ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗ : ಮದ್ಯ ಸೇವಿಸಿ ವಿಮಾನ ಚಲಾಯಿಸುವ ಪೈಲಟ್‌ಗಳು

Update: 2016-10-21 14:00 GMT

ಹೊಸದಿಲ್ಲಿ, ಅ.21: ವಾಯುಯಾನ ಸುರಕ್ಷತೆ ನಿಯಂತ್ರಕರ ಪ್ರಕಾರ, ಈ ವರ್ಷದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ , ಪ್ರತೀ 2 ದಿನಕ್ಕೆ ಒಬ್ಬರಂತೆ ಪೈಲಟ್‌ಗಳು ಮದ್ಯಪಾನ ಸೇವಿಸಿರುವುದು ಖಚಿತವಾಗಿದೆ. 89 ಪೈಲಟ್‌ಗಳು ಮದ್ಯಪಾನ ಮಾಡಿರುವುದು ವಿಮಾನ ಚಲಾಯಿಸುವ ಮುನ್ನ ನಡೆಸಲಾಗುವ ಉಸಿರು ಪರೀಕ್ಷೆಯ ವೇಳೆ ಪತ್ತೆಯಾಗಿದೆ .ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ , ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (ಡಿಜಿಸಿಎ) ದೊರೆತ ಮಾಹಿತಿ ಇದು. ಇಷ್ಟೊಂದು ಸಂಖ್ಯೆಯಲ್ಲಿ ಪೈಲಟ್‌ಗಳು ಸಿಕ್ಕಿಬಿದ್ದಿದ್ದಾರೆ ಎಂದ ಮೇಲೆ ಇದು ಕಾನೂನಿನ ಸಮರ್ಪಕ ಜಾರಿಯಲ್ಲಾಗಿರುವ ಕೊರತೆಯನ್ನು ತೋರಿಸುತ್ತದೆ. ಇನ್ನೂ ಹಲವಾರು ಪ್ರಕರಣಗಳು ವರದಿಯಾಗದೆ ಇದ್ದಿರಬಹುದು ಎಂದು ನಿವೃತ್ತ ಪೈಲಟ್ ಮತ್ತು ಸರಕಾರ ನೇಮಿಸಿದ ವಾಯು ಸುರಕ್ಷಾ ಸಮಿತಿಯ ಮಾಜಿ ಸದಸ್ಯ ಮೋಹನ್ ರಂಗನಾಥನ್ ತಿಳಿಸಿದ್ದಾರೆ. ಇವರು ನೂರಾರು ಜೀವಗಳನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ. ಇದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದರೆ ಮಾತ್ರ ಈ ಕೃತ್ಯವನ್ನು ತಡೆಗಟ್ಟಲು ಸಾಧ್ಯ ಎಂದಿದ್ದಾರೆ. 2011ರಲ್ಲಿ ಇಂತಹ 69 ಪ್ರಕರಣಗಳು ದಾಖಲಾಗಿದ್ದರೆ, 2015ರಲ್ಲಿ ಮೂರು ಪಟ್ಟು ಹೆಚ್ಚಿತು. ಈ ಮೊದಲು ಪೈಲಟ್‌ಗಳು ಮದ್ಯಸೇವಿಸಿದ್ದಾರೆಯೇ ಎಂದು ಪರೀಕ್ಷಿಸಲು ಆಲ್ಕೊ ಸೆನ್ಸರ್ ಎಂಬ ಉಪಕರಣ ಬಳಸಲಾಗುತ್ತಿತ್ತು. ಈ ಉಪಕರಣದ ಮುಂದೆ ನಿಂತು ಉಸಿರು ಪರೀಕ್ಷಿಸುವ ಮೊದಲು, ಬಾಯಲ್ಲಿ ಒಂದು ಚ್ಯೂಯಿಂಗ್ ಗಮ್ ಜಗಿದರೆ ಸಾಕು. ಸುಲಭವಾಗಿ ಪಾರಾಗಬಹುದಿತ್ತು. ಆದರೆ ಈಗ ಸುಧಾರಿತ ಉಪಕರಣ ಬಂದಿದೆ. ಈಗ ಸುದೀರ್ಘವಾಗಿ ಶ್ವಾಸ ಎಳೆದುಕೊಳ್ಳಬೇಕಾಗುತ್ತದೆ. ಇಲ್ಲಿ ವಂಚನೆಗೆ ಆಸ್ಪದವಿಲ್ಲ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಸಂಚಾರಕ್ಕೆ ಮೊದಲು ಮತ್ತು ಆ ಬಳಿಕ ಮದ್ಯಪಾನ ಪರೀಕ್ಷೆ ನಡೆಸಲಾಗುತ್ತದೆ. ಸತತವಾಗಿ ತಪ್ಪೆಸಗಿದ ಪೈಲಟ್‌ನ ಲೈಸೆನ್ಸ್ ರದ್ದುಪಡಿಸಲಾಗುತ್ತದೆ. ಈ ರೀತಿಯ ತಪ್ಪೆಸಗಿದ ಜೆಟ್ ಏರ್‌ವೇಸ್ ಮತ್ತು ಏರ್‌ಇಂಡಿಯಾ ವಿಮಾನದ ಪೈಲಟ್‌ಗಳ ವಿರುದ್ಧ ಪೊಲೀಸ್ ದೂರು ದಾಖಲಿಸುವಂತೆ ಡಿಜಿಡಿಎ ಸೂಚಿಸಿತ್ತು. ಅಲ್ಲದೆ ಈ ಇಬ್ಬರು ಪೈಲಟ್‌ಗಳು ನಾಲ್ಕು ವರ್ಷದವರೆಗೆ ವಿಮಾನ ಚಲಾಯಿಸದಂತೆ ನಿಷೇದಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News