×
Ad

ರಿಲಾಯನ್ಸ್ ಜಿಯೋ ಕರೆವೈಫಲ್ಯ ವಿವಾದ : ಏರ್‌ಟೆಲ್,ವೊಡಾಫೋನ್, ಐಡಿಯಾಗೆ 3050 ಕೋಟಿ ರೂ. ಟ್ರಾಯ್ ದಂಡ

Update: 2016-10-21 22:51 IST

  ಹೊಸದಿಲ್ಲಿ,ಅ.21: ರಿಲಾಯನ್ಸ್ ಜಿಯೋಗೆ ಸಮರ್ಪಕವಾದ ಇಂಟರ್‌ಕನೆಕ್ಟ್ ಪಾಯಿಂಟ್‌ಗಳನ್ನು ಒದಗಿಸದೆ ಇರುವ ಮೂಲಕ ಕರೆವೈಫಲ್ಯಗಳಿಗೆ ಕಾರಣವಾಗುತ್ತಿರುವುದಕ್ಕಾಗಿ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲರ್‌ಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು 3050 ಕೋಟಿ ರೂ. ದಂಡ ವಿಧಿಸಿದೆ. ಮೊಬೈಲ್ ಲೈಸೆನ್ಸ್‌ನ ನಿಯಮ ಹಾಗೂ ಶರತ್ತುಗಳನ್ನು ಉಲ್ಲಂಘಿಸುವ ಮೂಲಕ ಈ ಮೊಬೈಲ್ ಸೇವಾದಾರ ಕಂಪೆನಿಗಳು ಗ್ರಾಹಕ ವಿರೋಧಿ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಿದೆಯೆಂದು ಟ್ರಾಯ್ ತಿಳಿಸಿದೆ.

 ಏರ್‌ಟೆಲ್ ಹಾಗೂ ವೋಡಾಫೋನ್‌ಗೆ ತಲಾ 1050 ಕೋಟಿ ರೂ. ಹಾಗೂ ಐಡಿಯಾ ಸೆಲ್ಯುಲ್ಯರ್‌ಗೆ 950 ಕೋಟಿ ರೂ. ದಂಡ ವಿಧಿಸುವಂತೆ ಟ್ರಾಯ್ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

ತನ್ನ ಜಾಲದಲ್ಲಿ ಅಗಾಧ ಪ್ರಮಾಣದ ಕರೆ ವೈಫಲ್ಯಗಳು ಉಂಟಾಗು ತ್ತಿರುವುದಕ್ಕೆ ಈ ಸಂಸ್ಥೆಗಳು ಕಾರಣವೆಂದು ಆಪಾದಿಸಿರುವ ರಿಲಾಯನ್ಸ್ ಜಿಯೋ ಇದಕ್ಕಾಗಿ ಅವುಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಟ್ರಾಯ್‌ಗೆ ಆಗ್ರಹಿಸಿತ್ತು.

ಆದರೆ ಪರವಾನಗಿ ರದ್ದತಿಯಿಂದಾಗಿ ಗಣನೀಯ ಸಂಖ್ಯೆಯ ಗ್ರಾಹಕರಿಗೆ ಅನಾನುಕೂಲವುಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅವುಗಳಿಗೆ ದಂಡ ವಿಧಿಸಲು ತಾನು ಶಿಫಾರಸು ಮಾಡುವುದಾಗಿ ಟ್ರಾಯ್ ತಿಳಿಸಿದೆ.

ಈ ಮೂರು ಟೆಲಿಕಾಂ ಸಂಸ್ಥೆಗಳ ವಿರುದ್ಧ ದಂಡ ವಿಧಿಸುವ ಕುರಿತಾದ ತನ್ನ ಶಿಫಾರಸನ್ನು ಟ್ರಾಯ್ ಟೆಲಿಕಾಂ ಸಚಿವಾಲಯಕ್ಕೆ ಕಳುಹಿಸಿದ್ದು, ಅದು ಈ ಬಗ್ಗೆ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲಿದೆ. ಟ್ರಾಯ್‌ಗೆ ದಂಡವನ್ನು ವಿಧಿಸುವ ಅಧಿಕಾರವಿಲ್ಲ. ಆದರೆ ಟೆಲಿಕಾಂ ನಿಯಮಾವಳಿಗಳು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುವ ಟೆಲಿಕಾಂ ಕಂಪೆನಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲು ಅದು ಶಿಫಾರಸು ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News