ದಂಪತಿ ಹೇಳುತ್ತಾರೆ. ಬಿಡುವಿನ ವೇಳೆ ತಮ್ಮ ಮಕ್ಕಳೊಡನೆ ಕತ್ತರಿಸಿ ಉಳಿದ ಬಟ್ಟೆಯ ತುಂಡುಗಳಿಂದ ಸ್ಟೀಲ್ ಕಾರ್ಖಾನೆಯಲ್ಲಿ ಪಾತ್ರೆಗಳನ್ನು ಒರೆಸಲು ಉಪಯೋಗಿಸುವ ಚಂಡೆಗಳನ್ನು ಮಾಡುತ್ತಾರೆ. ಹಿಂದೂ ಮುಸ್ಲಿಂ ಗಲಾಟೆ ಸಂದರ್ಭ ಅಸಹಾಯಕತೆಯಿಂದ ಲಾಯನಗೈಯ್ಯುತ್ತಿದ್ದ ಮುಸ್ಲಿಂ ಮಹಿಳೆಯರು ಮಕ್ಕಳಿಗೆ ತಾತ್ಕಾಲಿಕ ಆಶ್ರಯ ನೀಡಿ, ಅವರನ್ನು ತಮ್ಮೂರಿಗೆ ಹೋಗುವ ರೈಲ್‌ನಲ್ಲಿ ಬಿಟ್ಟು ಬಂದ ಘಟನೆಯನ್ನು ನೆನಪಿಸಿಕೊಂಡಾಕೆ ಮುಕುಂದ ನಗರ ನಿವಾಸಿ ಸಂಪತಮ್ಮ ಮಹದೇವ. ಈಕೆ ನಿರುದ್ಯೋಗಿ ಪತಿಯೊಂದಿಗೆ ಪುಟ್ಟ ಜೋಪಡಿಯಲ್ಲಿ ಅಜ್ಜತ್ ಪಾಪಡ್ ಬ್ರಾಂಡ್‌ನ ಹಪ್ಪಳ ಮಾಡುವುದರಲ್ಲಿ ನಿಪುಣೆ. ದಿನಕ್ಕೆ ಸರಾಸರಿ 400-450 ಹಪ್ಪಳ ಮಾಡುತ್ತಾರೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಕಲಿತ ಮಗಳು ಯಾರನ್ನೋ ಮದುವೆಯಾಗಿ ದೂರ ಹೋದಾಗ ಕಂಗೆಟ್ಟ ದಂಪತಿಗಳು ಮತ್ತೆ ಕೆಲವೇ ವರ್ಷಗಳಲ್ಲಿ ಮಗಳನ್ನು ಸುಟ್ಟದೇಹದೊಂದಿಗೆ ಆಸ್ಪತ್ರೆಯಲ್ಲಿ ನೋಡಿದ್ದು. ಕೆಲಸ ಕಾರ್ಯ ಇಲ್ಲದ ತಲೆಹಿಡುಕ ಗಂಡನೇ ಎಳೆ ಹೆಂಡತಿಯ ಜೀವಕ್ಕೆ ಬೆಂಕಿ ಹಚ್ಚಿದ್ದನಂತೆ. ‘ನನ್ನ ಮಗುವನ್ನು ನೋಡಿಕೊ ಅಮ್ಮ...’ ಅಂತಂದು ಮಗಳು ಪ್ರಾಣ ಬಿಟ್ಟಳು. ನಾಲ್ಕನೇ ತರಗತಿಯಲ್ಲಿರುವ ಮೊಮ್ಮಗನನ್ನು ಬಡಪಾಯಿ ದಂಪತಿ ಆಂಗ್ಲಮಾಧ್ಯಮ ಶಾಲೆಗೆ ಸೇರಿಸಿದ್ದಾರೆ. ಇಂತಹ ಕರುಳು ಹಿಂಡುವ ಕಥೆ ವ್ಯಥೆ ಅವೆಷ್ಟೋ...

 ಧಾರಾವಿಯ ಮುಖ್ಯ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನ ಕನ್ನಡಿಗರದ್ದು. ಸಂತ ಚೆನ್ನಯ್ಯ ಮಾದಿಗರ ಸಂಘದ ಉಸ್ತುವಾರಿಯಲ್ಲಿರುವ ದೇವಸ್ಥಾನದ ಹತ್ತಿರದಲ್ಲೆ ಬಾಲವಾಡಿ ಶಾಲೆ, ವ್ಯಾಯಾಮ ಶಾಲೆಯನ್ನೂ ನಡೆಸುತ್ತಿದ್ದಾರೆ. ರಾಜೀವಗಾಂ ನಗರದಲ್ಲಿ ಕನ್ನಡಿಗರ ‘ಕನ್ನಡ ಮೆಥೋಡಿಸ್ಟ್ ಚರ್ಚ್’ ಇದೆ. ಲಿಂಕ್ ರೋಡ್‌ನಲ್ಲಿ 1992ರಲ್ಲಿ ಕನ್ನಡಿಗರೇ ನಿರ್ಮಿಸಿದ ‘ಮಹಾತ್ಮ ಗಾಂ ಕೊ-ಆಪ್ ಹೌಸಿಂಗ್ ಸೊಸೈಟಿ’ ಇದೆ. ಇದರ ಬೋರ್ಡ್ ಕನ್ನಡದಲ್ಲೇ ಇರುವುದು ಗಮನಾರ್ಹ.

   ಎಲ್ಲಕ್ಕೂ ಮುಖ್ಯವಾಗಿ ಧಾರಾವಿ ಕನ್ನಡಿಗರ ಸಾಹಸಕ್ಕೆ ಮುಕುಟವಿಟ್ಟಂತೆ. ಸಂತ ಕಕ್ಮಯ್ಯ ಮಾರ್ಗದಲ್ಲಿ 1975ರಲ್ಲಿ ಆರಂಭಗೊಂಡ ಡಾ. ಅಂಬೇಡ್ಕರ್ ಹೈಸ್ಕೂಲು ಮತ್ತು ಜೂ. ಕಾಲೇಜು ಹಾಗೂ ಮುನ್ಸಿಪಾಲಿಟಿಯ 1ರಿಂದ 7ನೆ ತರಗತಿ ತನಕ ಕನ್ನಡ ಶಾಲೆ. ಕನ್ನಡ ಮಾಧ್ಯಮ ಹೈಸ್ಕೂಲು ಮತ್ತು ಜೂ. ಕಾಲೇಜು ಸ್ಥಾಪಕರು ‘ಆಂಧ್ರ ಕರ್ನಾಟಕ ದಲಿತ ವರ್ಗ ಸಂಘ’. ದಶಕಗಳ ಹಿಂದೆ ಒಂದೂವರೆ ಸಾವಿರ ಕನ್ನಡ ವಿದ್ಯಾರ್ಥಿಗಳಿದ್ದರೆ ಈಗ ಆ ಸಂಖ್ಯೆ 300ರಿಂದ 400ಕ್ಕೆ ಇಳಿದಿದೆ. ದಾರಾವಿ-ಸಾಯನ್ ರೈಲ್ವೆ ತೂಗುಮಾರ್ಗ ಪಕ್ಕದಲ್ಲಿ ದೋಭಿ ಘಾಟ್‌ನಲ್ಲಿರುವ ಕನ್ನಡಿಗರ ಎಲ್ಲಮ್ಮ ಗುಡಿ 80 ವರ್ಷಗಳಿಂದ ಪ್ರಸಿದ್ಧಿಯಲ್ಲಿದೆ. ಎರಡು ತಿಂಗಳ ಹಿಂದೆ ಮುನ್ಸಿಪಾಲಿಟಿ ರಸ್ತೆ ಅಗಲೀಕರಣಕ್ಕಾಗಿ ಗುಡಿಯನ್ನು ಒಡೆಯುವ ನೋಟಿಸನ್ನು ಕೊಟ್ಟಾಗ ಜನ ವಿರೋಸಿದ್ದು ಹೀಗೆ. ‘ನೀವು ಗುಡಿಯನ್ನು ಕೆಡವಿದರೆ ನವು ಧಾರಾವಿಯ ಎಲ್ಲ ಮಸೀದಿಗಳನ್ನು ಒಡೆದು ಹಾಕುತ್ತೇವೆ’ ಅಬ್ಬಾ! ಮುನ್ಸಿಪಾಲಿಟಿ ಗಪ್‌ಚುಪ್!
ಇತ್ತೀಚೆಗೆ ಕನ್ನಡ ರಿಯಾಲಿಟಿ ಶೋ ಶೂಟಿಂಗೋಸ್ಕರ ಜನಪ್ರಿಯ ಚಾನಲ್ ತಂಡ ಯಾದಗಿರಿ ಮೂಲಕ ಭೀಮಶಪ್ಪ ಚಿಲ್ಲಕ ಮತ್ತು ಪಕ್ಕದಲ್ಲೇ ಇರುವ ಅವರ ಸಹೋದರನ ಮನೆಯಲ್ಲಿ ಒಂದು ವಾರ ಉಳಿದುಕೊಂಡಿದ್ದರಂತೆ.

 ಇವರ ಮನೆಯೋ ಐದಾರು ಅಡಿ ಉದ್ದವಿದ್ದರೆ ಮೂರ್ನಾಲ್ಕು ಅಡಿ ಅಗಲ! ಅಷ್ಟೇ ಸ್ಥಳ ಮೇಲಿನ ಸೂರಿನಲ್ಲಿ. ಧಾರಾವಿ ಅಕ್ಕಪಕ್ಕದ ಮಹತ್ವದ ಸ್ಥಳಗಳನ್ನು ಗೈಡ್‌ಮಾಡುತ್ತ ಸಂಭ್ರಮದಿಂದ ಅವರಿಗೆ ಸಾಥ್ ನೀಡಿದವನು ಇವರ ಹರೆಯದ ಮಗ ಭೀಮರಾಯ ಚಿಲ್ಲ. ಎಲ್ಲ ಮುಗಿದ ಮೇಲೆ ಶೂಟಿಮಗ್ ಮಂದಿ ‘ಥ್ಯಾಂಕ್ಸ್’ ಹೇಳಿ ಹೋದರಂತೆ. ಇದಕ್ಕಿಂತ ದೊಡ್ಡ ಶೋಷಣೆ ಯಾವುದಿದೆ?
ಚಿಲ್ಕರವರ ಕೋಲಿಗೆ ಬಾಚಿಕೊಂಡಿರುವುದು ರವೀಂದ್ರ ಪೆಡ್ಡೇಕರನ ...... ಟೆಕ್ಸ್‌ಟೈಲ್ ಡಿಸೈಂಗ್‌ನಲ್ಲಿ ನುರಿತ ಮಂದಿಯಲ್ಲಿ ಬಟ್ಟೆ ಗಿರಣಿಗಳು ಮುಚ್ಚಲ್ಪಟ್ಟಿರುವುದರಿಂದ ಈಗ ಇವರ ಹಾಸ್ಟೆಲ್‌ಗೆ ಬೇಡಿಕೆ ಇಲ್ಲ. ಈಗ ಏನಿದ್ದರೂ ಕಂಪ್ಯೂಟರ್‌ನಲ್ಲಿ ‘ಕಟ್ ಆ್ಯಂಡ್ ಪೇಸ್ಟ್ ಡಿಸೈನ್’ ಗಳಿಗೆ ಬೇಡಿಕೆ ಅಂತ ನಿಟ್ಟುಸಿರು ಬಿಡುತ್ತಾನೆ.

 ಮುಕುಂದ ನಗರದಲ್ಲಿ ಆರೇಳು ದಶಕಗಳಿಂದ ನೆಲೆಸಿರುವ ಮರಾಠಿಗ ಸುತಾರ್ ಕಾಕಾ ಮರದಿಂದ ದೇವರ ಮಂಟಪ ಮಾಡುವುದರಲ್ಲಿ ನುರಿತ ಕುಶಲ ಕರ್ಮಿ. ‘ನಲ್ವತ್ತು ವರ್ಷಗಳ ಹಿಂದೆ ಇಲ್ಲಿಂದಲೇ ದೂರದ ಸೈರನ್‌ನಿಂದ ರೈಲುಗಳು ಓಡಾಡುವುದು ಕಾಣುತ್ತಿತ್ತು. ಸುತ್ತಲೆಲ್ಲಾ ಕೊಳಚೆ, ಹೊಂಡ, ಕಾಡು, ಕಾಲು ದಾರಿಯೂ ಇರಲಿಲ್ಲ. ಒಂದೆರಡು ಕಿಲೋಮೀಟರ್ ದೂರ ಕಲ್ಲು ಚಪ್ಪಡಿಗಳನ್ನು ಹತ್ತಿ ಹಾರಿ ಈಚೆಗೆ ಬರಬೇಕಾಗುತ್ತಿತ್ತು. ಓ ಅಲ್ಲೊಂದು ದೊಡ್ಡ ಕೆರೆಯಂತಹ ಹೊಂಡ ಇತ್ತು. ಕಳ್ಳಭಟ್ಟಿ ಸರಾಯಿ ಕೊಡಗಳನ್ನು ಅಲ್ಲಿ ಹುದುಗಿಸಿಡುತ್ತಿದ್ದರು. ಸಂಜೆಯಾಗುವುದೇ ತಡ ಇಷ್ಟುದ್ದ ಸೊಳ್ಳೆಗಳು ದಾಳಿಯಿಡುತ್ತಿದ್ದವು.... ’ ಆ ದಿನಗಳನ್ನು ಮೆಲುಕು ಹಾಕ ತೊಡಗಿದರು ಸುತಾರ್ ಕಾಕಾ.
ಧಾರಾವಿ ಬದಲಾಗುತ್ತಲೇ ಇದೆ. ವಶಿಯಾದ 631 ದೊಡ್ಡ ಸ್ಲಮ್ ಎಂಬ ಕುಖ್ಯಾತಿಯಿಂದ ಬಿಡುಡಗೆಯನ್ನು ಪಡೆಯಬಹುದು. ಆದರೆ ಸರಕಾರಿ ದಾಖಲಾತಿಯಿಂದ ಹೊರಗುಳಿಯುವ ಲಕ್ಷಾಂತರ ಶ್ರಮಿಕರ ಪಾಡೇನು? ದಶಕಗಳಿಂದ ಕೊಳಚೆಯಲ್ಲಿ ಉಂಡು ಬೆಳೆದ ಜನರಿಗೆ ಆಧುನಿಕ ್ಲಾಟ್ ಬದುಕು ಸಹ್ಯವಾಗಬಹುದೆ ಕಾರಣ ಮುಂಬೈ ಇತರೆಡೆ ಸ್ಲಮ್ ಅಭಿವೃದ್ಧಿ ಸವಲತ್ತಿನಲ್ಲಿ ಪುನರ್‌ವಸತಿ ಪಡೆದ ಜನರು ಅದನ್ನು ಮಾರಿಯೋ, ಬಾಡಿಗೆಗೆ ಕೊಟ್ಟೊ ಪಾತ್ರೆ ಪಗಡಿ ಎತ್ತಿಕೊಂಡು ಮತ್ತೊಮ್ಮೆ ಕೊಳಚೆ ಪ್ರದೇಶ ಹುಡುಕಿಕೊಂಡು ಹೋದಂತಹ ಉದಾಹರಣೆ ಬಹಳಷ್ಟಿದೆ. ಧಾರಾವಿಯನ್ನು ಮತ್ತೆ ಮತ್ತೆ ಭೇಟಿ ನೀಡುವ ನನ್ನಂತಹವರಿಗೆ ಅನ್ನಿಸುವುದು, ಧಾರಾವಿ ಆಗ ಇತ್ತು, ಈಗ ಇಲ್ಲ.

Writer - ಗೋಪಾಲ್ ತ್ರಾಸಿ ಮುಂಬೈ

contributor

Editor - ಗೋಪಾಲ್ ತ್ರಾಸಿ ಮುಂಬೈ

contributor

Similar News