ಗಿಲಾನಿ ಭೇಟಿಗೆ ಕುಟುಂಬವರ್ಗಕ್ಕೆ ಪ್ರತಿಬಂಧ; ಪುತ್ರನ ಬಂಧನ

Update: 2016-10-22 14:00 GMT

ಶ್ರೀನಗರ, ಅ.22: ಹುರಿಯತ್ ನಾಯಕ ಸಯ್ಯದ್ ಅಲಿಶಾ ಗಿಲಾನಿ ಅವರ ಪುತ್ರ, ಶ್ರೀನಗರದ ಸರಕಾರಿ ಆಸ್ಪತ್ರೆಯ ವೈದ್ಯ ಡಾ ನಯೀಂ ಗಿಲಾನಿ ಅವರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶ್ರೀನಗರದಲ್ಲಿರುವ ಹೈದರ್‌ಪುರದಲ್ಲಿರುವ ತನ್ನ ತಂದೆಯ ನಿವಾಸಕ್ಕೆ ತೆರಳುತ್ತಿದ್ದ ಸಂದರ್ಭ ಬೆಳಿಗ್ಗೆ 10 ಗಂಟೆಯ ವೇಳೆಗೆ ಅವರನ್ನು ಬಂಧಿಸಲಾಗಿದೆ. ಶನಿವಾರ ಮಧ್ಯಾಹ್ನ ಸೈಯದ್ ಅಲಿಶಾ ಗಿಲಾನಿ ಟೆಲಿಫೋನ್‌ನಲ್ಲಿ ‘ರಾಷ್ಟ್ರವನ್ನುದ್ದೇಶಿಸಿ ಭಾಷಣ’ ಮಾಡುವ ಕಾರ್ಯಕ್ರಮವಿತ್ತು. ಪೊಲೀಸರು ಗಿಲಾನಿಯ ಕುಟುಂಬ ಸದಸ್ಯರು, ಮಾಧ್ಯಮದವರು ಮತ್ತು ಸಂದರ್ಶಕರು ಮನೆಯೊಳಗೆ ಪ್ರವೇಶಿಸಿದಂತೆ ತಡೆದರು. ಫೋನ್ ಸಂಪರ್ಕ ಬ್ಲಾಕ್ ಮಾಡುವ ಉದ್ದೇಶದಿಂದ ಗಿಲಾನಿಯವರ ಮನೆಯಲ್ಲಿ ಜಾಮರ್‌ಗಳನ್ನು ಅಧಿಕಾರಿಗಳು ಅಳವಡಿಸಿದರು. ಜುಲೈ 8ರಂದು ಹಿಜ್‌ಬುಲ್ ಕಮಾಂಡರ್ ಬುರಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರತಿಭಟನೆಯ ನೇತೃತ್ವ ವಹಿಸಿರುವ ಗಿಲಾನಿಯನ್ನು ಗೃಹಬಂಧನದಲ್ಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News