ಅಡಿಕೆಗೆ ಯಾರಿಟ್ಟರು ಈ ಚುಕ್ಕಿ? ಕಪ್ಪು ಚುಕ್ಕಿ!
ಅಡಿಕೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಲ್ಲಿಯ ನೆಲಮೂಲ ರೈತ ಶೋಧನೆಗಳೇ ಮದ್ದು ಕಂಡುಹಿಡಿದಿವೆ. ವರ್ಷಕ್ಕೊಮ್ಮೆ ಅಗತ್ತೆ ಮಾಡಿ, ಬುಡ ಬಿಡಿಸಿ ಹಟ್ಟಿಯ ಬುಟ್ಟಿ ಗೊಬ್ಬರ, ಒಲೆಯ ಬೂದಿ, ಸುಡು ಮಣ್ಣು ಕೊಟ್ಟು ಕುಬೆಯ ಸಿಂಗಾರದ ಹರಳು ಕಾಯಿಗೆ ಎರಡು ಬಾರಿ ಮೈಲುತುತ್ತು, ಸುಣ್ಣ ಸಿಂಪಡಿಸಿದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ಏಕ್ದಂ ಬಂದೆರಗಿದ ಮಾರಿಗಳು ರೈತ ಜ್ಞಾನಿಗಳನ್ನು ಬಿಡಿ, ವಿಶ್ವವಿದ್ಯಾನಿಲಯಗಳ ವಿಜ್ಞಾನಿಯ ಕೈ ನಿಯಂತ್ರಣಕ್ಕೂ ಸಿಗದೆ ಅಪಾಯದ ಹಂತವನ್ನು ದಾಟಿ ಮುನ್ನುಗ್ಗುತ್ತಿದೆ.
ಅಂತೂ ಇಂತೂ ಅಲ್ಪಸ್ವಲ್ಪ ಬೆಳೆವಿಮೆ ರೈತರ ಖಾತೆಗೆ ಜಮಾ ಆಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೊತ್ತ ತುಂಬಾ ಕಡಿಮೆಯೇ. ರೈತರ ನಿರೀಕ್ಷೆ ಮತ್ತು ಕಾತರ ಮಾತ್ರ ಬೇರೆ ವರ್ಷಗಳಿಗಿಂತ ಜಾಸ್ತಿಯೇ ಇತ್ತು. ಇದಕ್ಕೆ ಬಲವಾದ ಕಾರಣ ಈ ವರ್ಷದ ಅತಿವೃಷ್ಟಿ. ದೀರ್ಘಾವಧಿ ಬೀಸು ಮಳೆ ಬಯಲು ಸೀಮೆಯೂ ಸೇರಿ ಎಲ್ಲೆಡೆಯ ರೈತರನ್ನು ಹೈರಾಣಮಾಡಿದೆ. ಅಲ್ಪಕಾಲೀನ ಬೆಳೆಗಳಿಗಿಂತ ಈ ಬಾರಿ ಹೆಚ್ಚು ಪೆಟ್ಟು ತಿಂದವರು ಬಹುವಾರ್ಷಿಕ ಬೆಳೆಗಾರರು. ಬಹು ಮುಖ್ಯವಾಗಿ ಕರಾವಳಿ- ಮಲೆನಾಡಿನ ಅಡಿಕೆ ಕೃಷಿಕರು.
ಕಳೆದ ಒಂದೆರಡು ವರ್ಷಗಳಿಂದ ಎಲೆಚುಕ್ಕಿ, ಹಳದಿ, ಬೇರು ಹುಳ, ಚಂಡೆ, ಮುಂಡುಸಿರಿ ಮುಂತಾದ ಅನೇಕ ಕಾಯಿಲೆಗಳಿಂದ ಈ ಭಾಗದ ರೈತರು ಉತ್ಪಾದನೆಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿದ್ದಾರೆ. ಆದಾಯ ಕುಂಠಿತಗೊಂಡು ಬಹಳಷ್ಟು ರೈತರಿಗೆ ಕಾಲಿಗೆಳೆದರೆ ತಲೆಗಿಲ್ಲದಂತಹ ಸ್ಥಿತಿ.
ಕಳೆದೊಂದು ಶತಮಾನದಿಂದ ಈ ಭೂಭಾಗದ ನೆಲದವರ ಮಾನ ಕಾಪಾಡಿದ, ಕಿಸೆಗೆ ಒಂದಷ್ಟು ಕಾಸು ತುರುಕಿಸಿದ ಅಡಿಕೆ ಅವರ ಅನೇಕ ಸಂಕಷ್ಟಗಳಿಗೆ ನೆರವಾಗಿದೆ. ಮನೆ, ಕಾರು, ಮಕ್ಕಳ ಓದು, ಮದುವೆ, ಉದ್ಯಮ, ರಾಜಕಾರಣ, ದೇವರ ಅಭಿವೃದ್ಧಿ ಹೀಗೆ ಎಲ್ಲದಕ್ಕೂ ಅಡಿಕೆ ನೆರವಿಗೆ ನಿಂತಿದೆ. ಮಲೆನಾಡಿನ ಎಷ್ಟೋ ಬಡವರ ಮಕ್ಕಳು, ಡಾಕ್ಟರ್ ಆಗುವುದಕ್ಕೆ ಇಂಜಿನಿಯರ್ ಓದುವುದಕ್ಕೆ, ಸ್ಥಳೀಯ ಶಾಲಾ-ಕಾಲೇಜುಗಳಲ್ಲೇ ಓದಿ ಮುಂದೆ ಮಹಾನಗರಗಳಿಗೆ ಸೇರಿಕೊಳ್ಳುವುದಕ್ಕೆ ಅಡಿಕೆ ಹೆದ್ದಾರಿಯಾಗಿತ್ತು. ಈ ಭಾಗದ ದೇವಸ್ಥಾನ, ನಾಗಮಂಡಲ, ಬ್ರಹ್ಮಕಲಶ, ಭೂತ ದೈವಸ್ಥಾನಗಳ ಅಭಿವೃದ್ಧಿಗೆ ಈ ನೆಲದ ಅಡಿಕೆ ಸಹಾಯಹಸ್ತ ಚಾಚಿದೆ. ಯಕ್ಷಗಾನ, ರಂಗಭೂಮಿ, ಶಾಲಾ ವಾರ್ಷಿಕೋತ್ಸವದವರೆಗೂ ಅಡಿಕೆಯ ದುಡ್ಡು ಬುನಾದಿಯಾಗಿದೆ. ಅಡಿಕೆ ಸುಸ್ಥಿರವಾಗಿ ನಿಂತ ಕಾರಣಕ್ಕೆ ಸಾವಿನ ನಕ್ಷೆಯಲ್ಲಿ ಈ ಭಾಗದ ರೈತರ ಆತ್ಮಹತ್ಯೆಯ ಸಂಖ್ಯೆ ತುಂಬಾ ಕಡಿಮೆ. ಪ್ರಭುತ್ವದ ವಿರುದ್ಧ ರೈತ ಹೋರಾಟ ಬಂಡಾಯ, ಹಕ್ಕೊತ್ತಾಯ, ಪ್ರತಿಭಟನೆಗಳೂ ಕಡಿಮೆಯೇ. ಉತ್ತರ ಭಾರತದ ಸಾವಿರಾರು ವಲಸೆ ಕಾರ್ಮಿಕರಿಗೆ ಇಲ್ಲಿಯ ಅಡಿಕೆ ತೋಟಗಳು ದುಡಿಮೆಗೆ ದಾರಿಯಾಗಿ ಆಶ್ರಯ ನೀಡಿವೆ.
ತೆರಿಗೆ ಇಲ್ಲದ ಅಡಿಕೆ ದೊಡ್ಡ ಕೃಷಿಕರಿಗೆ ಕೈ ತುಂಬಾ ಕಾಸು ತುಂಬಿ ಕೌಟುಂಬಿಕ ಮೂಲ ಸರಳತೆ ಮರೆಯಾಗಿ ಆ ಜಾಗದಲ್ಲಿ ಪ್ರತಿಷ್ಠೆ, ವೈಭವ, ಆಡಂಬರ, ವೈಭೋಗಗಳು ಪ್ರತಿನಿತ್ಯಮೆರೆದದ್ದೂ ಹೌದು. ಹಳ್ಳಿಯ ದುಡ್ಡು ನಗರಕ್ಕೂ ರಾಚಿದೆ. ಎಷ್ಟೋ ರೈತರು ಮಹಾನಗರದ ನಡುವೆ ಮನೆ, ಸೈಟ್, ಅಂಗಡಿ ಖರೀದಿಸಿದ್ದಾರೆ. ಗ್ರಾಮದ ಮನೆ ಅಂಗಳದಲ್ಲಿ ಮುಗಿಯಬೇಕಾದ ಕುಟುಂಬದ ಸರಳ ಕೂಡುಕಾರ್ಯಕ್ರಮಗಳು ದುಡ್ಡಿನ ದಾರಿಯಲ್ಲಿ ಪೇಟೆಗೂ ನುಸುಳಿಕೊಂಡು ಬಣ್ಣ ಪಡೆದು ಕೊಂಡಿವೆ. ಸಹಜ ಸಂಪ್ರದಾಯಗಳನ್ನೆಲ್ಲ ಅಡಿಕೆಯ ದುಡ್ಡು ಕಬಳಿಸಿ ಪೇಟೆಯ ಮಾಲ್-ಹಾಲ್‌ಗಳಲ್ಲಿ ರಂಗೋಲಿ ಇಟ್ಟಿದೆ.
ಹೀಗೆ ಕರಾವಳಿ-ಮಲೆನಾಡಿನ ಲಕ್ಷಾಂತರ ರೈತರ ಬದುಕನ್ನು ಲೆಕ್ಕಕ್ಕಿಂತ ಹೆಚ್ಚು ಬೆಳಗಿದ ಅಡಿಕೆಗೆ ಈಗ ಈ ಶತಮಾನದಲ್ಲೇ ಕೇಳರಿಯದ ರೋಗಗಳು ಒಮ್ಮೆಲೇ ಬಂದು ಅಪ್ಪಳಿಸಿದೆ. ವಿಪರೀತ ಮಳೆಗೆ ಅಡಿಕೆ ಕೊಳೆರೋಗಕ್ಕೆ ಕರಗಿ ಹೋಗುವುದನ್ನು ಬಿಟ್ಟರೆ ಈ ಹಿಂದೆ ಬೇರೆ ಮಹಾಮಾರಿಗಳು ಈ ಪ್ರಮಾಣದಲ್ಲಿ ವಕ್ಕರಿಸಿದ ದೃಷ್ಟಾಂತಗಳು ಬಹಳ ಕಡಿಮೆ.
ಅಡಿಕೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಲ್ಲಿಯ ನೆಲಮೂಲ ರೈತ ಶೋಧನೆಗಳೇ ಮದ್ದು ಕಂಡುಹಿಡಿದಿವೆ. ವರ್ಷಕ್ಕೊಮ್ಮೆ ಅಗತ್ತೆ ಮಾಡಿ, ಬುಡ ಬಿಡಿಸಿ ಹಟ್ಟಿಯ ಬುಟ್ಟಿ ಗೊಬ್ಬರ, ಒಲೆಯ ಬೂದಿ, ಸುಡು ಮಣ್ಣು ಕೊಟ್ಟು ಕುಬೆಯ ಸಿಂಗಾರದ ಹರಳು ಕಾಯಿಗೆ ಎರಡು ಬಾರಿ ಮೈಲುತುತ್ತು, ಸುಣ್ಣ ಸಿಂಪಡಿಸಿದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ಏಕ್ದಂ ಬಂದೆರಗಿದ ಮಾರಿಗಳು ರೈತ ಜ್ಞಾನಿಗಳನ್ನು ಬಿಡಿ, ವಿಶ್ವವಿದ್ಯಾನಿಲಯಗಳ ವಿಜ್ಞಾನಿಯ ಕೈ ನಿಯಂತ್ರಣಕ್ಕೂ ಸಿಗದೆ ಅಪಾಯದ ಹಂತವನ್ನು ದಾಟಿ ಮುನ್ನುಗ್ಗುತ್ತಿದೆ. ಕಾಸರಗೋಡಿನ ಬದಿಯಡ್ಕದಿಂದ ಶೃಂಗೇರಿ ಕೊಪ್ಪದ ದಾರಿಯಲ್ಲಿ ಬಾಳೆಹೊನ್ನೂರುವರೆಗೆ ಹೆದ್ದಾರಿ ಗುಂಟ ಸಾಗಿದರೆ ಅಲ್ಲಲ್ಲಿ ಇಕ್ಕಡೆಯ ಅಡಿಕೆ ತೋಟಗಳು ಸಹಜ ಬಣ್ಣ ಕಳೆದುಕೊಂಡು ವಿಕಾರವಾಗಿ ನಿಂತ ದೃಶ್ಯ ಕಂಗಡಿಸುತ್ತದೆ.
ಈ ಹೊತ್ತಿಗೆ ನಾಲ್ಕೈದು ಗೊನೆದೂಗಿ ಕೊಯ್ಲು ಶುರು ಮಾಡುವ ರೈತಾಪಿಗಳಿಗೆ ಧನ್ಯತೆಯ ಭಾವ ಸೃಷ್ಟಿಸಬೇಕಾದ ಕಂಗುಗಳು ಇದ್ದಗೊನೆಗಳಿಗೂ ತೂಕವಿಲ್ಲದೆ ಬಸವಳಿದು, ಸೋಗೆಗಳೆಲ್ಲ ಕರಟಿ ಕೊನೆಚಿಗುರೊಂದು ಮಾತ್ರ ಹಸಿರಾಗಿ ಭೂತದ ಹಾಗೆ ಭಯ ಹುಟ್ಟಿಸುತ್ತಾ ನಿಂತದ್ದನ್ನು ಕಾಣಬಹುದು.
‘‘ಹಳ್ಳಿ ಮನೆಯ ನಮ್ಮ ತೋಟಕ್ಕೆ ಮುಂದೆ ವಾರುಸುದಾರರಿಲ್ಲ, ಗ್ರಾಮಗಳೆಲ್ಲ ವೃದ್ಧಾಶ್ರಮವಾಗುತ್ತಿದೆ, ಹೊಸ ತಲೆಮಾರು ಪಟ್ಟಣಕ್ಕೆ ದಾಂಗುಡಿ ಇಡುತ್ತಿದೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ನಾವು ಕೆಟ್ಟೆವು. ವಯಸ್ಸಾಗಿ ನಡೆಯಲಾರದ ಹೊತ್ತು ಪೊರೆಯುವ ಮಕ್ಕಳು ಮನೆಯಲ್ಲಿ ಇಲ್ಲ, ಜೊತೆಗಿಲ್ಲ’’ ಎಂದು ಕುರುಬುವ ತೋಟದ ಮಾಲಕರೆಲ್ಲ ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ‘‘ನಮ್ಮ ಮಕ್ಕಳಿನ್ನು ಊರಿಗೆ ಬರುವುದೇ ಬೇಡ. ನಾವೇ ಬೆಂಗಳೂರಿಗೆ ಹೊರಡುತ್ತೇವೆ. ಕಾರಣ ನಮಗಿಲ್ಲಿ ಏನೂ ಉಳಿದಿಲ್ಲ’’ ಎನ್ನುವ ಹತಾಶೆ ಸಂಕಟ ಬಾಳೆಹೊನ್ನೂರಿನ ರಾಘವೇಂದ್ರ ಅವರದು. ಶೃಂಗೇರಿ ಕೊಪ್ಪದ ಕಡೆ ಶತಶತಮಾನಗಳಿಂದ ಲಕ್ಷಾಂತರ ರೈತರನ್ನು ಪೋಷಿಸಿದ ಅಡಿಕೆ ಮಕಾಡೆ ಮಲಗಿದೆ. ರಾಜ್ಯ ರಸ್ತೆಯ ಹಾದಿ ಬದಿಯ ತೋಟಗಳೆಲ್ಲ ಈಗಾಗಲೇ ರಿಯಲ್ ಎಸ್ಟೇಟ್ ಆಗಿ ಬದಲಾಗುತ್ತಿವೆ. ನಾಗರಿಕ ಜಗತ್ತಿನಿಂದ ದೂರದ ಹಳ್ಳಿಯ ರೈತರಿಗೆ ಪರ್ಯಾಯಗಳೇ ಇಲ್ಲ. ತಲೆತಲಾಂತರದಿಂದ ದುಡಿದು ಬದುಕಿದ ಮನೆ ತೋಟ ಎಲ್ಲವನ್ನು ಕಳಚಿ ಕೊಂಡು ಹೊರಗಡೆ ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಕೊಪ್ಪ ತಾಲೂಕಿನ ಲಕ್ಷ್ಮೀನಾರಾಯಣ ಕಡಮನೆಯವರು ಕಳೆದ ಎರಡು ವರ್ಷಗಳಿಂದ ಎಲೆ ಚುಕ್ಕಿಯ ಗಂಭೀರ ಸಮಸ್ಯೆಗೆ ಒಳಗಾದವರು. ತೋಟದೊಳಗಡೆ ಕಳೆದ 40 ವರ್ಷಗಳಿಂದ ಹಳದಿ ಎಲೆ ಕಾಯಿಲೆ ಇದ್ದರೂ ಎಲೆ ಚುಕ್ಕಿ ವಕ್ಕರಿಸಿದ್ದು ಎರಡು ವರ್ಷಗಳಿಂದ. ಗಂಭೀರ ಪರಿಣಾಮದಿಂದಾಗಿ ಈಗಾಗಲೇ 2,000ದಷ್ಟು ಅಡಿಕೆ ಮರಗಳನ್ನು ಕಡಿದುರುಳಿಸಿದ್ದಾರೆ. ಅಡಿಕೆಯ ತಲೆಗೂ ಬುಡಕ್ಕೂ ಬಹುವಿಷಗಳನ್ನು ಸಿಂಪಡಿಸಿ ಸುರಿದು ಸುರಿದು ಸಾಕಾಗಿದೆ. ಔಷಧಿ ಉತ್ಪಾದಿಸುವವನಿಗೂ, ಮಾರುವವನಿಗೂ ಇನ್ನೂ ಎಲೆಚುಕ್ಕಿಗೆ ಖಚಿತ ಮದ್ದು ಯಾವುದೆಂದು ಗೊತ್ತಿಲ್ಲ. ದಿನಾ ಹೊಸ ವಿಷಗಳು ಸೇರಿಕೊಳ್ಳುತ್ತವೆ. ಪರಿಣಾಮ ಮಾತ್ರ ಸೊನ್ನೆ!
ರೈತರು ಗೊಬ್ಬರದಂಗಡಿಯವರು ಕೊಡುವುದನ್ನೆಲ್ಲ ಆಸೆಯಿಂದ ತಂದು ಸಿಂಪಡಿಸುತ್ತಿದ್ದಾರೆ. ಇಲ್ಲೆಲ್ಲಾ ತೋಟಗಳಿಗೂ ಬಂದು ಇಂಥ ಕ್ರಿಮಿನಾಶಕಗಳನ್ನು ಮಾರುವವರು ಇದ್ದಾರೆ. ‘‘ಭೂಮಿ, ಮರ, ನೀರು, ಕೆಲಸದಾಳುಗಳು ಎಲ್ಲವೂ ನನ್ನವೇ. ಮೆಡಿಸಿನ್ ನಿಮ್ಮದು. ನೀವಿಲ್ಲಿ ಯಾವುದೇ ಪ್ರಯೋಗ ಮಾಡಿ. ನನಗೆ ಎಲೆಚುಕ್ಕಿ ವಾಸಿಯಾಗಬೇಕು, ನನ್ನ ತೋಟ ಹಿಂದಿನಂತಾಗಬೇಕು, ಕಾಯಿಲೆವಾಸಿಯಾದ ಮೇಲೆ ನೀವು ಬಯಸಿದಷ್ಟು ಫೀಸು ಕೊಡುವೆ ಎಂದ ಮೇಲೆ ಈಗ ಔಷಧಿ ವ್ಯಾಪಾರಿಗಳು ನನ್ನ ಕಡೆ ಸುಳಿಯುವುದೇ ಇಲ್ಲ’’ ಎನ್ನುತ್ತಾರೆ ಲಕ್ಷ್ಮೀನಾರಾಯಣ ಕಡಮನೆಯವರು
‘‘ಇಷ್ಟಾದರೂ ನಾನಿನ್ನೂ ಭರವಸೆ ಕಳೆದುಕೊಂಡಿಲ್ಲ. ಸತ್ತ ಮರ ತೆಗೆದು ಸ್ವಲ್ಪ ಭಾಗದಲ್ಲಾದರೂ ಹೊಸ ಗಿಡ ನೆಟ್ಟು ಬೆಳೆಯಬೇಕೆಂದಿದ್ದೇನೆ. ಅಡಿಕೆ ನಮ್ಮ ರಕ್ತದಲ್ಲೇ ಇದೆ, ಪರಂಪರೆಯಿಂದ ಬಂದಿದೆ. ನೂರಾರು ವರ್ಷಗಳ ಇತಿಹಾಸವಿದೆ. ನಾವು ಅದನ್ನು ಸಾಕಿದ್ದೇವೆ, ಅದು ನಮ್ಮನ್ನು ಪೋಷಿಸಿದೆ. ಇಲ್ಲೆಲ್ಲ ಅಡಿಕೆ ನಾಶ ಆದ ಜಾಗದಲ್ಲೆಲ್ಲಾ ಕಾಫಿ ಬೆಳೆಯುವ ಪರ್ಯಾಯ ಕೃಷಿ ಆರಂಭವಾಗಿದೆ. ಆದರೆ ಆರ್ಥಿಕವಾಗಿ ಸಮಗಟ್ಟಬೇಕಾದರೆ ಅಡಿಕೆಯ ಒಂದು ಎಕರೆ ಜಾಗದಲ್ಲಿ 6 ಎಕರೆ ಕಾಫಿ ಬೆಳೆ ಬೇಕಾಗುತ್ತದೆ! ನಿರ್ವಹಣೆ ಕಾರ್ಮಿಕರ ಲಭ್ಯತೆ ಇವೆಲ್ಲ ಇವತ್ತಿಗೆ ತುಂಬಾ ದುಬಾರಿಯಾದದ್ದು’’ ಎನ್ನುತ್ತಾರೆ ಕಡಮನೆಯವರು
ಬೆಳ್ತಂಗಡಿ - ಮೂಡಿಗೆರೆ ತಾಲೂಕುಗಳ ಗಡಿಭಾಗದ ಎಳೆನೀರು ಪ್ರದೇಶದಲ್ಲಿರುವ ರಾಜೇಂದ್ರ ಬಡಮನೆ ಸುಮಾರು 18 ಎಕರೆ ಅಡಿಕೆ ತೋಟದ ಮಾಲಕರು. ಒಂದು ಕಾಲದಲ್ಲಿ 45 ಟನ್ ಹಸಿ ಅಡಿಕೆ ಆಗುತ್ತಿದ್ದ ತೋಟದಲ್ಲಿ ಈಗ ಕೇವಲ ಒಂದೂವರೆ ಟನ್ ಮಾತ್ರ ಸಿಗುತ್ತಿದೆ. ‘‘ರೋಗಪೀಡಿತ ಹಳೆಮರಗಳನ್ನು ತೆಗೆದು ಹೊಸ ಗಿಡ ನೆಡುವುದರಲ್ಲೂ ನನಗೆ ನಂಬಿಕೆ ಇಲ್ಲ. ಕೇವಲ ಒಂದು ವರ್ಷದ ನರ್ಸರಿ ಗಿಡಗಳಿಗೆ ಎಲೆಚುಕ್ಕಿ ವಕ್ಕರಿಸುತ್ತಿದೆ ಎಂದರೆ ಯಾವ ಪ್ರಮಾಣದಲ್ಲಿ ಈ ರೋಗದ ಭೀಕರತೆ ಇದೆ ಎಂದು ನೀವೇ ಊಹಿಸಿ’’ ಎನ್ನುತ್ತಾರೆ ರಾಜೇಂದ್ರ. ಕೃಷಿತಜ್ಞರಿಗೆ ವಿಜ್ಞಾನಿಗಳಿಗೆ ಸಂಶೋಧನಾಲಯ ಕೃಷಿ ವಿಶ್ವವಿದ್ಯಾನಿಲಯ ಎಲ್ಲದಕ್ಕೂ ಈ ಕಾಲ ಅತ್ಯಂತ ಸವಾಲಿನದ್ದು. ಯಾರಿಗೂ ನಿಖರವಾಗಿ ಇದಕ್ಕೆ ಪರಿಹಾರವನ್ನು ಕಂಡುಹಿಡಿಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಡಿಕೆಗಾಗಿ ಹುಟ್ಟಿಕೊಂಡ ಸಂಸ್ಥೆಗಳು ಕೂಡ ನಿಸ್ತೇಜಗೊಂಡಂತಿದೆ.
‘‘ವಿಜ್ಞಾನಿಗಳು ತೋಟದಂಚಿನ ಪೇಟೆಗಳಲ್ಲಿ ಸಮುದಾಯ ಭವನಗಳಲ್ಲಿ ರೋಟರಿ ಹಾಲಲ್ಲಿ ರೈತರನ್ನು ಸೇರಿಸಿ ಸಭೆ ಮಾಡುತ್ತಿದ್ದಾರೆ. ನಿಜವಾಗಿ ಅವರು ಪ್ರಯೋಗಗಳನ್ನು ಮಾಡಬೇಕಾದದ್ದು ತೋಟದೊಳಗಡೆ. ಬನ್ನಿ, ಒಂದು ಎಕರೆ ಜಾಗ ನಿಮ್ಮ ಟ್ರಯಲ್‌ಗಾಗಿಯೇ ಕೊಡುತ್ತೇನೆ, ಅದಕ್ಕೆ ಬೇಕಾಗುವ ಇತರ ಸೌಲಭ್ಯವನ್ನು ಒದಗಿಸುವೆ ಎಂದರೂ ವಿಜ್ಞಾನಿಗಳು ನನ್ನ ತೋಟಕ್ಕೆ ಇಳಿಯುವುದಿಲ್ಲ. ನನ್ನ ಪ್ರಕಾರ ಖಂಡಿತ ಅಡಿಕೆಗೆ ಉಳಿಗಾಲ ಇಲ್ಲ’’ ಎನ್ನುತ್ತಾರೆ ಬಡಮನೆ.
ಶಿವಮೊಗ್ಗ ಮೂಲದ ‘ಪುಸ್ತಕಮನೆ’ಯ ಸುಂದರರಿಗೆ ಕೊಪ್ಪದಲ್ಲಿ ಒಂದಷ್ಟು ತೋಟ ಇದೆ. ಫಲ ಬಿಡುವ ಹೊಸ ಗಿಡಗಳು ವಿಸ್ತರಿಸುತ್ತಾ ಹೋದ ಹಾಗೆಯೇ ಒಟ್ಟು ಆದಾಯದಲ್ಲಿ ಖೋತಾವೇ. ‘‘ಈಗೀಗ ತೋಟದೊಳಗಡೆ ಅಡಿಕೆ ಇದ್ದರೂ ಫಸಲು ಗೇಣಿಗೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಅಡಿಕೆ ತೂಕದಲ್ಲಿ ವಿಪರೀತ ತೇಮಾನು. ಎಲೆಚುಕ್ಕೆ, ಹಳದಿ ಎಲೆ, ಇವೆಲ್ಲ ಮರವನ್ನಷ್ಟೇ ಅಲ್ಲ ಅಡಿಕೆಯ ತೂಕವನ್ನು ಸಾಯಿಸುತ್ತಿದೆ’’ ಎನ್ನುತ್ತಾರೆ ಸುಂದರ್.
‘‘ಹಳದಿ ಎಲೆಯಾಗಲೀ ಎಲೆ ಚುಕ್ಕಿಯಾಗಲೀ ಅಧಿಕ ಗೊಬ್ಬರ-ಪೋಷಕಾಂಶಗಳಿಂದ ಮತ್ತೆ ಸುಸ್ಥಿತಿಗೆ ಬರುವುದಿಲ್ಲ ಎಂಬುವುದು ನನ್ನ ಅನುಭವ. ಅದು ಮತ್ತೆ ಇನ್ನೇನನ್ನು ಬಯಸುತ್ತಿದೆ. ಆ ‘ಇನ್ನೇನು’ ಎಂಬುವುದು ರೈತರ ಸುಪರ್ದಿಯಲ್ಲಿ ಈಗ ಇಲ್ಲ. ಅದನ್ನು ವಿಜ್ಞಾನಿಗಳು ಕೂಲಂಕಶವಾಗಿ ಅಧ್ಯಯನ ಮಾಡಬೇಕಾಗಿದೆ. ಅದು ಶಿಲೀಂಧ್ರದಿಂದ ಬರಬಹುದು ಅಥವಾ ಬೇರೆ ಬ್ಯಾಕ್ಟೀರಿಯಾ, ಬೇರೆ ವೈರಸ್‌ಗಳಿರಬಹುದು ಎಂಬ ಕಲ್ಪನೆಯ ಆಧಾರದಲ್ಲಿ ಅನೇಕ ಪರೀಕ್ಷೆಗಳು ನಡೆಯುತ್ತಲೇ ಇವೆ. ಆದರೆ ಇದರಿಂದ ಸಿಗುವ ಉತ್ತರಕ್ಕಿಂತ ಮತ್ತೆ ಹೊಸ ಹೊಸ ಪ್ರಶ್ನೆಗಳೇ ಹೆಚ್ಚುತ್ತಾ ಹೋಗುತ್ತವೆ. ಸಮಸ್ಯೆಯನ್ನು ಜಟಿಲಗೊಳಿಸುತ್ತಿವೆ. ವಿಶೇಷವೆಂದರೆ ಯಾವ ರೋಗಪೀಡಿತ ಅಡಿಕೆ ತೋಟ ಇದೆಯೋ ಅದರ ಮಧ್ಯೆಯೇ ಒಂದೆರಡು ಸದೃಢ ಯಾವುದೇ ಕಾಯಿಲೆ ಇಲ್ಲದ ಗಿಡಗಳು ಇರುವುದು! ಈಗ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಉತ್ತರವಾಗಬೇಕಾದ ಗಿಡಗಳು ಇವೇ ಆಗಿವೆ. ಇಂಥ ಗಿಡಗಳಿಂದಲೇ ಹೊಸ ಗಿಡಗಳ ತಳಿ ಅಭಿವೃದ್ಧಿ ಆಗಬೇಕು.ಟಿಶ್ಯೂ ಕಲ್ಚರ್ ಅಥವಾ ಕೃತಕ ಪರಾಗಸ್ಪರ್ಶದ ಮೂಲಕ ಇಂಥ ಸದೃಢ ಗಿಡಮೂಲಗಳಿಂದ ಹೊಸ ರೋಗನಿರೋಧಕ ಸಸಿಗಳನ್ನು ಅಭಿವೃದ್ಧಿಪಡಿಸಬೇಕು. ಈ ಸಾಧ್ಯತೆಯ ಬಗ್ಗೆ ಸಂಶೋಧನೆ ಆಗುತ್ತಿದೆ ಎಂಬುವುದು ಸಂತೋಷದ ಸಂಗತಿ. ಮುಂದೊಂದು ದಿನ ಇಂತಹ ರೋಗನಿರೋಧಕ ಗಿಡಗಳಿಂದಲೇ ಹೊಸ ಅಡಿಕೆ ತೋಟ ನಿರ್ಮಾಣವಾಗಬೇಕಾಗಿದೆ. ಸದ್ಯಪೂರ್ತಿ ಭರವಸೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಯಬೇಕಾದ ಒಂದು ಕಾಲದ ಮತ್ತು ಅಂತರದ ಅಗತ್ಯವಿದೆ’’ ಎನ್ನುತ್ತಾರೆ ಕಳೆದ ಅನೇಕ ವರ್ಷಗಳಿಂದ ಹಳದಿ ಎಲೆ ಮತ್ತು ಇತ್ತೀಚೆಗೆ ಎಲೆ ಚುಕ್ಕಿ ರೋಗಕ್ಕೆ ಬಾಧಿತರಾದ ಕೃಷಿಕ ರಮೇಶ್ ದೇಲಂಪಾಡಿ ಅವರು.
ಸುಮಾರು 40 ವರ್ಷಗಳ ಹಿಂದೆ ತೆಂಗಿಗೆ ನುಸಿ ಪೀಡೆ ವಕ್ಕರಿಸಿತು. ಇವತ್ತಿಗೂ ನಮ್ಮ ತೆಂಗು ಮೊದಲಿನ ಆಕಾರ ಗಾತ್ರ ಸೌಂದರ್ಯವನ್ನು ಮತ್ತೆ ಪಡೆದಿಲ್ಲ. ಇವತ್ತಿಗೂ ಬಹುಪಾಲು ರೈತರಿಗೆ ಇರುವ ಅನುಮಾನ ಪ್ರಕೃತಿಗಿಂತಲೂ ಇದು ಮನುಷ್ಯನೇ ಸೃಷ್ಟಿಸಿದ, ಯಾವುದೋ ವಿದೇಶೀ ಹುನ್ನಾರದಿಂದ ಆದ ವಿಕೃತಿಯೆಂದು. ಅಡಿಕೆಯ ದಾರಿಯಲ್ಲೂ ಇದನ್ನು ಅಲ್ಲಗಳೆಯುವಂತಿಲ್ಲ.
ಅಡಿಕೆ ಸದಾ ಹಸಿರಾಗಿರುವವರೆಗೆ ಈ ನೆಲದ ಜನರ ಬದುಕು ಕೂಡ ಹಸನಾಗಿರುತ್ತದೆ. ಅಡಿಕೆಗೆ ಬೆಲೆ ಇರುವ ತನಕ ಭೂಮಿಗೂ ಬೆಲೆ ಇರುತ್ತದೆ. ಬೆಳೆ ಕುಲಕೆಡಿಸಿಕೊಂಡ ಮೇಲೆ ರೈತರು ಕೊನೆಗೆ ಉಳಿಸಿಕೊಳ್ಳುವ ತುಂಡು ತುಂಡು ಭೂಮಿಯಾದರೂ ಯಾರಿಗೆ ಬೇಕು, ಯಾಕೆ ಬೇಕು?