ಪಾಕ್‌ನಿಂದ ಮತ್ತೆ ಎರಡು ಬಾರಿ ಕದನವಿರಾಮ ಉಲ್ಲಂಘನೆ: ಯೋಧನಿಗೆ ಗಾಯ

Update: 2016-10-21 18:17 GMT

ಜಮ್ಮು,ಅ.21: ರಾಜೌರಿಯ ನಿಯಂತ್ರಣ ರೇಖೆ ಮತ್ತು ಕಥುವಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಸೈನಿಕರು ಶುಕ್ರವಾರ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಓರ್ವ ಬಿಎಸ್‌ಎಫ್ ಯೋಧ ಗಾಯಗೊಂಡಿದ್ದಾನೆ. ಭಾರತೀಯ ಪಡೆಗಳು ಪ್ರತಿ ದಾಳಿ ನಡೆಸುವ ಮೂಲಕ ಬಲವಾದ ಉತ್ತರ ನೀಡಿವೆ.

ನಿನ್ನೆ ಕಥುವಾ ಪ್ರದೇಶದಲ್ಲಿ ಬಿಎಸ್‌ಎಫ್ ಯೋಧರು ಆರು ಉಗ್ರರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದರು.
ಇಂದು ಮಧ್ಯಾಹ್ನ 12:40ಕ್ಕೆ ರಾಜೌರಿ ವಿಭಾಗದಲ್ಲಿ ಪಾಕಿಸ್ತಾನದ ಸೈನಿಕರು ಗುಂಡಿನ ದಾಳಿಯನ್ನು ಆರಂಭಿಸಿದ್ದು ನಮ್ಮ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರೋರ್ವರು ತಿಳಿಸಿದರು.
ಕಥುವಾ ಜಿಲ್ಲೆಯ ಹೀರಾನಗರ ವಿಭಾಗದ ಬೊಬಿಯಾ ಪ್ರದೇಶದಲ್ಲಿ ಪಾಕ್ ರೇಂಜರ್‌ಗಳು ಬೆಳಿಗ್ಗೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದು, ಬಿಎಸ್‌ಎಫ್ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ಸುಮಾರು 15 ನಿಮಿಷಗಳ ಕಾಲ ಮುಂದುವರಿದಿತ್ತು ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು. ಪಾಕ್ ಗುಂಡಿನ ದಾಳಿಯಿಂದ ಬಿಎಸ್‌ಎಫ್ ಯೋಧನೋರ್ವ ಗಾಯಗೊಂಡಿದ್ದಾನೆ ಎಂದರು.
ಭಾರತೀಯ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಪಾಕಿಸ್ತಾನಿ ರೇಂಜರ್ ಗಾಯಗೊಂಡಿದ್ದಾನೆ ಅಥವಾ ಕೊಲ್ಲಲ್ಪಟ್ಟಿದ್ದಾನೆ ಎಂದು ದೃಢಪಡದ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News