×
Ad

ವಿಶ್ವಕಪ್‌ ಕಬಡ್ಡಿಯಲ್ಲಿ ಭಾರತ ಹ್ಯಾಟ್ರಿಕ್‌ ಚಾಂಪಿಯನ್‌

Update: 2016-10-22 21:21 IST

 * ಫೈನಲ್‌ನಲ್ಲಿ ಇರಾನ್‌ಗೆ ಮೂರನೆ ಬಾರಿ ಸೋಲು
 *ಅಜಯ್ ಠಾಕೂರ್ ಹೀರೊ

  ಅಹ್ಮದಾಬಾದ್, ಅ.22: ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತ ಇಂದು ಮೂರನೆ ಬಾರಿ ಪ್ರಶಸ್ತಿ ಜಯಿಸುವ ಮೂಲಕ ಹ್ಯಾಟ್ರಿಕ್ ಚಾಂಪಿಯನ್ ಆಗಿ ದಾಖಲೆ ಬರೆದಿದೆ.
 ಭಾರತ ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೂರನೆ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಇರಾನ್‌ನ್ನು 38-29 ಅಂಕಗಳಿಂದ ಮಣಿಸಿ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿತು.
ಅಜಯ್ ಠಾಕೂರ್ 12 ಅಂಕಗಳನ್ನು ಭಾರತದ ಖಾತೆಗೆ ಜಮೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
 ಪ್ರಥಮಾರ್ಧದಲ್ಲಿ ಇರಾನ್ ವಿರುದ್ಧ ಕಠಿಣ ಸವಾಲನ್ನು ಎದುರಿಸಿದ್ದ ಭಾರತ ದ್ವಿತೀಯಾರ್ಧದಲ್ಲಿ ಮೇಲುಗೈ ಸಾಧಿಸಿ ಇರಾನ್‌ಗೆ ಪ್ರಶಸ್ತಿ ನಿರಾಕರಿಸಿತು.
   ಫೈನಲ್ ಪಂದ್ಯ ಆರಂಭದಲ್ಲೇ ರೋಚಕತೆಯನ್ನು ಪಡೆದಿತ್ತು. ಆಟ ಆರಂಭಗೊಂಡ ಮೂರು ನಿಮಿಷಗಳಲ್ಲಿ ಭಾರತದ ಸಂದೀಪ್ ನರ್ವಾಲ್ ಮತ್ತು ಅಜಯ್ ಠಾಕೂರ್ ರೈಡ್ ಪಾಯಿಂಟ್ ದಾಖಲಿಸಿ 2-0 ಮುನ್ನಡೆ ಸಾಧಿಸಿತ್ತು. ಇರಾನ್‌ನ ಮೇರಾಜ್ ಶೇಕ್ ಅವರು ಮೊದಲ ಪಾಯಿಂಟ್ ದಾಖಲಿಸಿ 4ನೆ ನಿಮಿಷದಲ್ಲಿ 2-2 ಸಮಬಲ ಸಾಧಿಸಿದರು. ಎಂಟನೆ ನಿಮಿಷದಲ್ಲಿ ಇರಾನ್‌ನ ಹಿಡಿತ ಬಿಗಿ ಆಗಿತ್ತು. 5-4 ಅಂತರದಲ್ಲಿ ಮುನ್ನಡೆ ಪಡೆಯಿತು.
ಉಭಯ ತಂಡಗಳು ಪಟ್ಟು ಬಿಡದೆ ಹೋರಾಟ ನಡೆಸಿದವು.. ಆದರೆ 10ನೆ ನಿಮಿಷದಲ್ಲಿ ನಾಯಕ ಅನೂಪ್ ಕುಮಾರ್ ಬೋನಸ್ ಪಾಯಿಂಟ್ ದಾಖಲಿಸಿ 6-6 ಸಮಬಲ ಸಾಧಿಸಿದರು.
13ನೆ ನಿಮಿಷದಲ್ಲಿ ಮೇರಾಜ್ ಶೇಕ್ ರೈಡಿಂಗ್ ನಡೆಸಿ ಭಾರತದ ಆಟಗಾರರಿಗೆ ಶಾಕ್ ನೀಡಿದರು. 3 ಪಾಯಿಂಟ್ ಕಬಳಿಸಿ ಇರಾನ್‌ಗೆ 9-7 ಮುನ್ನಡೆಗೆ ನೆರವಾದರು.
  18ನೆ ನಿಮಿಷದಲ್ಲಿ ನಿತಿನ್ ಥಾಮರ್ ಮಿಂಚಿನ ರೈಡ್ ನಡೆಸಿ 2 ಪಾಯಿಂಟ್ ತಂಡದ ಖಾತಗೆ ಜಮೆ ಮಾಡಿದರು. ಆದರೆ ಭಾರತ 11-12 ಹಿನ್ನೆಡೆಯಲ್ಲಿತ್ತು. ಬಳಿಕ ಮೊದಲಾರ್ಧ ಕೊನೆಗೊಳ್ಳುವ ಹೊತ್ತಿಗೆ ಇರಾನ್ 18-13 ಮುನ್ನಡೆ ಸಾಧಿಸಿತು. 23ನೆ ನಿಮಿಷದಲ್ಲಿ ಇರಾನ್ ಮುನ್ನಡೆಯನ್ನು 19-13ಕ್ಕೆ ಏರಿಸಿತು. ಠಾಕೂರ್ 25ನೆ ನಿಮಿಷದಲ್ಲಿ 2 ಪಾಯಿಂಟ್ಸ್ ಗಳಿಸಿದರು. 28ನೆ ನಿಮಿಷದಲ್ಲಿ ಪ್ರದೀಪ್ ಕುಮಾರ್ ಔಟಾಗಿ ಇರಾನ್ ಖಾತೆಗೆ ಇನ್ನೊಂದು ಪಾಯಿಂಟ್ ಸೇರ್ಪಡೆಗೊಂಡಿತು. 29ನೆ ನಿಮಿಷದಲ್ಲಿ ಅಜಯ್ ಠಾಕೂರ್ 9ನೆ ಪಾಯಿಂಟ್ ದಾಖಲಿಸಿದರು. ಉಭಯ ತಂಡಗಳು 20-20 ಸಮಬಲ ಸಾಧಿಸಿತು. 30ನೆ ನಿಮಿಷದಲ್ಲಿ ಭಾರತ 24-21 ಮುನ್ನಡೆ ಪಡೆಯಿತು.
 ಅಜಯ್ ಠಾಕೂರ್ ಮೇರಾಜ್ ಶೇಕ್‌ನ್ನು ಬೆಂಚ್‌ಗೆ ಕಳುಹಿಸಿ ತನ್ನ ವೈಯಕ್ತಿಕ ಪಾಯಿಂಟ್‌ಗಳ ಸಂಖ್ಯೆಯನ್ನು 10ಕ್ಕೆ ಏರಿಸಿದರು. ಭಾರತ ಇದರೊಂದಿಗೆ 26-21 ಮೇಲುಗೈ ಸಾಧಿಸಿತು. ನಿತಿನ್ 34ನೆ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು 29-22ಕ್ಕೆ ಏರಿಸಿದರು. 35ನೆ ನಿಮಿಷದಲ್ಲಿ ಇರಾನ್ 24-29 ಸ್ಥಿತಿಗೆ ತಲುಪಿತು.37ನೆ ನಿಮಿಷದಲ್ಲಿ ಠಾಕೂರ್ 2 ಪಾಯಿಂಟ್‌ಗಳನ್ನು ಕಲೆ ಹಾಕಿದರು. ಭಾರತದ ಮುನ್ನಡೆ 34-24.
 28ನೆ ನಿಮಿಷದಲ್ಲಿ ಮೇರಾಜ್ 2 ಪಾಯಿಂಟ್ಸ್‌ಗಳನ್ನು ಗಳಿಸಿದರು. ಇರಾನ್ ಸ್ಕೋರ್ 27-34ಕ್ಕೆ ಏರಿತು. ಸುರ್ಜಿತ್ 39ನೆ ನಿಮಿಷದಲ್ಲಿ ಇರಾನ್‌ಗೆ ಹೊಡೆತ ನೀಡಿದರು. ಭಾರತದ ಮುನ್ನಡೆ 35-27ಕ್ಕೆ ಏರಿತು. ಕೊನೆಯಲ್ಲಿ ಭಾರತ 38-29 ಮುನ್ನಡೆಯೊಂದಿಗೆ ಮೂರನೆ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತು.
 ಮೂರನೆ ಬಾರಿ ಫೈನಲ್ ಪ್ರವೇಶಿಸಿದ್ದ ಇರಾನ್ ತಂಡ ಚಾಂಪಿಯನ್ ಭಾರತಕ್ಕೆ ಸೋಲುಣಿಸಿ ಪ್ರಶಸ್ತಿ ಎತ್ತುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿತ್ತು. ಭಾರದ ವಿರುದ್ಧ ಕಠಿಣ ಹೋರಾಟ ನೀಡಿದ ಇರಾನ್ ಕೊನೆಗೂ 9 ಅಂಕಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.
ಭಾರತ ಮೊದಲ ಬಾರಿ 2004ರಲ್ಲಿ ಚಾಂಪಿಯನ್ ಆಗಿತ್ತು. ಬಳಿಕ 2007 ಮತ್ತು 2016ರಲ್ಲಿ ನಡೆದ ವಿಶ್ವಕಪ್ ಕೂಟದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
     ಹಾಲಿ ಚಾಂಪಿಯನ್ ಭಾರತ ಕಬಡ್ಡಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಶನಿವಾರ ಥಾಯ್ಲೆಂಡ್ ವಿರುದ್ಧ 53 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಮೂರನೆ ಬಾರಿ ಫೈನಲ್ ತಲುಪಿತ್ತು.
ಐದು ಪಂದ್ಯಗಳಲ್ಲಿ ಜಯಿಸಿ ಅಜೇಯವಾಗಿ ಸೆಮಿಫೈನಲ್ ತಲುಪಿದ್ದ ದಕ್ಷಿಣ ಕೊರಿಯಾವನ್ನು ಇರಾನ್ ಮಣಿಸಿ ಫೈನಲ್ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News