×
Ad

‘ಹನಿ ಟ್ರಾಪಿಂಗ್ ’ಆರೋಪ ಅಲ್ಲಗಳೆದ ಬಿಜೆಪಿ ಸಂಸದ ವರುಣ್ ಗಾಂಧಿ

Update: 2016-10-22 16:11 IST

ಹೊಸದಿಲ್ಲಿ,ಅ.22: ನೌಕಾಪಡೆಯ ‘ಯುದ್ಧ ಕೋಣೆ ಮಾಹಿತಿ ಸೋರಿಕೆ ’ ಪ್ರಕರಣದಲ್ಲಿ ಶಸ್ತ್ರಾಸ್ತ್ರ ವ್ಯಾಪಾರ ಅಭಿಷೇಕ್ ವರ್ಮಾನ ಬಂಧನಕ್ಕೆ ಕಾರಣರಾಗಿದ್ದ ಅಮೆರಿಕದ ಎಡ್ಮಂಡ್ಸ್ ಅಲೆನ್ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಆ ಬಗ್ಗೆ ಪತ್ರವೊಂದನ್ನು ಬಿಡುಗಡೆಗೊಳಿದ್ದಾರೆ. ‘ಭಾರತದ ಜನತೆ ’ಗೆ ಉದ್ದೇಶಿಸಿ ಬರೆದಿರುವ ಈ ಪತ್ರದಲ್ಲಿ ವರುಣ ತನ್ನ ವಿರುದ್ಧದ ಎಲ್ಲ ಅರೋಪಗಳನ್ನು ನಿರಾಕರಿಸಿದ್ದಾರೆ. ತಾನು ಸೋರಿಕೆ ಮಾಡಿದ್ದೇನೆ ಎನ್ನಲಾಗಿರುವ ಮಾಹಿತಿಗಳ ಸಂಪರ್ಕವೂ ತನಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

 ವರ್ಮಾ ವರುಣರನ್ನು ‘ಸುಂದರಿಯರ ಮೋಹದ ಬಲೆ(ಹನಿ ಟ್ರಾಪ್)’ಯಲ್ಲಿ ಸಿಲುಕಿಸಿ ಬ್ಲಾಕ್ ಮೇಲ್ ಮಾಡುವ ಮೂಲಕ ಅವರಿಂದ ರಕ್ಷಣಾ ಸಮಾಲೋಚಕ ಸಮಿತಿಯ ಮಾಹಿತಿಗಳನ್ನು ಪಡೆದುಕೊಂಡಿದ್ದ ಎಂದು ಅಲೆನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

2009ರಿಂದ ತಾನು ರಕ್ಷಣಾ ಸಮಾಲೋಚಕ ಮತ್ತು ರಕ್ಷಣಾ ಸ್ಥಾಯಿ ಸಮಿತಿಗಳ ಸದಸ್ಯನಾಗಿದ್ದೆನಾದರೂ ರಕ್ಷಣಾ ಸಮಾಲೋಚಕ ಸಮಿತಿಯ ಒಂದೇ ಒಂದು ಸಭೆಯಲ್ಲಿ ತಾನು ಭಾಗವಹಿಸಿರಲಿಲ್ಲ ಮತ್ತು ಸ್ಥಾಯಿ ಸಮಿತಿಯ ಕೆಲವೇ ಸಭೆಗಳಲ್ಲಿ ಭಾಗವಹಿಸಿದ್ದೆ ಎನ್ನುವುದನ್ನು ದಾಖಲೆಗಳೇ ಸಾಬೀತು ಮಾಡುತ್ತವೆ. ತಾನು ಸಮಿತಿಯ ಯಾವುದೇ ಮಾಹಿತಿಗಳನ್ನು ಕೋರಿರಲಿಲ್ಲ ಅಥವಾ ಅವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಲೆನ್ ಆರೋಪಿಸಿರುವಂತೆ ಅಂತಹ ಗುಪ್ತ ಅಜೆಂಡಾ ಅಥವಾ ಉದ್ದೇಶವಿದ್ದಿದ್ದರೆ ಅದು ಸಮಿತಿ ಸಭೆಗಳಿಗೆ ತನ್ನ ಹಾಜರಾತಿಯಲ್ಲಿ ಪ್ರತಿಬಿಂಬಿಸುತಿತ್ತು ಎಂದು ಅವರು ಹೇಳಿದ್ದಾರೆ. ಸ್ಥಾಪಿತ ಸಂಸದೀಯ ಪರಿಪಾಠದಂತೆ ಇಂತಹ ಯಾವುದೇ ಸಂಸದೀಯ ಸಮಿತಿಗಳ ’ರಹಸ್ಯ ಮಾಹಿತಿ ’ಗಳನ್ನು ಪಡೆಯುವುದು ಸದಸ್ಯರಿಗೆ ಎಂದಿಗೂ ಸಾಧ್ಯವಿಲ್ಲ ಎನ್ನುವುದು ಯಾವುದೇ ಸಂಸದರಿಗಾದರೂ ಗೊತ್ತಿರುವ ವಿಷಯವೇ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ವ್ಯಾಪಕ ತನಿಖೆಯನ್ನು ನಡೆಸಿರುವುದರಿಂದ ತನ್ನ ಪಾತ್ರವಿದ್ದಿದ್ದರೆ ಹಿಂದೆಯೇ ಬೆಳಕಿಗೆ ಬರುತ್ತಿತ್ತು. ತನ್ನ ಹೆಸರು ಈವರೆಗೆ ಪ್ರಸ್ತಾವಗೊಂಡಿರಲಿಲ್ಲ ಎನ್ನುವುದೇ ತಾನು ಇದರಲ್ಲಿ ಭಾಗಿಯಾಗಿರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

ತನಗೆ ವರ್ಮಾನ ಪರಿಚಯವಿದೆ. ತಾನು ಬ್ರಿಟನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಆತನ ಭೇಟಿಯಾಗಿತ್ತು ಎಂದು ಒಪ್ಪಿಕೊಂಡಿರುವ ವರುಣ್, ತಾವು ಕೆಲವು ಬಾರಿ ಭೇಟಿ ಯಾಗಿದ್ದೇವಾದರೂ ಯಾವುದೇ ಕಾರ್ಯದ ಬಗ್ಗೆ ಎಂದೂ ಚರ್ಚಿಸಿರಲಿಲ್ಲ ಎಂದಿದ್ದಾರೆ. ತನ್ನ ವರ್ಚಸ್ಸಿಗೆ ಕಳಂಕ ಹಚ್ಚಲು ಪ್ರಯತ್ನಿಸಿರುವವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News