‘ಕುತುಬ್ ಮಿನಾರ್‌ನಂತಿವೆ ತ್ಯಾಜ್ಯದ ರಾಶಿ’

Update: 2016-10-22 13:58 GMT

ಹೊಸದಿಲ್ಲಿ, ಅ.22: ದಿಲ್ಲಿಯಲ್ಲಿರುವ ವಿಶ್ವವಿಖ್ಯಾತ ಕುತುಬ್ ಮಿನಾರ್‌ನ ಎತ್ತರ 73 ಮೀಟರ್. ದಿಲ್ಲಿಯಲ್ಲೇ ಇರುವ ತ್ಯಾಜ್ಯದ ರಾಶಿಯ ಎತ್ತರ 45 ಮೀಟರ್‌ಗಿಂತಲೂ ಹೆಚ್ಚು. ಮುಂದೊಂದು ದಿನ ಇದು ಎತ್ತರದಲ್ಲಿ ಕುತುಬ್ ಮಿನಾರನ್ನೂ ಮೀರಿಸಿದರೆ ಅಚ್ಚರಿಯಿಲ್ಲ .

ಓಖ್ಲಾ, ಗಾಝಿಪುರ ಮತ್ತು ಭಲ್ಸ್ವಾ ಎಂಬಲ್ಲಿರುವ ಮೂರು ಸೈಟ್‌ಗಳ ಪಕ್ಕದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದ ರಾಶಿಯ ಕುರಿತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಎಂ.ಬಿ.ಲೋಕೂರ್ ಮತ್ತು ಆದರ್ಶ್ ಕುಮಾರ್ ಗೋಯೆಲ್ ಅವರನ್ನೊಳಗೊಂಡ ಪೀಠ ನೀಡಿದ ಹೇಳಿಕೆಯಿದು. ಈ ಬಗ್ಗೆ ಆಡಳಿತಾರೂಢ ಆಪ್ ಪಕ್ಷವನ್ನು ತರಾಟೆಗೆತ್ತಿಕೊಂಡ ಪೀಠ, ದಿಲ್ಲಿ ಸರಕಾರ ತ್ಯಾಜ್ಯ ನಿರ್ವಹಣೆಯನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಝಾಡಿಸಿದೆ. ದಿಲ್ಲಿಯ ಮುಖ್ಯಕಾರ್ಯದರ್ಶಿಯನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ರಂಜೀತ್ ಕುಮಾರ್ ತ್ಯಾಜ್ಯ ರಾಶಿಯ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದರು. ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಆಪ್ ಶಾಸಕರಿಗೆ ಸೂಚಿಸಿದ ಸುಪ್ರೀಂಕೋರ್ಟ್, ತ್ಯಾಜ್ಯ ರಾಶಿಯ ವಿಲೇವಾರಿ ಯಾರ ಹೊಣೆ ಎಂದು ಸರಕಾರವನ್ನು ಪ್ರಶ್ನಿಸಿದೆ. ದಿಲ್ಲಿ ಸರಕಾರದ ಪರ ವಕೀಲ ರಾಹುಲ್ ಮೆಹ್ತಾ ಉತ್ತರಿಸಿ, ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ ಮತ್ತಿತರ ಕಾರ್ಯಗಳು ಇರುವ ಕಾರಣ ತ್ಯಾಜ್ಯ ವಿಲೇವಾರಿ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ ಎಂದರು. ಹಾಗೆನ್ನಬೇಡಿ. ಈ ಕಾರ್ಯ ಮನೆಯಿಂದಲೇ ಆಗಬೇಕು. ನಿಮ್ಮ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದು ಅವರ ಜವಾಬ್ದಾರಿಯಲ್ಲ ಎನ್ನಬೇಡಿ ಎಂದು ಕೋರ್ಟ್‌ನ ಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News