ಮತದಾನ ಕಡ್ಡಾಯಗೊಳಿಸುವ ಚಿಂತನೆಯಿಲ್ಲ: ಚು. ಆಯೋಗ
ಹೊಸದಿಲ್ಲಿ,ಅ.19: ಮತದಾನವನ್ನು ಕಡ್ಡಾಯಗೊಳಿಸಬೇಕೆಂಬ ಚಿಂತನೆಯು ಕಾರ್ಯಸಾಧ್ಯವಲ್ಲವೆಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಬುಧವಾರ ತಿಳಿಸಿದ್ದಾರೆ. ಕಡ್ಡಾಯ ಮತದಾನದ ಬೇಡಿಕೆಯನ್ನು ಕೇಂದ್ರ ಸರಕಾರವು ತಿರಸ್ಕರಿಸಿದ ಕೆಲವೇ ತಿಂಗಳುಗಳ ಬಳಿಕ ಮುಖ್ಯ ಚುನಾವಣಾ ಆಯುಕ್ತರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ ಕೆಲವು ದೇಶಗಳಲ್ಲಿಯೂ ಈ ಹಿಂದೆ ಮತದಾನವನ್ನು ಕಡ್ಡಾಯಗೊಳಿಸುವ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವು. ಆದರೆ ಈ ಚಿಂತನೆಯು ಕಾರ್ಯಸಾಧ್ಯವಲ್ಲವೆಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ ಈ ಕುರಿತ ಅಹವಾಲುಗಳನ್ನು ಆಲಿಸಲು ನಾವು ಇಚ್ಚಿಸುತ್ತೇವೆ’’ ಎಂದು ಝೈದಿ ಹೇಳಿದ್ದಾರೆ.
ಅವರು ಹೊಸದಿಲ್ಲಿ ಅಂತಾರಾಷ್ಟ್ರೀಯ ಮತದಾರ ಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಡ್ಡಾಯ ಮತದಾನಕ್ಕೆ ಸಂಬಂಧಿಸಿ ಈ ವರ್ಷದ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಸದಸ್ಯರ ಖಾಸಗಿ ವಿಧೇಯಕ ಮಂಡನೆಯಾದ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು, ಮತದಾನವನ್ನು ಕಡ್ಡಾಯಗೊಳಿಸಲು ಹಾಗೂ ಮತದಾನ ಮಾಡದವರಿಗೆ ದಂಡವಿಧಿಸುವ ಮಸೂದೆಯನ್ನು ಜಾರಿಗೊಳಿಸಲು ಸರಕಾರಕ್ಕೆ ಸಾಧ್ಯವಾಗದೆಂದು ತಿಳಿಸಿದ್ದರು.
ಲೋಕಸಭೆಗೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕುರಿತು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಝೈದಿ, ‘‘ ಈ ವಿಚಾರವಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಅವಿರೋಧವಾಗಿ ಸಮ್ಮತಿಸಿದಲ್ಲಿ ಹಾಗೂ ನೂತನ ಇಲೆಕ್ಟ್ರಾನಿಕ್‌ಮತಯಂತ್ರಗಳನ್ನು ಖರೀದಿಸಬೇಕೆಂಬ ಚುನಾವಣಾ ಆಯೋಗದ ಬೇಡಿಕೆಗಳು ಈಡೇರಿದಲ್ಲಿ ಮಾತ್ರವೇ ಅದು ಸಾಧ್ಯವಾಗಲಿದ’’ ಎದರದು.
ಈ ವಿಷಯವಾಗಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳೆದ ಮೇ ತಿಂಗಳಲ್ಲಿ ಉತ್ತರಿಸಿದ ಚುನಾವಣಾ ಆಯೋಗವು, ಈ ಪ್ರಸ್ತಾಪವನ್ನು ತಾನು ಬೆಂಬಲಿಸುವೆನಾದರೂ, ಇದಕ್ಕಾಗಿ 9 ಸಾವಿರ ಕೋಟಿ ರೂ.ಗೂ ಅಧಿಕ ವೆಚ್ಚ ತಗಲಲಿದೆಯೆಂದು ಹೇಳಿತ್ತು,