×
Ad

ಸೌಮ್ಯಾ ಕೊಲೆ ಪ್ರಕರಣ:ನ್ಯಾಯಾಲಯಕ್ಕೆ ಬಂದು ಚರ್ಚಿಸುವಂತೆ ಕಾಟ್ಜುಗೆ ಸುಪ್ರೀಂ ಸೂಚನೆ

Update: 2016-10-17 22:04 IST

ಹೊಸದಿಲ್ಲಿ,ಅ.17: ಫೇಸ್‌ಬುಕ್ ಪೋಸ್ಟ ಅಥವಾ ಬ್ಲಾಗ್ ಬರಹವನ್ನು ತಕರಾರು ಅರ್ಜಿ ಎಂದು ಪರಿಗಣಿಸಲು ಸಾಧ್ಯವೇ? ಆದರೆ ಸರ್ವೋಚ್ಚ ನ್ಯಾಯಾಲಯವಂತೂ ಹಾಗೆಂದು ಭಾವಿಸಿದೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಮಾರ್ಕಂಡೇಯ ಕಾಟ್ಜು ಅವರಿಗೆ ಸೋಮವಾರ ಸವಾಲನ್ನು ಹಾಕಿರುವ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್,ಪ್ರಫುಲ್ಲಾ ಪಂತ್ ಮತ್ತು ಯು.ಯು.ಲಲಿತ್ ಅವರು ಕುಖ್ಯಾತ ಸೌಮ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಾಜರಾಗಿ ತನ್ನ ವಾದಗಳನ್ನು ಮಂಡಿಸುವಂತೆ ಸೂಚಿಸಿದ್ದಾರೆ.
  ಈ ವರ್ಷದ ಸೆಪ್ಟೆಂಬರ್‌ನಲ್ಲಿ 2011ರ ಜನವರಿಯಲ್ಲಿ ನಡೆದಿದ್ದ ಸೌಮ್ಯಾ ಕೊಲೆ ಪ್ರಕರಣದ ತೀರ್ಪು ಪ್ರಕಟಿಸಿದ್ದ ಸರ್ವೋಚ್ಚ ನ್ಯಾಯಾಲಯವು 23ರ ಹರೆಯದ ಸೌಮ್ಯಾಳ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಗೋವಿಂದಚಾಮಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಆತನ ವಿರುದ್ಧದ ಕೊಲೆ ಆರೋಪವನ್ನು ಹಲ್ಲೆ ಆರೋಪಕ್ಕೆ ತಗ್ಗಿಸಿತ್ತು.
ಈ ತೀರ್ಪು ಹೊರಬಿದ್ದ ಬಳಿಕ ನ್ಯಾ.ಕಾಟ್ಜು ಅವರು,ಗೋವಿಂದಚಾಮಿಯನ್ನು ಕೊಲೆ ಆರೋಪಿಯನ್ನಾಗಿ ಪರಿಗಣಿಸದೆ ಸರ್ವೋಚ್ಚ ನ್ಯಾಯಾಲಯವು ತಪ್ಪೆಸಗಿದೆ ಎಂದು ಹೇಳಿದ್ದರು. ಅವರ ಬ್ಲಾಗ್ ಬರಹವನ್ನು ಸ್ವಯಂಪ್ರೇರಿತವಾಗಿ ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ತಾನು ಸರಿಯೋ ಅಥವಾ ಅವರು ಸರಿಯೋ ಎನ್ನುವುದನ್ನು ನ್ಯಾಯಾಲಯದಲ್ಲಿ ಬಂದು ಚರ್ಚಿಸುವಂತೆ ಸೂಚಿಸಿದೆ.
ತೀರ್ಪನ್ನು ‘ಸಂಪೂರ್ಣ ತಪ್ಪು’ಎಂದು ಬಣ್ಣಿಸಿದ್ದ ನ್ಯಾ.ಕಾಟ್ಜು ಗೋವಿಂದಚಾಮಿಯನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಲು ನ್ಯಾಯಾಲಯವು ಅವಲಂಬಿಸಿದ್ದ ಸಾಕ್ಷಾಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಟ್ಟು ಮಾಡಿದ್ದರು.
ತೀರ್ಪು ಹೇಗೆ ತಪ್ಪಿನಿಂದ ಕೂಡಿದೆ ಎನ್ನುವುದನ್ನು ನ್ಯಾ.ಕಾಟ್ಜು ಅವರು ಮುಕ್ತ ನ್ಯಾಯಾಲಯದಲ್ಲಿ ಬಂದು ಚರ್ಚಿಸಬೇಕು ಎಂದು ಪೀಠವು ಬಯಸಿದೆ. ನ್ಯಾ.ಕಾಟ್ಜು ಬಗ್ಗೆ ತನಗೆ ಅತ್ಯಂತ ಗೌರವವಿದೆ ಎಂದೂ ಅದು ಹೇಳಿದೆ.
ಕೇರಳ ಸರಕಾರ ಮತ್ತು ಸೌಮ್ಯಾಳ ತಾಯಿ ಪುನರ್‌ಪರಿಶೀಲನೆ ಅರ್ಜಿಗಳನ್ನು ಸಲ್ಲಿಸಿದ್ದು, ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನವಾದ ನ.11ರಂದು ಅವುಗಳನ್ನು ಕೈಗೆತ್ತಿಕೊಳ್ಳಲಿದೆ.
ಕೊಲೆ ಆರೋಪವನ್ನು ರುಜುವಾತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು ಆ ಆರೋಪದಿಂದ ಆತನನ್ನು ಮುಕ್ತಗೊಳಿಸಿ,ಕಲಂ 325ರಡಿ ಹಲ್ಲೆ ಆರೋಪವನ್ನು ಹೊರಿಸಿತ್ತು. ನ್ಯಾಯಾಲಯದ ತೀರ್ಪು ಗಾಳಿಮಾತಿನ ಸಾಕ್ಷವನ್ನು ಆಧರಿಸಿದೆ ಎಂದು ನ್ಯಾ.ಕಾಟ್ಜು ತನ್ನ ಲೇಖನದಲ್ಲಿ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News