ವಿಶ್ವ ವೈದ್ಯಕೀಯ ಸಂಘಟನೆ ಅಧ್ಯಕ್ಷರಾಗಿ ಕೇತನ್ ದೇಸಾಯಿ ಆಯ್ಕೆ
Update: 2016-10-22 23:45 IST
ಹೊಸದಿಲ್ಲಿ, ಅ.22: ಭಾರತೀಯ ವೈದ್ಯಕೀಯ ಸಮಿತಿ (ಎಂಸಿಐ) ಯ ಮಾಜಿ ಅಧ್ಯಕ್ಷ ಕೇತನ್ ದೇಸಾಯಿ ಅವರನ್ನು ವಿಶ್ವ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಭ್ರಷ್ಟಾಚಾರ ನಡೆಸಿದ ಆರೋಪ ಇವರ ಮೇಲಿದೆ. ಈ ಮಧ್ಯೆ ಈ ಅನಾಚಾರವನ್ನು ತಕ್ಷಣ ತಡೆಯುವಂತೆ ‘ಪೀಪಲ್ ಫಾರ್ ಬೆಟರ್ ಟ್ರೀಟ್‌ಮೆಂಟ್’ (ಪಿಬಿಟಿ) ಸಂಸ್ಥೆಯ ಅಧ್ಯಕ್ಷ ಕುಣಾಲ್ ಶಾಹ್ ಎಂಸಿಐ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋರ್ಟ್ ನೋಟಿಸ್ ಕಳುಹಿಸಿದ್ದಾರೆ. ಭಾರತೀಯ ಅಧಿಕಾರಿಗಳು ಒಂದು ವಾರದೊಳಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಸಾಹ ತಿಳಿಸಿದ್ದಾರೆ. ಭಾರತೀಯ ಮೂಲದವರಾದ ಸಾಹ ಅಮೆರಿಕದಲ್ಲಿ ಸ್ವಯಂಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು , ವೈದ್ಯಕೀಯ ರಂಗದ ಭ್ರಷ್ಟಾಚಾರ ಮತ್ತು ಲಂಚಾವತಾರವನ್ನು ಬಯಲಿಗೆಳೆಯುವ ಕೆಲಸವನ್ನು ತನ್ನ ಸಂಸ್ಥೆಯ ಮೂಲಕ ಮಾಡುತ್ತಿದ್ದಾರೆ.