ಬಿಜೆಪಿ ನಾಯಕನ ಪುತ್ರ ಪರಾರಿ; ಇಬ್ಬರ ಬಂಧನ
ಮಹಾಸಮುಂದ್, ಅ.17: ಕಳೆದ ವಾರ ಚಲಿಸುತ್ತಿದ್ದ ಕಾರೊಂದರಲ್ಲಿ ಮಹಿಳೆ ಯೊಬ್ಬಳ ಮೇಲೆ ನಡೆಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ, ಛತ್ತೀಸ್‌ಗಡದ ಪೊಲೀಸರು ಸ್ಥಳೀಯ ಬಿಜೆಪಿ ನಾಯಕನೊಬ್ಬನ ಪುತ್ರನ ಶೋಧದಲ್ಲಿದ್ದು, ಆತನ ಸ್ನೇಹಿತರಿಬ್ಬರನ್ನು ಬಂಧಿಸಿದ್ದಾರೆ.
ಮಹಾಸಮುಂದ್ ಜಿಲ್ಲೆಯಲ್ಲಿ ಕಳೆದ ಮಂಗಳವಾರ 36ರ ಹರೆಯದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಲಾಗಿದೆ.
ಮಹಿಳೆಯು ಮಂಗಳವಾರ ತನ್ನ ಸೋದರಿಯೊಂದಿಗೆ ಮನೆಯಲ್ಲಿದ್ದಾಗ, ಆರೋಪಿಗಳಾದ ದೇವೇಂದ್ರ, ಫರೀದ್ ಅಲಿ ಹಾಗೂ ಪ್ರಿನ್ಸ್ ಸಲೂಜಾ ಎಂಬವರು ಆಕೆಯನ್ನು ಹಿಂಬಾಗಿಲ ಮೂಲಕ ಹೊರಗೆ ತಂದು ಬಲಾತ್ಕಾರವಾಗಿ ತಮ್ಮ ಕಾರಿನೊಳಗೆ ನೂಕಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅದನ್ನು ಚಿತ್ರೀಕರಿಸಿಕೊಂಡಿದ್ದರು. ಸಂತ್ರಸ್ತೆ ಪೊಲೀಸರಲ್ಲಿ ದೂರಿದರೆ ಆ ದೃಶ್ಯವನ್ನು ಆನ್‌ಲೈನ್‌ನಲ್ಲಿ ಬಹಿರಂಗ ಪಡಿಸುವ ಬೆದರಿಕೆಯನ್ನೂ ಅವರು ಹಾಕಿದ್ದರೆನ್ನಲಾಗಿದೆ.
ಮರುದಿನ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಪ್ರಿನ್ಸ್ ಸಲೂಜಾ ತಲೆ ಮರೆಸಿಕೊಂಡಿದ್ದು, ಉಳಿದಿಬ್ಬರನ್ನು ಬಂಧಿಸಲಾಗಿದೆ. ಕಾರನ್ನು ಮುಟ್ಟುಗೋಲು ಹಾಕಲಾಗಿದೆ. ಸಲೂಜಾನ ತಂದೆ ಹಿಂದೆ ಉಪಜಿಲ್ಲಾ ಮಟ್ಟದಲ್ಲಿ ಬಿಜೆಪಿಯ ಪದಾಧಿಕಾರಿಯಾಗಿದ್ದನೆನ್ನಲಾಗಿದೆ. ಮೂವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಕ್ರಿಮಿನಲ್ ಮಧ್ಯಪ್ರವೇಶ ಆರೋಪಗಳನ್ನು ದಾಖಲಿಸಲಾಗಿದೆ.