ಕಾದಂಬರಿ ಧಾರಾವಾಹಿ-35

Update: 2016-10-19 17:23 GMT

--ಬಲಿದಾನದ ಕತೆಯ ಮೆಲುಕು--

ಒಂದು ದಿನ ಅವರಿಗೊಂದು ಕನಸು ಬೀಳುತ್ತದೆ. ಆ ಕನಸಿನಲ್ಲಿ ದೇವ ದೂತನೊಬ್ಬ ಬಂದು ‘‘ಇಬ್ರಾಹೀಮರೇ, ನೀವು ನಿಮ್ಮ ಪ್ರೀತಿಯ ಕಂದನನ್ನೂ ನಿಮ್ಮ ಪ್ರೀತಿಯ ಪತ್ನಿಯನ್ನೂ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬರಬೇಕೆಂದು ಅಲ್ಲಾಹನ ಆಜ್ಞೆಯಾಗಿದೆ’’ ಎಂದು ಹೇಳಿದರು. ಇಬ್ರಾಹೀಮರಿಗೆ ತಟ್ಟನೆ ಎಚ್ಚರವಾಯಿತು. ಅವರು ನಡುಗುತ್ತಿದ್ದರು. ಆಗ ಅವರಿಗೆ ಅವರು ಹಿಂದೆ ಅಲ್ಲಾಹನಿಗೆ ಕೊಟ್ಟ ವಾಗ್ದಾನದ ನೆನಪಾಯಿತು. ಅಂದಿಡೀ ಅವರು ಯೋಚನಾ ಮಗ್ನರಾದರು. ನನ್ನನ್ನು ಸೃಷ್ಟಿಸಿದವನು ಅವನು. ನನಗೆ ಪತ್ನಿ, ಈ ವೃದ್ಧಾಪ್ಯದಲ್ಲಿ ಈ ಕಂದನನನ್ನು ದಯಪಾಲಿಸಿದವನು ಅವನು. ಈಗ ಅವನೇ ಆಜ್ಞೆ ಮಾಡಿದ್ದಾನೆ. ನಾನು ಈಗ ಹಿಂಜರಿಯಬಾರದು. ಸ್ವಾರ್ಥಿಯಾಗಬಾರದು. ಮಾತಿಗೆ ತಪ್ಪುವವನಾಗಬಾರದು. ಅವರು ನಿರ್ಧರಿಸಿ ದರು. ಮನಸ್ಸು ಗಟ್ಟಿ ಮಾಡಿಕೊಂಡು ಪತ್ನಿಗೆ ವಿಷಯ ತಿಳಿಸಿದರು. ‘‘ದೇವನ ಆಜ್ಞೆ ಎಂದ ಮೇಲೆ ಮತ್ತೇಕೆ ಹಿಂಜರಿಯುವಿರಿ.’’

ಪತ್ನಿಗೆ ದೇವನ ಮೇಲಿರುವ ಅಚಲ ವಿಶ್ವಾಸ ಕಂಡು, ಅವರ ನಿರ್ಧಾರ ಕೇಳಿ ಇಬ್ರಾಹೀಮರಿಗೆ ಆಶ್ಚರ್ಯವಾಗಿತ್ತು. ಅವರು ತನ್ನ ಪತ್ನಿ ಹಾಜಿರಾರನ್ನು, ಕಂದ ಇಸ್ಮಾಯೀಲರನ್ನೂ ನಿರ್ಜನ ಮರುಭೂಮಿಗೆ ಕರೆದೊಯ್ದರು. ಅಲ್ಲಿ ಅವರನ್ನು ಬಿಟ್ಟು ಅಲ್ಲಾಹನನ್ನು ಕಾವಲುಗಾರನನ್ನಾಗಿ ನಿಲ್ಲಿಸಿ ತಿರುಗಿಯೂ ನೋಡದೆ ಅಲ್ಲಿಂದ ಹಿಂದಿರುಗಿದರು. ಹಾಜಿರಾರಲ್ಲಿ ಒಂದಿಷ್ಟು ಖರ್ಜೂರ, ಚರ್ಮದ ಚೀಲದಲ್ಲಿ ಒಂದಿಷ್ಟು ನೀರು ಬಿಟ್ಟರೆ ಬೇರೇನೂ ಇರಲಿಲ್ಲ. ಅದು ಮುಗಿದಾಗ ಅವರು ಕಂಗೆಟ್ಟರು. ಮಗು ಹಸಿವು, ದಾಹದಿಂದ ಅಳತೊಡಗಿತು. ಹಾಜಿರಾ ನೀರಿಗಾಗಿ ಸುತ್ತಲೂ ನೋಡಿದರು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಮುಗಿಯದ ಮರುಭೂಮಿ. ಮಗುವಿನ ಅಳು ಅವರ ಹೃದಯವನ್ನು ಸೀಳಿ ಹಾಕುತ್ತಿತ್ತು. ಅವರು ಮಗುವಿಗೆ ಒಂದು ತೊಟ್ಟು ನೀರಿಗಾಗಿ ಹತ್ತಿರದ ಸಫಾ-ಮರ್ವಾ ಬೆಟ್ಟಗಳ ಮೇಲೆಲ್ಲ ಹತ್ತಿ ಇಳಿದು ಹುಡುಕಾಡಿದರು. ಇಲ್ಲ, ನೀರಿನ ಸೆಳೆಯೇ ಇಲ್ಲ. ದಾಹದಿಂದ ಈಗ ಅವರ ಜೀವ ಸೆಳೆಯೂ ಬತ್ತಿ ಹೋಗಿತ್ತು. ಸೋತು ಕಂಗಾಲಾಗಿ ಅವರು ಮತ್ತೆ ಮಗುವಿನ ಬಳಿ ಮರಳಿ ನೋಡುತ್ತಾರೆ ಆಶ್ಚರ್ಯ! ಮಗುವಿನ ಕಾಲ ಬುಡದಲ್ಲಿ ಕಾರಂಜಿಯೊಂದು ಚಿಮ್ಮುತ್ತಿದೆ. ಅದು ಎತ್ತರೆತ್ತರಕ್ಕೆ ಚಿಮ್ಮಿ ಮಗುವಿನ ಕಾಲ ಬುಡದಲ್ಲಿ ಬೀಳುತ್ತಿದೆ. ಮಗು ಆನಂದದಿಂದ ಕೈಕಾಲು ಆಡಿಸಿ ನಗುತ್ತಾ ಆಕಾಶ ನೋಡಿ ಬಾಯಿ ಚಪ್ಪರಿಸುತ್ತಿದೆ. ಹಾಜಿರಾರ ಹೃದಯ ತುಂಬಿ ಕಣ್ಣೀರಾಗಿ ಹರಿಯಿತು. ಅವರು ತಲೆಬಾಗಿ ದೇವನಿಗೆ ಕೃತಜ್ಞತೆ ಅರ್ಪಿಸಿದರು. ಮತ್ತೆ ಬೊಗಸೆ ಬೊಗಸೆ ನೀರನ್ನೆತ್ತಿ ಕುಡಿದು ತನ್ನ ದಾಹವನ್ನೂ ತೀರಿಸಿಕೊಂಡರು. ಆ ಕಾರಂಜಿ ಬಾವಿಯಾಗಿ ಇಂದಿಗೂ ಮಕ್ಕಾದಲ್ಲಿದೆ. ಅದರ ನೀರು ‘ಝುಂ ಝಂ’ ಎಂದು ಜಗತ್ಪ್ರಸಿದ್ಧವಾಗಿದೆ.

ಇಸ್ಮಾಯೀಲರು ಸುಂದರ ಹುಡುಗನಾಗಿ, ಇಬ್ರಾಹೀಮರ ಆಸರೆಯ ಕನಸಾಗಿ, ಪ್ರೀತಿಯ ಸೆಳೆಯಾಗಿ ಬೆಳೆಯತೊಡಗಿದರು. ಹೀಗಿರುವಾಗ ಒಂದು ದಿನ ಇಬ್ರಾಹೀಮರಿಗೆ ಮತ್ತೊಂದು ಕನಸು ಬೀಳುತ್ತದೆ. ಆ ಕನಸಿನಲ್ಲಿ ದೇವದೂತನು ಬಂದು ‘‘ಇಬ್ರಾಹೀಮರೇ, ನೀವು ನಿಮ್ಮ ಪ್ರೀತಿಯ ಮಗನನ್ನು ದೇವನಿಗೆ ಬಲಿಯರ್ಪಿಸಬೇಕೆಂದು ದೇವಾಜ್ಞೆಯಾಗಿದೆ’’ ಎಂದು ಹೇಳಿದಾಗ ಇಬ್ರಾಹೀಮರು ಕಂಪಿಸುತ್ತಾ ದಡಕ್ಕನೆ ಎದ್ದು ಕುಳಿತರು. ಅವರ ನಡುಗುವ ದೇಹದ ತುಂಬಾ ಬೆವರು ಹರಿಯುತ್ತಿತ್ತು. ಅವರು ಮತ್ತೆ ಚಿಂತಾಕ್ರಾಂತರಾದರು. ಏನಿದು? ಏನೀ ಪರೀಕ್ಷೆ! ದೇವನಿಷ್ಠರಾದ ಅವರು ಒಂದು ನಿರ್ಧಾರಕ್ಕೆ ಬಂದರು. ನನ್ನನ್ನು ಸೃಷ್ಟಿಸಿದವನು ಅವನು. ನನ್ನನ್ನು ಮರಣಿಸುವವನೂ ಅವನು. ನನಗೆ ಈ ದೇಹವನ್ನೂ, ಪತ್ನಿಯನ್ನೂ, ಮಗನನ್ನೂ ಕರುಣಿಸಿದವನು ಅವನು. ಗಾಳಿ, ಬೆಳಕು, ನೀರು, ಆಹಾರ ಎಲ್ಲವನ್ನೂ ದಯಪಾಲಿಸಿದವನು ಅವನು. ಅವನ ಆಜ್ಞೆಗೆ ನಾನು ಶರಣು - ಎಂದವರೇ ಮಗನಿಗೆ ವಿಷಯ ತಿಳಿಸಿ ಮಗನ ಮುಖವನ್ನು ನೋಡಲಾಗದೆ ತಿರುಗಿ ನಿಂತರು. ವಿಷಯ ತಿಳಿದ ಇಸ್ಮಾಯೀಲ್ ಒಂದಿಷ್ಟೂ ವಿಚಲಿತರಾಗದೆ ನಗುತ್ತಾ ತಂದೆಯ ಮುಂದೆ ನಿಂತಿದ್ದರು. ‘‘ಅಪ್ಪಾ, ದೇವಾಜ್ಞೆಗೆ ನಾನು ಸಂಪೂರ್ಣ ಬದ್ಧನಾಗಿದ್ದೇನೆ. ನೀವೂ ಬದ್ಧರಾಗಿರಬೇಕು. ಈ ಬಲಿಗೆ ನಾನು ಸಂಪೂರ್ಣ ಸಿದ್ಧನಿದ್ದೇನೆ. ದೇವನಿಗೆ ಈ ಕೊರಳನ್ನು ಒಡ್ಡಲು ನನಗೆ ಯಾವ ಭಯವೂ ಇಲ್ಲ. ಯಾವ ಹಿಂಜರಿಕೆಯೂ ಇಲ್ಲ’’ ಎನ್ನುತ್ತಾ ತಂದೆಯನ್ನು ಸಂತೈಸಿದರು. ಆನಂತರ ಇಬ್ರಾಹೀಮರು ಮಗನನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದರು. ಅವರ ಕೈಯಲ್ಲಿ ಹರಿತವಾದ ಕತ್ತಿಯಿತ್ತು. ನಿಗದಿತ ಸ್ಥಳಕ್ಕೆ ತಲುಪಿದೊಡನೆ ಇಸ್ಮಾಯೀಲರು ಸಂತೋಷದಿಂದಲೇ ತಂದೆಗೆ ಕೊರಳೊಡ್ಡಿದರು. ಇಬ್ರಾಹೀಮರು ಕಣ್ಣುಮುಚ್ಚಿ ದೇವನನ್ನು ಸ್ಮರಿಸಿದರು. ಕತ್ತಿ ಹಿಡಿದ ಅವರ ನಡುಗುವ ಕೈ ಮಗನ ಕೊರಳನ್ನು ಕೊಯ್ಯಬೇಕೆನ್ನುವಷ್ಟರಲ್ಲಿ ಮಗನ ಜಾಗದಲ್ಲಿ ಆಡೊಂದು ಪ್ರತ್ಯಕ್ಷವಾಗಿತ್ತು. ಇಸ್ಮಾಯೀಲರು ನಗುನಗುತ್ತಾ ನಿಂತಿದ್ದರು. ಕೊರಳು ಕತ್ತರಿಸಲ್ಪಟ್ಟ ಆಡು ನೆಲಕ್ಕೊರಗಿತ್ತು. ಆಗಲೇ ಆಕಾಶದಿಂದ ದೇವವಾಣಿಯೊಂದು ಮೊಳ ಗಿತು. ‘‘ಇಬ್ರಾಹೀಮರೇ, ನೀವು ವಿಜಯಿಯಾಗಿದ್ದೀರಿ. ನನಗೆ ನಿಮ್ಮ ಯಾವುದೇ ಬಲಿ, ರಕ್ತ, ಪ್ರಾಣಗಳ ಅಗತ್ಯವಿಲ್ಲ. ನಿಮ್ಮ ಆಸೆ, ಆಕಾಂಕ್ಷೆ, ಸ್ವಾರ್ಥ, ಎಲ್ಲವನ್ನೂ ತ್ಯಾಗ ಮಾಡಿ ನನಗೆ ನಿಷ್ಠರಾಗಿ ಬದುಕುವುದೇ ನೀವು ನನಗೆ ನೀಡುವ ಬಲಿದಾನವಾಗಿದೆ. ಇಬ್ರಾಹೀಮರೇ, ನೀವು ನನಗೆ ಪ್ರಿಯವಾಗಿದ್ದೀರಿ. ನಿಮ್ಮ ಬಲಿದಾನವನ್ನು ಈ ಜಗತ್ತು ಇರುವವರೆಗೂ ಜನರು ನೆನಪಿಸಿಕೊಳ್ಳುತ್ತಾರೆ.’’

ಅಂದಿನಿಂದ ಇಂದಿನವರೆಗೂ ಇಬ್ರಾಹೀಂ ಮತ್ತು ಇಸ್ಮಾಯೀಲರ ಬಲಿದಾನದ ನೆನಪಿಗಾಗಿ ಮುಸ್ಲಿಮರು ಪ್ರತೀ ವರ್ಷ ಹಜ್ ಸಂದರ್ಭದಲ್ಲಿ ಆಡು, ಕುರಿ, ಒಂಟೆ, ದನ ಹೀಗೆ ಆಯಾ ಪ್ರದೇಶಗಳ ಆಹಾರದ ಪ್ರಾಣಿಗಳನ್ನು ದೇವನಿಗೆ ಬಲಿಯರ್ಪಿಸಿ ಅದರ ಮಾಂಸವನ್ನು ಬಡವರಿಗೆ ಹಂಚುತ್ತಾರೆ. ನಿನ್ನ ಅಜ್ಜ ಇರುವಾಗ ಇದನ್ನು ಮಾಡುತ್ತಿದ್ದರು. ಅವರ ನಂತರ ನಾಸರ್ ಇದನ್ನು ಮುಂದುವರಿಸಿದ್ದಾನೆ. ಇದರ ಹಿಂದಿರುವ ಉದ್ದೇಶ ಒಂದೇ. ಮನುಷ್ಯ ತನ್ನಲ್ಲಿರುವ ಎಲ್ಲಾ ರೀತಿಯ ಸ್ವಾರ್ಥವನ್ನು ಬಲಿಯರ್ಪಿಸಿ ತ್ಯಾಗ ಮಾಡಿ ದೇವನಿಗೆ ನಿಷ್ಠನಾಗಿ ಬದುಕಬೇಕು ಎಂಬುದು. ನಾವು ‘ಕಅಬಾ’ ಅಂತ ಹೇಳುತ್ತೇವಲ್ಲ. ಅದನ್ನು ಇಬ್ರಾಹೀಂ ಮತ್ತು ಇಸ್ಮಾಯೀಲ್ ಪ್ರತಿಷ್ಠಾಪಿಸಿದ್ದು. ಇಂದು ನಾವು ಹಜ್‌ಗೇಂತ ಹೋಗ್ತೇವಲ್ಲ ಅಲ್ಲಿಗೆ ಅದೇ ಮಸೀದಿಗೆ.
‘‘ನಿಮಗೆ ಇದೆಲ್ಲ ಯಾರು ಹೇಳಿದ್ದು ಮಾಮಿ?’’
‘‘................’’
‘‘ಮಾಮಿ ನಿದ್ದೆ ಬಂತಾ?’’
‘‘ನನ್ನ ಗಂಡ ಹೇಳಿದ್ದು. ಇತಿಹಾಸದ ಇಂತಹ ಹಲವಾರು ಕತೆಗಳನ್ನು ಅವರು ನನಗೆ ಹೇಳುತ್ತಾ ಇದ್ದರು. ಅಲಿಯಾರ್ ತಂಙಳ ಕತೆ, ಯೂಸುಫ್ ಝುಲೇಕಾ ಬೀಬಿಯ ಕತೆ, ಉಮರ್ ಖತಾಬ್‌ರ ಕತೆ, ಪಕ್ಷಿ ಪಾಟ್, ಸಬಿನ ಪಾಟ್, ಮುಹಿಯುದ್ದೀನ್ ಮಾಲೆ, ನಫಿಸತ್ ಮಾಲೆ ಹೀಗೆ ಹಲವಾರು ಕತೆ-ಪಾಟ್‌ಗಳನ್ನೆಲ್ಲ ಹೇಳುತ್ತಾ ಇದ್ದರು. ಇದನ್ನೆಲ್ಲ ಅವರ ಬಾಯಿ ಯಿಂದ ಕೇಳಬೇಕು. ಆ ಹಾವ-ಭಾವ ಕಣ್ಣಿಗೆ ಕಟ್ಟುವಂತೆ ಹೇಳುವ ಅವರ ಶೈಲಿ - ಅವರೆದುರು ಕುಳಿತು ಕೇಳುತ್ತಾ ಕೇಳುತ್ತಾ ಅದೆಷ್ಟೋ ಸಲ ನಾನು ಅತ್ತಿದ್ದೇನೆ. ಹೃದಯವನ್ನು ಹಗುರ ಮಾಡಿಕೊಂಡಿದ್ದೇನೆ. ಈಗ ಅದೆಲ್ಲ ಕನಸು..., ಈಗ ಅವರಿಲ್ಲ.. ಎಲ್ಲಿದ್ದಾರೋ... ಹೇಗಿದ್ದಾರೋ, ಯಾವಾಗ ಬರ್ತಾರೋ... ಯಾ ಅಲ್ಲಾಹ್... ಎನ್ನುತ್ತಾ ನಿಟ್ಟುಸಿರು ಬಿಟ್ಟು ಮಲಗಿದ ಐಸುಳ ಮಾತು ಬಂದಾಯಿತು. ತಾಹಿರಾ ಅವಳನ್ನು ತಬ್ಬಿ ಮಲಗಿದವಳು ನಿದ್ದೆಗೆ ಜಾರಿದಳು.
***

ತಾಹಿರಾ ಅಂದು ಬೆಳಗ್ಗೆ ಬೇಗ ಎದ್ದಿದ್ದಳು. ಮುಖ ತೊಳೆದು, ಸ್ನಾನ ಮಾಡಿ ಬಂದವಳು ಒಳ್ಳೆಯ ಬಟ್ಟೆ ಧರಿಸಿಕೊಂಡಳು. ತಲೆ ಬಾಚಿ, ಮುಖಕ್ಕೆ ಪೌಡರು, ಕ್ರೀಂ ಹಾಕಿ ಸಿಂಗರಿಸಿಕೊಂಡವಳು, ಕನ್ನಡಿಯಲ್ಲಿ ಕೆಲ ಹೊತ್ತು ತನ್ನನ್ನೇ ನೋಡುತ್ತಾ ನಿಂತು ಕೊಂಡಳು. ಮತ್ತೆ ಕೋಣೆಯಿಂದ ಹೊರ ಬಂದವಳ ಕಣ್ಣು ನಾಸರ್‌ನಿಗಾಗಿ ಹುಡುಕಾಡಿತು. ಆತ ಕಾಣಲಿಲ್ಲ. ಅಡುಗೆ ಮನೆಗೆ ಹೋದರೆ ಅಲ್ಲಿಯೂ ಯಾರೂ ಇಲ್ಲ. ಅಲ್ಲಿಂದ ಸೀದಾ ಅಜ್ಜಿಯ ಕೋಣೆಗೆ ಹೋದಳು. ಅಲ್ಲಿ ಅಜ್ಜಿ - ಐಸು ಮಾತನಾಡಿಕೊಳ್ಳುತ್ತಿದ್ದರು. ‘ಬಾ’ ಐಸು ಕರೆದಳು.

ತಾಹಿರಾ ಹೋಗಿ ಅಜ್ಜಿಯ ಪಕ್ಕ ಕುಳಿತಳು. ಅಜ್ಜಿ ಯಾಕೋ ಇಂದು ಗೆಲುವಾಗಿದ್ದಂತೆ ಕಾಣಲಿಲ್ಲ. ಹಾಸಿಗೆಯಲ್ಲಿ ಎರಡು ಕೈಗಳನ್ನೂ ಬೆನ್ನ ಹಿಂದೆ ಊರಿ ಕುಳಿತು ಏದುಸಿರು ಬಿಡುತ್ತಿದ್ದರು. ‘‘ಯಾಕೆ ಅಜ್ಜಿ, ಹುಷಾರಿಲ್ಲವಾ?’’ ತಾಹಿರಾ ಆತಂಕದಿಂದ ಕೇಳಿದಳು. ಅಜ್ಜಿ ಮಾತನಾಡಲಿಲ್ಲ. ‘‘ಚಳಿ ಸ್ವಲ್ಪಜಾಸ್ತಿ ಉಂಟಲ್ಲಾ, ಅದಕ್ಕೆ ಕಫ ಸ್ವಲ್ಪ ಜಾಸ್ತಿಯಾಗಿದೆ. ನಾಸ್ಟಾ ಕೊಡುತ್ತೇನೆ ಇಬ್ಬರೂ ಬನ್ನಿ’’ ಎಂದವಳು ಅಡುಗೆ ಮನೆಗೆ ಹೋದಳು. ತಾಹಿರಾ ಅಜ್ಜಿಯ ಭುಜ ಹಿಡಿದು ನಿಲ್ಲಿಸಿದಳು. ಅವರು ಉಸಿರಾಡಲು ಕಷ್ಟಪಡುವಂತೆ ಕಾಣುತ್ತಿತ್ತು. ಹಾಗೆಯೇ ನಡೆಸಿಕೊಂಡು ಬಂದವಳು ಊಟದ ಮೇಜಿನ ಮುಂದೆ ಕುಳ್ಳಿರಿಸಿದಳು. ಉಸಿರು ಕಟ್ಟುತ್ತಿರು ವುದರಿಂದ ಅಜ್ಜಿಗೆ ತಿಂಡಿ ತಿನ್ನಲೂ ಸಾಧ್ಯವಾಗುತ್ತಿರಲಿಲ್ಲ. ಐಸು ನೀರುದೋಸೆಯನ್ನು ಮುರಿದು ಅಜ್ಜಿಯ ಬಾಯಿಗೆ ಕೊಟ್ಟಳು. ಒಂದು ದೋಸೆಯನ್ನು ಕಷ್ಟದಿಂದ ನುಂಗಿದ ಅವರಿಗೆ ಮತ್ತೆ ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಐಸು-ತಾಹಿರಾ ಅವರನ್ನು ನಡೆಸಿಕೊಂಡು ಬಂದು ಕೋಣೆಯಲ್ಲಿ ಮಲಗಿಸಿದರು. ‘‘ನಾಸರ್ ಎಲ್ಲಿ ಮಾಮಿ?’’ ತಪ್ಪಿಬಂದ ಮಾತಿಗಾಗಿ ತಾಹಿರಾ ನಾಲಗೆ ಕಚ್ಚಿಕೊಂಡಳು. ‘‘ಅವನು ಅಜ್ಜಿಗೆ ಮದ್ದು ತರಲು ಹೋಗಿದ್ದಾನೆ. ಹಾಗೆಯೇ ನಾಳೆ ಹಬ್ಬಕ್ಕೆ ಸಾಮಾನು ಆಗ್ಬೇಕಲ್ಲ. ಅವನ್ನೂ ಒಟ್ಟಿಗೆ ತರುತ್ತೇನೇಂತ ಹೋಗಿದ್ದಾನೆ. ನೀನು ಅಜ್ಜಿಯ ಹತ್ತಿರ ಇರು. ಈಗ ನಿನ್ನ ದೊಡ್ಡಮ್ಮನವರು, ಮಕ್ಕಳು ಎಲ್ಲ ಬರಬಹುದು. ಅಡುಗೆಯಾಗಬೇಕು’’ ಎನ್ನುತ್ತಾ ಸೆರಗನ್ನು ಸೊಂಟಕ್ಕೆ ಸುತ್ತಿ ಸಿಕ್ಕಿಸಿಕೊಳ್ಳುತ್ತಾ ಐಸು ನಡೆದಳು. ಅಜ್ಜಿಯ ಸ್ಥಿತಿ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಅವರ ಎದೆಯ ಏರಿಳಿತ, ಉಸಿರಾಟದ ಜೊತೆಗೆ ಹೊರ ಹೊಮ್ಮುವ ಗುಂಯ್-ಗುಂಯ್... ಸದ್ದು ಕೇಳಿ ತಾಹಿರಾಳಿಗೆ ಅಯ್ಯೋ ಎನಿಸಿತು. ಅವಳು ಅವರ ಎದೆಯನ್ನು ನೀವುತ್ತಾ ಮುಖವನ್ನೇ ನೋಡುತ್ತಾ ಹಾಗೆಯೇ ಕುಳಿತುಬಿಟ್ಟಳು. ಹೊರಗೆ ವಾಹನದ ಸದ್ದು ಕೇಳಿ ತಾಹಿರಾ ಕಿಟಿಕಿಯಿಂದ ಇಣುಕಿದಳು. ನಾಸರ್ ಆಟೋದಿಂದ ಇಳಿಯುವುದು ಕಾಣಿಸಿತು. ಆಟೋ ತುಂಬಾ ಸಾಮಾನುಗಳು. ಎಲ್ಲವನ್ನೂ ತಂದು ಒಳಗಿಟ್ಟವನು ಅಜ್ಜಿಯ ಕೋಣೆಗೆ ಬಂದ. ಅವನ ಕೈಯಲ್ಲಿ ಮದ್ದಿನ ಪೊಟ್ಟಣವಿತ್ತು. ಅವರಿಬ್ಬರೂ ಸೇರಿ ಅಜ್ಜಿಗೆ ಮದ್ದು ಕುಡಿಸಿದರು. ಮಾತ್ರೆ ಕೊಟ್ಟರು. ಅಜ್ಜಿಯ ಸ್ಥಿತಿ ಕಂಡು ತಾಹಿರಾಳಿಗೆ ಭಯವಾಯಿತು. ಅವಳು ಆತನ ಮುಖ ನೋಡಿದಳು. ಆತನ ಮುಖವೂ ಗಂಭೀರವಾಗಿತ್ತು. ಆ ಮುಖದ ತುಂಬಾ ನೋವು ತುಂಬಿದ್ದನ್ನು ಅವಳು ಗಮನಿಸಿದಳು. ಅವರು ಅಜ್ಜಿಯನ್ನು ಮಲಗಿಸಿದರು. ಹಾಗೆಯೇ ಅವರ ಮುಖ ನೋಡುತ್ತಾ ಮೌನವಾಗಿ ಕುಳಿತುಬಿಟ್ಟರು. ಅಜ್ಜಿಯ ಶ್ವಾಸ ಈಗ ನಿಧಾನವಾಗಿ ಸಹಜಸ್ಥಿತಿಗೆ ಮರಳತೊಡಗಿತು. ಎದೆಯ ಏರಿಳಿತ ಸರಾಗವಾಗತೊಡಗಿತು. ಅವರು ಬಾಯಗಲಿಸಿ ನಿದ್ದೆಗೆ ಜಾರಿದರು. ಅವರ ಅರೆತೆರೆದ ಕಣ್ಣಿನಿಂದ ನೀರು ಇಳಿಯುತ್ತಿದ್ದುದು ಕಂಡು ತಾಹಿರಾಳ ಕಣ್ಣು ತುಂಬಿ ಬಂತು. ನಾಸರ್ ಎದ್ದು ನಿಂತ. ‘‘ಬಾ, ಅಜ್ಜಿ ಮಲಗಲಿ’’ ಎಂದ.
ತಾಹಿರಾ ಎದ್ದು ನಿಂತಳು. ನಾಸರ್ ಅವಳ ಹೆಗಲಮೇಲೆ ಕೈಯಿಟ್ಟು, ‘‘ಹೆದರಬೇಡ ಅಜ್ಜಿಗೆ ಏನೂ ಆಗೋದಿಲ್ಲ’’ ಎಂದ.
ತಾಹಿರಾ ಅವನ ಮುಖ ನೋಡಿದಳು. ಅವನ ಕಣ್ಣಲ್ಲೂ ನೀರು ತುಂಬಿಕೊಂಡಿತ್ತು. ತಾಹಿರಾ ಅವನ ಹೆಗಲಿಗೆ ಒರಗಿದಳು. ನಾಸರ್ ಕಣ್ಣೊರೆಸಿಕೊಂಡ.
ಅವರು ಕೋಣೆ ದಾಟುತ್ತಿರಬೇಕಾದರೆ ಅಂಗಳದಲ್ಲಿ ಕಾರು ಬಂದು ನಿಂತ ಸದ್ದು. ನಾಸರ್ ಅಂಗಳ ಇಳಿದ. ತಾಹಿರಾ ಬಾಗಿಲಲ್ಲೇ ನಿಂತು ನೋಡಿದಳು. ಕಾರಿನಿಂದ ಬುರ್ಖಾ ಹಾಕಿದ ಹೆಂಗಸರು ಇಳಿಯುತ್ತಿದ್ದರು. ಅವಳು ಅಡುಗೆ ಮನೆಗೆ ಓಡಿದಳು.

, ತ್ಯಾಗ ಮಾಡಿ ದೇವನಿಗೆ ನಿಷ್ಠನಾಗಿ ಬದುಕಬೇಕು
(ರವಿವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News