ವಾಯು ಯಾನ ಕ್ಷೇತ್ರ ವಿಸ್ತರಣೆಗೆ ಸರಕಾರದಿಂದ ಅಭಿಯಾನ: ಮೋದಿ

Update: 2016-10-22 14:06 GMT

ವಡೋದರಾ, ಆ.22: ಹಿಂದಿನ ಸರಕಾರಕ್ಕೆ ವಾಯು ಯಾನದ ಕುರಿತು ದೂರ ದೃಷ್ಟಿಯಿರಲಿಲ್ಲ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ತನ್ನ ಸರಕಾರವು ಈ ವಲಯಕ್ಕಾಗಿ ಮೊದಲ ಸಮಗ್ರ ನೀತಿಯೊಂದಿಗೆ ಮುಂದೆ ಬಂದಿದೆ ಹಾಗೂ ಅದರ ವಿಸ್ತರಣೆಗಾಗಿ ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡವೊಂದನ್ನು ಲೋಕಾರ್ಪಣೆ ಮಾಡಿದ ಅವರು, ಭಾರತವು ಸದ್ಯೋಭವಿಷ್ಯದಲ್ಲಿ ವಿಮಾನ ನಿಲ್ದಾಣ ಚಟುವಟಿಕೆ ಬೆಂಚ್ ಮಾರ್ಕ್‌ನಲ್ಲಿ ವಿಶ್ವದಲ್ಲೇ ಮೂರನೆಯ ರಾಷ್ಟ್ರವಾಗುವ ಸಾಧ್ಯತೆಯಿದೆಯೆಂದು ತಿಳಿಸಿದರು.

ಕೇವಲ 80ರಿಂದ 100 ವಿಮಾನ ನಿಲ್ದಾಣಗಳು ಸಾಕೆಂದು ನೀವು ಭಾವಿಸಿದರೆ, ನಾವು ದೇಶದ ಪ್ರಗತಿಗೆ ಅಡಚಣೆ ಮಾಡಲು ಪ್ರಯತ್ನಿಸಿದಂತಾಗುತ್ತದೆಂದು ಮೋದಿ ಹೇಳಿದರು.

ಸಮಾನ ಸಾಮರ್ಥ್ಯದ ಟೈರ್-2 ಹಾಗೂ ಟೈರ್-3 ನಗರಗಳಿಗೆ ಗಮನ ನೀಡಿದಲ್ಲಿ ದೇಶದ ಅಭಿವೃದ್ಧಿ ಹೊಸ ಆಯಾಮ ಪಡೆಯಲು ಸಾಧ್ಯವಿದೆ ಎಂದ ಅವರು, ಸರಕಾರದ ಹೊಸ ಪ್ರಾದೇಶಿಕ ಸಂಪರ್ಕ ಯೋಜನೆಯ ವಿವರ ನೀಡಿದರು.

ಮೊದಲು ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗಿತ್ತು. ವಿಮಾನಗಳು ಹಾರುತ್ತಿದ್ದವು. ಆದರೆ, ದೇಶಕ್ಕೆ ಒಂದು ವಿಮಾನ ಯಾನ ನೀತಿಯೆಂಬುದಿರಲಿಲ್ಲವೆಂದು ಮೋದಿ, ಹಿಂದಿನ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News