ಪರವೀನ್ ಬಾಬಿಯ ಶೇ.80 ಸಂಪತ್ತು ಮಹಿಳೆಯರು ಮತ್ತು ಮಕ್ಕಳ ನೆರವಿಗೆ
ಮುಂಬೈ,ಅ.21: ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ನಟಿ ಪರವೀನ್ ಬಾಬಿ ಅವರು ನಿಧನರಾದ 11 ವರ್ಷಗಳ ಬಳಿಕ ಬಾಂಬೆ ಉಚ್ಚ ನ್ಯಾಯಾಲಯವು ಅವರ ಉಯಿಲನ್ನು ಅಸಲಿಯೆಂದು ಒಪ್ಪಿಕೊಂಡಿದೆ. ತನ್ಮೂಲಕ ತನ್ನ ಸಂಪತ್ತು ಶೋಷಿತ ಮಹಿಳೆಯರು ಮತ್ತು ಮಕ್ಕಳ ಜೀವನ ಸುಧಾರಣೆಗೆ ಬಳಕೆ ಯಾಗಬೇಕೆಂಬ ಅವರ ಉದಾತ್ತ ಕನಸು ನನಸಾಗುವ ಮಾರ್ಗ ಸುಗಮಗೊಂಡಿದೆ.
1970 ಮತ್ತು 80ರ ದಶಕಗಳಲ್ಲಿ ಬಾಕ್ಸ್ ಆಫೀಸನ್ನು ಚಿಂದಿ ಉಡಾಯಿಸಿದ್ದ ದೀವಾರ್,ಅಮರ ಅಕ್ಬರ್ ಅಂತೋನಿ,ನಮಕ್ ಹಲಾಲ್‌ನಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದ ಪರವೀನ್ ಮಧುಮೇಹ ಸಮಸ್ಯೆಯಿಂದಾಗಿ 56ನೆಯ ವಯಸ್ಸಿನಲ್ಲಿ ಜುಹುವಿನ ರಿವೇರಾ ಅಪಾರ್ಟ್‌ಮೆಂಟ್ಸ್‌ನಲ್ಲಿಯ ತನ್ನ ಫ್ಲಾಟ್‌ನಲ್ಲಿ ನಿಧನರಾಗಿದ್ದರು. ಒಂಟಿ ಬದುಕು ಸಾಗಿಸುತ್ತಿದ್ದ ಅವರ ಸಾವು ಮೂರು ದಿನಗಳ ಬಳಿಕ 2005,ಜನವರಿ 22ರಂದು ಬೆಳಕಿಗೆ ಬಂದಿತ್ತು.
ಆರಂಭದಲ್ಲಿ ಅವರು ಯಾವುದೇ ಉಯಿಲು ಬರೆದಿಟ್ಟಿಲ್ಲ ಎಂದೇ ಭಾವಿಸಲಾಗಿತ್ತು. ತಿಂಗಳುಗಳ ಬಳಿಕ ಜುನಾಗಡ ನಿವಾಸಿಯಾದ, ಅವರಿಗೆ ತುಂಬ ಆಪ್ತರಾಗಿದ್ದ ಸೋದರಮಾವ ಮುರಾದ್ ಖಾನ್ ಅವರು ಪರವೀನ್ 2002ರಲ್ಲಿ ಬರೆದಿದ್ದ ಉಯಿಲನ್ನು ಹಾಜರಪಡಿಸಿದ್ದರು. ತನ್ನ ಸಂಪತ್ತಿನಲ್ಲಿ ಶೇ.20ರಷ್ಟನ್ನು ಮುರಾದ್ ಖಾನ್ ಹೆಸರಿಗೆ ಬರೆದಿದ್ದ ದಿವಂಗತ ನಟಿ ಉಳಿದ ಸಂಪತ್ತನ್ನು ತನ್ನ ಹೆಸರಿನ ಟ್ರಸ್ಟೊಂದರ ಮೂಲಕ ತನ್ನ ಹುಟ್ಟೂರು ಜುನಾಗಡದಲ್ಲಿನ ಬಾಬಿ ಸಮುದಾಯದ ಶೋಷಿತ ಮಹಿಳೆಯರು ಮತ್ತು ಮಕ್ಕಳ ಬದುಕನ್ನು ಹಸನಾಗಿಸಲು ಬಳಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಆ ವೇಳೆಗಾಗಲೇ ಪರವೀನ್‌ರ ಆಸ್ತಿಯು ಸರಕಾರದ ವಶದಲ್ಲಿತ್ತು.
ಪರವೀನ್ ಅವರ ತಂದೆಯ ಕಡೆಯ ಬಂಧುಗಳು ಇದೊಂದು ನಕಲಿ ಉಯಿಲು ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಸುದೀರ್ಘ ಕಾನೂನು ಸಮರದ ಬಳಿಕ ಈ ವರ್ಷದ ಆರಂಭದಲ್ಲಿ ತಮ್ಮ ಪ್ರತಿಪಾದನೆಯನ್ನು ಕೈಬಿಟ್ಟಿದ್ದ ಅವರು ಅದು ಅಸಲಿ ಉಯಿಲು ಎಂದು ಒಪ್ಪಿಕೊಂಡಿದ್ದರು.
ಅ.14ರಂದು ನ್ಯಾ.ಜಿ.ಎಸ್.ಪಟೇಲ್ ಅವರು ಪರವೀನ್‌ರ ಆಸ್ತಿಗಳನ್ನು ಟ್ರಸ್ಟಿನ ಸದಸ್ಯರೆಂದು ಉಯಿಲಿನಲ್ಲಿ ಕಾಣಿಸಿರುವ ವ್ಯಕ್ತಿಗಳಿಗೆ ಹಸ್ತಾಂತರಿಸುವಂತೆ ಆದೇಶಿಸಿದ್ದಾರೆ. ಮುರಾದ್ ಖಾನ್(82) ಅವರು ಪರವೀನ್ ಕನಸು ಕಂಡಿದ್ದ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಅಧ್ಯಕ್ಷರಾಗಲಿದ್ದು, ಬಾಬಿ ಸಮುದಾಯದ ಇಬ್ಬರು ಮತ್ತು ಖಾನ್ ಆಯ್ಕೆ ಮಾಡುವ ಇಬ್ಬರು ವ್ಯಕ್ತಿಗಳು ಸದಸ್ಯರಾಗಲಿದ್ದಾರೆ.
ಪರವೀನ್ ಬಿಟ್ಟು ಹೋಗಿರುವ ಸಂಪತ್ತಿನಲ್ಲಿ ಜುಹುವಿನಲ್ಲಿರುವ 2,300 ಚದುರಡಿಯ ಫ್ಲಾಟ್,ಜುನಾಗಡದಲ್ಲಿನ ಹವೇಲಿ, ಚಿನ್ನಾಭರಣಗಳು,ಬ್ಯಾಂಕುಗಳಲ್ಲಿ ಕನಿಷ್ಠ 20 ಲ.ರೂ.ಮೊತ್ತದ ಠೇವಣಿಗಳು ಮತ್ತು ಇತರ ಹೂಡಿಕೆಗಳು ಸೇರಿವೆ. ಟ್ರಸ್ಟ್‌ನ ನಿಧಿಯ ಶೇ.10ರಷ್ಟು ಪರವೀನ್ ಮಾಡೆಲಿಂಗ್‌ಗೆ ಇಳಿಯುವ ಮುನ್ನ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಅಹ್ಮದಾಬಾದ್‌ನ ಸೇಂಟ್ ಝೇವಿಯರ್ ಕಾಲೇಜಿಗೆ ಕೊಡುಗೆಯಾಗಿ ಸೇರಲಿದೆ.