ಎರಡನೆ ಟೆಸ್ಟ್‌ನಲ್ಲಿ ಯೂನಿಸ್ ಶತಕ ; ಮಿಸ್ಬಾ ಔಟಾಗದೆ 90

Update: 2016-10-21 18:56 GMT

   ದುಬೈ, ಅ21: ನಾಲ್ಕನೆ ವಿಕೆಟ್‌ಗೆ ಹಿರಿಯ ಆಟಗಾರ ಯೂನಿಸ್ ಖಾನ್ ಮತ್ತು ನಾಯಕ ಮಿಸ್ಬಾವುಲ್ ಹಕ್ ದಾಖಲಿಸಿದ 175 ರನ್‌ಗಳ ಜೊತೆಯಾಟದ ನೆರವಿನಲ್ಲಿ ಪಾಕಿಸ್ತಾನ ತಂಡ ಇಲ್ಲಿ ಇಂದು ಆರಂಭಗೊಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಸುಭದ್ರ ಸ್ಥಿತಿಗೆ ತಲುಪಿದೆ.
ಅಬುಧಾಬಿಯ ಶೇಖ್ ಝಾಯಿದ್ ಸ್ಟೇಡಿಯಂನಲ್ಲಿ ಇಂದು  ಪಾಕಿಸ್ತಾನ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 84 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 304 ರನ್ ಗಳಿಸಿದೆ.
 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಆರಂಭಿಕ ದಾಂಡಿಗರನ್ನು ಬೇಗನೆ ಕಳೆದುಕೊಂಡಿತ್ತು. ಅಝರ್ ಅಲಿ (0) ಅವರು 9 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯದೆ ಗ್ಯಾಬ್ರಿಯೆಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಸಮಿ ಅಸ್ಲಮ್ (6) ಒಂದು ಬೌಂಡರಿ ಬಾರಿಸಿ ಕ್ರೀಸ್‌ನಲ್ಲಿ ತಳವೂರುವ ನಿಟ್ಟಿನಲ್ಲಿ ಯೋಚಿಸಿದ್ದರು. 30 ಎಸೆತಗಳನ್ನು ಎದುರಿಸಿದ್ದ ಅವರು ಕೇವಲ 6 ರನ್ ಗಳಿಸಿ ಬಿಶೂ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು.
ಮೂರನೆ ವಿಕೆಟ್‌ಗೆ ಅಸಾದ್ ಶಫೀಕ್‌ಗೆ ಯೂನಿಸ್ ಖಾನ್ ಸಾಥ್ ನೀಡಿದರು. ಇವರು 87 ರನ್‌ಗಳ ಜೊತೆಯಾಟ ನೀಡಿದರು. 68 ರನ್ ಗಳಿಸಿದ್ದ ಶಫೀಕ್ 40ನೆ ಓವರ್‌ನ ಕೊನೆಯ ಎಸೆತದಲ್ಲಿ ಗ್ಯಾಬ್ರಿಯೆಲ್‌ಗೆ ವಿಕೆಟ್ ಒಪ್ಪಿಸಿದರು.
 ಪಾಕಿಸ್ತಾನ 129 ರನ್‌ಗೆ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದಾಗ ನಾಯಕ ಮಿಸ್ಬಾವುಲ್ ಹಕ್ ತಂಡದ ನೆರವಿಗೆ ಧಾವಿಸಿದರು. 38ರ ಹರೆಯದ ಯೂನಿಸ್ ಖಾನ್ ಮತ್ತು 42ರ ಹರೆಯದ ಮಿಸ್ಬಾವುಲ್ ಹಕ್ ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು.
  ಇವರ ಜೊತೆಯಾಟ ನೆರವಿನಲ್ಲಿ ತಂಡದ ಸ್ಕೋರ್ 300ರ ಗಡಿ ದಾಟಿತು. 109ನೆ ಟೆಸ್ಟ್ ಆಡುತ್ತಿರುವ ಯೂನಿಸ್ ಖಾನ್ 33ನೆ ಶತಕ ದಾಖಲಿಸಿದರು. 169 ಎಸೆತಗಳನ್ನು ಎದುರಿಸಿದ ಯೂನಿಸ್ ಖಾನ್ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು. ಡೆಂಗ್ ಜ್ವರದಿಂದ ಚೇತರಿಸಿಕೊಂಡು ತಂಡದ ಸೇವೆ ಮರಳಿದ್ದ ಯೂನಿಸ್ ಖಾನ್ 205 ಎಸೆತಗಳನ್ನು ಎದುರಿಸಿದರು. 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 127 ರನ್ ಗಳಿಸಿ ಬ್ರಾಥ್‌ವೈಟ್ ಎಸೆತದಲ್ಲಿ ಚೇಸ್‌ಗೆ ಕ್ಯಾಚ್ ನೀಡಿದರು.
ಯೂನಿಸ್ ಖಾನ್ ಔಟಾದ ಬೆನ್ನಲ್ಲೆ ಮೊದಲ ದಿನದ ಆಟ ಮುಕ್ತಾಯಗೊಂಡಿತು. ಯೂನಿಸ್ ಖಾನ್‌ಗೆ ಬೆಂಬಲ ನೀಡಿದ್ದ ನಾಯಕ ಮಿಸ್ಬಾವುಲ್ ಹಕ್ ಔಟಾಗದೆ 90 ರನ್(146ಎ, 4ಬೌ,2ಸಿ) ಗಳಿಸಿದ್ಧಾರೆ.
67ನೆ ಟೆಸ್ಟ್ ಆಡುತ್ತಿರುವ ಮಿಸ್ಬಾವುಲ್ ಹಕ್ 35ನೆ ಅರ್ಧಶತಕ ದಾಖಲಿಸಿದ್ದಾರೆ.11ನೆ ಶತಕದ ಹಾದಿಯಲ್ಲಿರುವ ಅವರು ಆಟವನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ವೆಸ್ಟ್‌ಇಂಡಿಸ್ ತಂಡದ ಗ್ಯಾಬ್ರಿಯೆಲ್ 43ಕ್ಕೆ 2 ಮತ್ತು ಬ್ರಾಥ್‌ವೈಟ್ 36ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ವಿವರ
ಪಾಕಿಸ್ತಾನ 84 ಓವರ್‌ಗಳಲ್ಲಿ 304/4( ಯೂನಿಸ್ ಖಾನ್ 127, ಮಿಸ್ಬಾವುಲ್ ಹಕ್ ಔಟಾಗದೆ 90, ಶಫೀಕ್ 68; ಗ್ಯಾಬ್ರಿಯೆಲ್ 43ಕ್ಕೆ 2).
 


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News