ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಸರಕಾರದಿಂದ ಕ್ರಮದ ಭರವಸೆ
ಹೊಸದಿಲ್ಲಿ,ಅ.21: 32 ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡಗಳು ಮಾಹಿತಿ ಸೋರಿಕೆಯ ಅಪಾಯಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶುಕ್ರವಾರ ಹಾನಿ ನಿಯಂತ್ರಣ ಕ್ರಮಕ್ಕೆ ಮುಂದಾದ ಸರಕಾರವು, ಗಾಬರಿಗೊಳ್ಳುವ ಕಾರಣವಿಲ್ಲ ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬ್ಯಾಂಕುಗಳ ಗ್ರಾಹಕರಿಗೆ ಭರವಸೆ ನೀಡಿದೆ. ಈ ವಿಷಯದ ಬಗ್ಗೆ ವರದಿ ಸಲ್ಲಿಸುವಂತೆ ವಿತ್ತಸಚಿವ ಅರುಣ್ ಜೇಟ್ಲಿ ಅವರು ಆರ್‌ಬಿಐ ಮತ್ತು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.
ಕದ್ದ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಬಳಸಿ 19 ಬ್ಯಾಂಕ್‌ಗಳ 641 ಗ್ರಾಹಕರಿಗೆ 1.3 ಕೋ.ರೂ.ಗಳನ್ನು ವಂಚಿಸಲಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತಿಳಿಸಿದೆ.
ಗಾಬರಿ ಪಡುವ ಕಾರಣವಿಲ್ಲ. ಬ್ಯಾಂಕುಗಳ ಐಟಿ ವ್ಯವಸ್ಥೆಯು ಸುಭದ್ರವಾಗಿದೆ ಮತ್ತು ಅಗತ್ಯ ಕ್ರಮಗಳನ್ನು ಸರಕಾರವು ತೆಗೆದುಕೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ನಿಖರವಾಗಿ ನಡೆದಿರುವುದೇನು ಎನ್ನುವುದನ್ನು ತಿಳಿದುಕೊಳ್ಳಲು ಆರ್‌ಬಿಐ ಮತ್ತು ಬ್ಯಾಂಕುಗಳಿಂದ ವರದಿಗಳನ್ನು ಕೇಳಲಾಗಿದೆ ಎಂದು ಅವರು ಹೇಳಿದರು.