×
Ad

ಜನವರಿಯಿಂದ ಉಡಾಣ್ ವಿಮಾನಯಾನ ಆರಂಭ

Update: 2016-10-21 23:41 IST

ಹೊಸದಿಲ್ಲಿ, ಅ.21: ‘ಉಡೆ ದೇಶ್ ಕ ಆಮ್ ನಾಗರಿಕ್’ ಅಥವಾ ಉಡಾಣ್ ಎಂಬ ಹೆಸರಿನಲ್ಲಿ ಸಾಮಾನ್ಯ ಜನರನ್ನೂ ವಿಮಾನದ ಮೂಲಕ ಆಕಾಶದಲ್ಲಿ ಹಾರಾಡಿಸುವ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಗೆ ಮುಂದಿನ ಜನವರಿ ವೇಳೆಗೆ ಚಾಲನೆ ನೀಡಲಾಗುತ್ತದೆ. ಸಣ್ಣ ಪುಟ್ಟ ನಗರಗಳನ್ನು ಸಂಪರ್ಕಿಸುವ ಈ ವಿಮಾನಯಾನ ಸೇವೆಯಲ್ಲಿ ಒಂದು ಗಂಟೆಯ ಸಂಚಾರಕ್ಕೆ ಪ್ರಯಾಣಿಕರು ಸುಮಾರು ಎರಡೂವರೆ ಸಾವಿರ ರೂ. ಪಾವತಿಸಬೇಕು. ಪ್ರಾದೇಶಿಕ ಸಂಪರ್ಕ ಯೋಜನೆ ಎಂಬ ಹೆಸರಿನ ಈ ಯೋಜನೆಯಡಿ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ‘ಉಡಾಣ್’ ವಿಮಾನಗಳು ಇಳಿದರೆ ಆಗ ಆರ್‌ಸಿಎಸ್ ಶುಲ್ಕ (ಪ್ರಾದೇಶಿಕ ಸಂಪರ್ಕ ಯೋಜನೆ ಶುಲ್ಕ) ವಿಧಿಸಲಾಗುತ್ತದೆ. ಈ ಶುಲ್ಕ ಅತ್ಯಲ್ಪವಾಗಿರುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ತೆರಬೇಕಾದ ಹೆಚ್ಚುವರಿ ಮೊತ್ತ 60 ರೂ. ಮಿತಿಯಲ್ಲಿರುತ್ತದೆ ಎಂದು ವಾಯುಯಾನ ಕಾರ್ಯದರ್ಶಿ ಆರ್.ಎನ್. ಚೌಬೆ ತಿಳಿಸಿದ್ದಾರೆ. ಆದರೆ ಆರ್‌ಸಿಎಸ್ ಶುಲ್ಕದ ಹೊರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸುವುದನ್ನು ವಿಮಾನಯಾನ ಸಂಸ್ಥೆಗಳು ವಿರೋಧಿಸಿವೆ. ಸರಕಾರ ಈ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡುವುದು ಸರಿಯಲ್ಲ. ಇನ್ಯಾವುದೇ ನಿಧಿಯ ಮೂಲಕ ಸರಿದೂಗಿಸಿಕೊಳ್ಳಬೇಕು ಎಂದು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗದಂತೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ನಷ್ಟವಾಗದ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೂರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಿಮಾನಯಾನ ಸಚಿವ ಜಯಂತ್ ಸಿನ್ಹ ತಿಳಿಸಿದ್ದಾರೆ. ಇದೀಗ ಬಿಡ್ಡರ್‌ಗಳಿಗೆ ಮೂರು ವರ್ಷ ವಿಮಾನಯಾನ ಸೌಲಭ್ಯದ ಅವಕಾಶ ನೀಡಲಾಗಿದೆ (ಈ ಹಿಂದೆ ಒಂದು ವರ್ಷ ಎಂದಿತ್ತು), ಸಣ್ಣ ನಗರಗಳಿಂದ ದಿಲ್ಲಿ, ಕೊಲ್ಕತ್ತಾದಂತಹ ಮೆಟ್ರೋ ನಗರಗಳಿಗೆ ಸಂಚರಿಸುವ ‘ಉಡಾಣ್’ ವಿಮಾನಗಳು ದೊಡ್ಡ ವಿಮಾನ ನಿಲ್ದಾಣಗಳಲ್ಲಿ ನಿಲ್ದಾಣ ಶುಲ್ಕ ನೀಡಬೇಕಿಲ್ಲ, ಉದ್ದಿಮೆದಾರರು ವಿಮಾನಗಳನ್ನು ಲೀಸ್‌ಗೆ ಪಡೆದುಕೊಂಡು ನಿರ್ವಹಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News