ಎಂಬ್ರೇರ್ ವಿಮಾನ ಖರೀದಿ ಅವ್ಯವಹಾರ

Update: 2016-10-21 18:15 GMT

ಹೊಸದಿಲ್ಲಿ, ಅ.21: ಹಿಂದಿನ ಯುಪಿಎ ಸರಕಾರದ ಕಾಲದಲ್ಲಿ ನಡೆದಿದ್ದ, ಬ್ರೆಝಿಲ್‌ನ ವಿಮಾನ ನಿರ್ಮಾಣ ಸಂಸ್ಥೆ ಎಂಬ್ರೇರ್‌ನೊಂದಿಗಿನ 20.8 ಕೋಟಿ ಡಾಲರ್‌ಗಳ ಒಪ್ಪಂದದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಪ್ರಕರಣವೊಂದನ್ನು ದಾಖಲಿಸಿದ್ದು, ಅದರಲ್ಲಿ ಅನಿವಾಸಿ ಭಾರತೀಯ ರಕ್ಷಣಾ ಸಲಹೆಗಾರ ವಿಪಿನ್ ಖನ್ನಾರನ್ನು ಪ್ರಮುಖ ಆರೋಪಿಯೆಂದು ಹೆಸರಿಸಿದೆ.
87ರ ಹರೆಯದ ಖನ್ನಾ ವ್ಯವಹಾರ ಕುದುರಿಸಲು ಎಂಬ್ರೇರ್‌ನಿಂದ ಸುಮಾರು 60 ಲಕ್ಷ ಡಾಲರ್ ಪಡೆದಿದ್ದಾರೆಂದು ಆರೋಪಿಸಲಾಗಿದೆ.
2008ರಲ್ಲಿ ವ್ಯವಹಾರ ಕುದುರಿಸಲು ಎಂಬ್ರೇರ್ ಬ್ರಿಟನ್ ಮೂಲದ ಭಾರತೀಯ ದಲ್ಲಾಳಿಯೊಬ್ಬನನ್ನು ನೇಮಿಸಿಕೊಂಡಿತ್ತೆಂಬ ವರದಿಗಳ ಕುರಿತು ತನಿಖೆ ನಡೆಸುವಂತೆ ಕಳೆದ ತಿಂಗಳು ಕೇಂದ್ರ ಸರಕಾರ ಸಿಬಿಐಗೆ ಆದೇಶ ನೀಡಿತ್ತು. ಲಂಚದ ಹಣ ಆಸ್ಟ್ರೇಲಿಯ ಹಾಗೂ ಸ್ವಿಝರ್ಲೆಂಡ್‌ಗಳ ಮೂಲಕ ಬಂದಿದೆಯೆಂದು ಹೇಳಲಾಗಿದೆ.
ವಾಯು ದಾಳಿಯ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ವ್ಯವಸ್ಥೆಗಾಗಿ ಸ್ವದೇಶಿ ನಿರ್ಮಿತ ರಾಡರ್‌ಗಳೊಂದಿಗೆ ಸನ್ನದ್ಧವಾದ 3 ವಿಮಾನಗಳ ಖರೀದಿಗಾಗಿ ಮಾಡಿಕೊಂಡಿದ್ದ ಒಪ್ಪಂದ ಇದಾಗಿದೆ. ಮೊದಲ ವಿಮಾನ 2011ರಲ್ಲಿ ಪೂರೈಸುವುದರಿಂದ ಅದರ ಖರೀದಿ ನಿಲ್ಲದು. ಎಂಬ್ರೇರ್ ವಿರುದ್ಧ ಯಾವುದೇ ಕ್ರಮವು ದಂಡ ಹಾಗೂ ಇತರ ಕ್ರಮಗಳನ್ನೊಳಗೊಳ್ಳಬಹುದು. ಆದರೆ, ಸಂಪೂರ್ಣ ನಿಷೇಧ ವಿಧಿಸುವ ಸಂಭವವಿಲ್ಲವೆಂದು ಭಾರತೀಯ ವಾಯು ದಳ ಅಭಿಪ್ರಾಯಿಸಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News