ಸಮಾನ ನಾಗರಿಕ ಸಂಹಿತೆ ಹಿಂದುತ್ವವಾದಿಗಳಿಗೇಕೆ ಬೇಕು?

Update: 2016-10-20 18:31 GMT

ಹಿಂದುತ್ವ ಸಿದ್ಧಾಂತದ ಪಕ್ಷ ನಮ್ಮನ್ನು ಇಂದು ಆಳುತ್ತಿದೆ. ಈ ಸಿದ್ಧಾಂತ ಪ್ರತಿಪಾದಕರ ಮೂರು ಪ್ರಮುಖ ಆಗ್ರಹಗಳೆಂದರೆ, ಸಂವಿಧಾನದ 370ನೆ ವಿಧಿ ರದ್ದು ಮಾಡಬೇಕು, ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎನ್ನುವುದು.

ಬಹುತೇಕ ಈ ಎಲ್ಲ ವಿಷಯಗಳೂ ಅಲ್ಪಸಂಖ್ಯಾತರಿಗೆ ಸಂಬಂಧಿಸಿದವು. ಸಂವಿಧಾನದ 370ನೆ ವಿಧಿ ರದ್ದತಿಯಿಂದ, ಕಾಶ್ಮೀರಿ ಮುಸ್ಲಿಂ ಬಹುಸಂಖ್ಯಾತರು ತಮ್ಮ ಸಂವಿಧಾನಾತ್ಮಕ ಸ್ವಾಯತ್ತತೆ ಬಿಡಬೇಕು, ರಾಮಮಂದಿರಕ್ಕೆ ಮುಸ್ಲಿಮರು ತಮ್ಮ ಮಸೀದಿ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರೆ, ಮುಸ್ಲಿಮರು ತಮ್ಮ ವೈಯಕ್ತಿಕ ಕಾನೂನನ್ನು ತ್ಯಜಿಸಬೇಕು ಎನ್ನುವುದು ಸಮಾನ ನಾಗರಿಕ ಸಂಹಿತೆ ಹಿನ್ನೆಲೆಯ ಆಗ್ರಹ.
ಆದ್ದರಿಂದ ಸಹಜವಾಗಿಯೇ ಇದನ್ನು ಋಣಾತ್ಮಕ ಹಾಗೂ ಬಹುಸಂಖ್ಯಾತರ ಕುಮ್ಮಕ್ಕು ಎಂದು ಪರಿಗಣಿಸಲಾಗುತ್ತಿದೆಯೇ ವಿನಃ ಧನಾತ್ಮಕ ಅಂಶ ಎಂದು ಪರಿಗಣಿಸುವ ಸ್ಥಿತಿ ಇಲ್ಲ. ಅಂದರೆ ಅವರ ಒತ್ತಾಸೆಯ ಹಿಂದಿನ ಉದ್ದೇಶ ಬದಲಾವಣೆ ತರುವುದಲ್ಲ. ಏಕೆಂದರೆ ಹಿಂದುತ್ವ ಶಕ್ತಿಗಳು ಮಸೀದಿಯನ್ನು ಒಡೆದ ಕ್ಷಣದಲ್ಲೇ ಇದು ಸಾಬೀತಾಗಿದೆ. ಈ ಆಂದೋಲನ ಶಿಥಿಲವಾಗಲು ಕಾರಣವೆಂದರೆ ಅದರಲ್ಲಿ ಋಣಾತ್ಮಕ ಅಂಶವೇ ಹೆಚ್ಚಾಗಿತ್ತೇ ವಿನಃ ಧನಾತ್ಮಕ ಅಂಶವಲ್ಲ. ಅಂದರೆ ಇದು ಮಸೀದಿಗೆ ವಿರುದ್ಧವಾಗಿತ್ತೇ ವಿನಃ ದೇವಾಲಯಕ್ಕೆ ಪೂರಕವಾಗಿರಲಿಲ್ಲ.
ಸಂವಿಧಾನದ 370ನೆ ವಿಧಿಯ ವಿಚಾರ ಗಣನೆಗೆ ತೆಗೆದುಕೊಂಡರೆ, ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ವಿಲೀನಕ್ಕೆ ತಡೆ ಒಡ್ಡುವ ಹಲವು ಕಾನೂನಾತ್ಮಕ ಅಂಶಗಳಿವೆ. ಆದರೆ ಆಡಳಿತ ಪಕ್ಷದ ಸಿದ್ಧಾಂತ ಏನು ಎನ್ನುವುದು ಕಾಶ್ಮೀರದ ಇಂದಿನ ಸ್ಥಿತಿಗತಿಯನ್ನು ನೋಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ. ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಕ್ರಮ ಇಂದು ರಾಷ್ಟ್ರೀಯ ಹೆಮ್ಮೆಯ ವಿಚಾರ. ಆದರೆ ಇಂದಲ್ಲ ನಾಳೆ, ಅಲ್ಲಿನ ಪರಿಸ್ಥಿತಿಯನ್ನು ಸರಕಾರ ಹೇಗೆ ನಿಯಂತ್ರಿಸುತ್ತದೆ ಎನ್ನುವುದನ್ನು ನೋಡಲೇಬೇಕಾಗುತ್ತದೆ.
ಇಂದು ರಾಷ್ಟ್ರಮಟ್ಟದಲ್ಲಿ ಚಾಲ್ತಿಗೆ ಬಂದಿರುವ ಇನ್ನೊಂದು ಪ್ರಮುಖ ವಿಚಾರವೆಂದರೆ ಸಮಾನ ನಾಗರಿಕ ಸಂಹಿತೆ. ಇದು ಎರಡು ಹಂತದಲ್ಲಿ ಘಟಿಸುತ್ತಿದೆ. ಒಂದು ಮೂರು ಬಾರಿ ತಲಾಖ್ ಹೇಳುವ ವಿರುದ್ಧದ ಕ್ರಮ. ಇದನ್ನು ಉಳಿಸಿಕೊಳ್ಳಬೇಕು ಎನ್ನುವುದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಒತ್ತಾಸೆ. ಮೂರು ಬಾರಿ ತಲಾಖ್ ಹೇಳುವುದು, ಇಸ್ಲಾಂ ಸಂಪ್ರದಾಯದಲ್ಲಿ ವಿಚ್ಛೇದನ ನೀಡಲು ಪುರುಷರಿಗೆ ಇರುವ ಮಾರ್ಗ. ಆದರೆ ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳೂ ಇದಕ್ಕೆ ಅವಕಾಶ ನೀಡಿಲ್ಲ. ಹೀಗೆ ವಿಚ್ಛೇದನ ನೀಡುವ ಕ್ರಮವನ್ನು ಕಾನೂನುಬಾಹಿರವಾಗಿಸಬೇಕು ಎನ್ನುವುದು ಸರಕಾರದ ಇಂಗಿತ. ನ್ಯಾಯಾಲಯ ಕೂಡಾ ಸರಕಾರದ ಈ ನಿರ್ಧಾರಕ್ಕೆ ಪರವಾಗಿದೆ.
ಇದು ಸಂಭವಿಸಿದರೆ, ಹಲವು ಮಂದಿಯ ಬಂಧನಕ್ಕೆ ನಾವು ಸಿದ್ಧರಾಗಬೇಕಾಗುತ್ತದೆ. ಇನ್ನೊಂದು ವಿಚಾರ ಬಹುಪತ್ನಿತ್ವಕ್ಕೆ ಸಂಬಂಧಿಸಿದ್ದು. ವಾಸ್ತವವಾಗಿ ಹಿಂದುತ್ವವಾದಿಗಳಿಗೆ ಆಸಕ್ತಿ ಇರುವುದು ಈ ವಿಚಾರದಲ್ಲಿ. ಮುಸ್ಲಿಂ ಜನಸಂಖ್ಯೆ ಪ್ರಮಾಣ ಹಿಂದೂ ಜನಸಂಖ್ಯೆ ಬೆಳವಣಿಗೆಗಿಂತ ವೇಗವಾಗಿ ಆಗಲು ಬಹುಪತ್ನಿತ್ವ ಪ್ರಮುಖ ಅಸ್ತ್ರ ಎನ್ನುವುದು ಅವರ ನಂಬಿಕೆ. ಆದರೆ ಅಂಕಿ ಅಂಶಗಳನ್ನು ನೋಡಿದರೆ, ಬಹುಪತ್ನಿತ್ವ ಪ್ರಮಾಣ ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದೂಗಳಲ್ಲಿದೆ. ಆದರೆ ಸಮಾನ ನಾಗರಿಕ ಸಂಹಿತೆಯ ಒತ್ತಡ ತರಲು ಸಮಾಜದಲ್ಲಿ ಬೇರೂರಿರುವ ಈ ಮನೋಭಾವ ಕಾರಣವಾಗಿದೆ. ಉದಾರವಾದಿಗಳು ಮತ್ತು ಎಡಪಂಥೀಯರು ಏಕೆ ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸಬೇಕು ಹಾಗೂ ಬಹುಪತ್ನಿತ್ವವನ್ನು ವಿರೋಧಿಸಬೇಕು ಎಂಬ ಬಗ್ಗೆ ಕೆಲ ದಿನಗಳ ಹಿಂದೆ ಇತಿಹಾಸ ತಜ್ಞ ರಾಮಚಂದ್ರ ಗುಹಾ ಲೇಖನ ಬರೆದಿದ್ದರು. ಹಿಂದುತ್ವದ ಬೇಡಿಕೆಗೆ ವಿರುದ್ಧವಾದ ಅಂಶಗಳನ್ನು ಅವರು ಏಳು ವರ್ಗಗಳಾಗಿ ವಿಂಗಡಿಸಿದ್ದಾರೆ.
* 1950ರ ದಶಕದಲ್ಲಿ ಹಿಂದೂ ವೈಯಕ್ತಿಕ ಕಾನೂನು ಸುಧಾರಣೆ ತಂದಾಗ, ಅದು ಎಷ್ಟು ಪ್ರಗತಿಪರವಾಗಿರಬೇಕಿತ್ತೋ ಅಷ್ಟು ಪ್ರಗತಿಪರವಾಗಿರಲಿಲ್ಲ.
* ಹಿಂದೂಗಳು ಇಂದು ಆಚರಿಸುವ ಸಾಂಪ್ರದಾಯಿಕ ಕಾನೂನು ಹಾಗೂ ವಿಧಾನಗಳು, ಪ್ರತಿಗಾಮಿ. ಉದಾಹರಣೆಗೆ ಖಾಪ್ ಪಂಚಾಯತ್.
* ಸುಧಾರಣೆಯಾಗದ ಮುಸ್ಲಿಂ ವೈಯಕ್ತಿಕ ಕಾನೂನುಗಳು ವಾಸ್ತವವಾಗಿ ಎಷ್ಟು ಪ್ರತಿಗಾಮಿಯಾಗಬೇಕಿತ್ತೂ ಅಷ್ಟರ ಮಟ್ಟಿಗೆ ಪ್ರತಿಗಾಮಿ ಪರಿಣಾಮ ಬೀರುತ್ತಿಲ್ಲ. ಉದಾಹರಣೆಗೆ ಮುಸ್ಲಿಂ ಮಹಿಳೆಯರಿಗೆ ನ್ಯಾಯಬದ್ಧ ಹಕ್ಕುಗಳನ್ನು ನೀಡಲಾಗಿದೆ.
ಮುಸ್ಲಿಮರ ಸಾಂಪ್ರದಾಯಿಕ ಆಚರಣೆಗಳು ಈಗ ಬಿಂಬಿತವಾದಷ್ಟು ಕೆಟ್ಟದಾಗಿಲ್ಲ; ಅಂದರೆ ಮುಸ್ಲಿಂ ಬಹುಪತ್ನಿತ್ವ ಎರಡನೆ ಅಥವಾ ಮೂರನೆ ಪತ್ನಿಯ ವಿರುದ್ಧ ಯಾವುದೇ ತಾರತಮ್ಯ ಎಸಗುವುದಿಲ್ಲ. ಆದರೆ ಹಿಂದೂ ಬಹುಪತ್ನಿತ್ವ ಇಂಥ ತಾರತಮ್ಯಕ್ಕೆ ಕಾರಣವಾಗುತ್ತದೆ.
* ಸಮಾನ ನಾಗರಿಕ ಸಂಹಿತೆಯ ಆಗ್ರಹಕ್ಕೆ ಮೂಲ ಪ್ರೇರಣೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ.
* ಭಾರತ ಸಂವಿಧಾನದ 44ನೆ ವಿಧಿ ಸಮಾನ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುತ್ತದೆ. ಆದರೆ ಇದು ಸಂವಿಧಾನದ 25ನೆ ವಿಧಿಗೆ ವಿರುದ್ಧವಾಗಿದೆ. 25ನೆ ವಿಧಿ ಅನ್ವಯ, ಧರ್ಮವನ್ನು ಪ್ರತಿಪಾದಿಸುವ ಹಕ್ಕು ಎಲ್ಲರಿಗೂ ಇದೆ.
ಸಂವಿಧಾನದ ಹಲವು ವಿಧಿಗಳು ಇನ್ನೂ ಕಾರ್ಯಗತವಾಗಿಲ್ಲ ಎಂದಾದರೆ, ಇದರ ಮೇಲೆ ಮಾತ್ರ ಏಕೆ ವಕ್ರದೃಷ್ಟಿ?
ನನ್ನ ಸ್ವಂತ ಅಭಿಪ್ರಾಯದಂತೆ, ಗುಹಾ ಒಂದು ಅಂಶವನ್ನು ಮರೆತಿದ್ದಾರೆ. ನನ್ನ ಪ್ರಕಾರ ಅದು ಮಹತ್ವದ ಅಂಶ. ಅದೆಂದರೆ ಕೆಲ ಉದಾರವಾದಿಗಳು ಏಕೆ ಈ ಸುಧಾರಣೆಯನ್ನು ವಿರೋಧಿಸುತ್ತಿದ್ದಾರೆ ಎನ್ನುವುದು. ಒಂದು ಸಮೀಕ್ಷೆಯ ಪ್ರಕಾರ, ಶೇ. 90ರಷ್ಟು ಮುಸ್ಲಿಂ ಮಹಿಳೆಯರು ಬಹುಪತ್ನಿತ್ವವನ್ನು ವಿರೋಧಿಸುತ್ತಾರೆ. ಆದರೆ ಶೇ. 90ರಷ್ಟು ಮುಸ್ಲಿಂ ಮಹಿಳೆಯರು ಏಕಪತ್ನಿಯರಾಗಿಯೇ ಮುಂದುವರಿದಿದ್ದಾರೆ ಎನ್ನುವುದು ವಾಸ್ತವ. ಬಹುಪತ್ನಿತ್ವ ವಿವಾಹ ಸಂಬಂಧಕ್ಕೆ ಒಳಗಾದವರು ಈ ಪದ್ಧತಿಯನ್ನು ಹೇಗೆ ಕಾಣುತ್ತಾರೆ ಎಂದು ಪರಾಮರ್ಶಿಸುವುದು ಕೂಡಾ ಅಗತ್ಯ.
ಗುಹಾ ಅವರ ಪ್ರಕಾರ ಬಹುಪತ್ನಿತ್ವ ಎನ್ನುವುದು ಅಸಹ್ಯ ಪದ್ಧತಿ. ಇದನ್ನು ಕೊನೆಗಾಣಿಸಬೇಕು. ನನ್ನ ಪ್ರಕಾರ ಇದು ನೈತಿಕ ತೀರ್ಪು. ಭಾರತೀಯ ಕಾನೂನು ಹಾಗೂ ನಂತರ ಬಂದ ಸರಕಾರಗಳು ಸಲಿಂಗಕಾಮದ ಬಗ್ಗೆ ಕೂಡಾ ಹೀಗೆಯೇ ಹೇಳಿವೆ. ಆದರೆ ಉದಾರವಾದಿಗಳು ಈ ನಿದರ್ಶನದಲ್ಲೂ ವೈಯಕ್ತಿಕ ಹಕ್ಕನ್ನೇ ಪ್ರತಿಪಾದಿಸುತ್ತಾರೆ. ಈ ಎಲ್ಲ ಅಂಶಗಳ ಕಾರಣದಿಂದಲೇ ಈ ಪ್ರಕ್ರಿಯೆ ವೇಗ ಪಡೆದಿದೆ ಎನ್ನುವುದು ನನ್ನ ಊಹೆ. ಹಿಂದುತ್ವ ಪ್ರತಿಪಾದಕರಿಗೆ ತಮ್ಮ ನಿಲುವಿನ ಪ್ರತಿಪಾದನೆಗೆ ಬಹುಶಃ ತಲಾಖ್ ಹಾಗೂ ಬಹುಪತ್ನಿತ್ವ ವೇದಿಕೆ ಕಲ್ಪಿಸಿಕೊಡುವ ಸಾಧ್ಯತೆ ಇದೆ. ಇತರ ಹಲವು ವಿಚಾರಗಳಲ್ಲಿ ಈ ಹಿಂದೆ ಆದಂತೆ ಇದು ಕೂಡಾ ಸಮಸ್ಯೆ ಸೃಷ್ಟಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು.


 (ಆಕಾರ್ ಪಟೇಲ್ ಲೇಖಕ, ಅಂಕಣಕಾರ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಆಡಳಿತ ನಿರ್ದೇಶಕ)
ಕೃಪೆ: firstpost.com

Writer - ಆಕಾರ್ ಪಟೇಲ್

contributor

Editor - ಆಕಾರ್ ಪಟೇಲ್

contributor

Similar News