×
Ad

ಮತ್ತೆ ವಿವಾದದ ಸುತ್ತ ಜೆಎನ್‌ಯು

Update: 2016-10-22 23:47 IST

ಹೊಸದಿಲ್ಲಿ, ಅ.22: ಸುಮಾರು 30 ಮಂದಿ ವಿದ್ಯಾರ್ಥಿಗಳಿದ್ದ ತಂಡವೊಂದು ನಜೀಬ್‌ನನ್ನು ಸುತ್ತುವರಿದು ಥಳಿಸುತ್ತಿತ್ತು. ಜಾತಿ ನಿಂದನೆ ಮಾಡುತ್ತಾ ನಿಂದಿಸುತ್ತಿದ್ದ ಆ ಗುಂಪಿನಲ್ಲಿದ್ದ ಕೆಲವರು, ಈತನನ್ನು 72 ಕನ್ಯೆಯರ ಬಳಿ ಕಳಿಸುತ್ತೇವೆ ಎಂದು ಹಂಗಿಸುತ್ತಿದ್ದರು... ಇದು ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್‌ನನ್ನು ಥಳಿಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ಎಂಫಿಲ್ ವಿದ್ಯಾರ್ಥಿ ಶಾಹಿದ್ ರಝಾ ಖಾನ್ ಎಂಬಾತನ ಹೇಳಿಕೆ.

   
 
  

 ಆ ರಾತ್ರಿ ಏನೋ ಶಬ್ದ ಕೇಳಿ ತಾನು ಪ್ರಥಮ ಮಹಡಿಗೆ ಇಳಿದು ಬಂದೆ. ಅಲ್ಲಿ ನಜೀಬ್ ತೀವ್ರ ಹಲ್ಲೆಗೊಳಗಾದ ಸ್ಥಿತಿಯಲ್ಲಿದ್ದ. ಆತನ ಮುಖ, ಮೂಗಿನಲ್ಲಿ ರಕ್ತ ಒಸರುತ್ತಿತ್ತು. ವಾರ್ಡನ್‌ರನ್ನು ಕರೆದು ನಜೀಬ್‌ನನ್ನು ಬಾತ್‌ರೂಂಗೆ ಕರೆದುಕೊಂಡು ಹೋಗುವಂತೆ ತಿಳಿಸಿದೆ. ಆದರೆ ಅಷ್ಟರಲ್ಲೇ ಧಾವಿಸಿ ಬಂದ 25ರಿಂದ 30ರಷ್ಟು ವಿದ್ಯಾರ್ಥಿಗಳು ಬಾತ್‌ರೂಂನಲ್ಲೇ ನಜೀಬ್‌ನನ್ನು ಥಳಿಸಲಾರಂಭಿಸಿದರು . ವಾರ್ಡನ್‌ರ ಕಚೇರಿಗೆ ಕರೆತರುವ ಹಾದಿಯಲ್ಲೂ ನಜೀಬ್ ಮೇಲೆ ಹಲ್ಲೆ ನಡೆಸಲಾಗಿದೆ. ಮೇಲಿನ ಮಹಡಿಯಲ್ಲಿದ್ದ ಒಬ್ಬರು ಲೈಟ್ ಆರಿಸಿಬಿಟ್ಟರು. ಕತ್ತಲಿನಲ್ಲೂ ಥಳಿತ ನಿಲ್ಲಲಿಲ್ಲ. ಆತನಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಬಳಿಕ ಲೈಟ್ ಹಾಕಿದಾಗಲೂ ಆತನಿಗೆ ಥಳಿಸುತ್ತಲೇ ಇದ್ದರು. ದೈಹಿಕ ಚಿತ್ರಹಿಂಸೆಯ ಜೊತೆಗೆ ಅಸಭ್ಯ ಪದಗಳಲ್ಲಿ ಜಾತಿ ನಿಂದನೆ ನಡೆಯುತ್ತಿತ್ತು. ವಾರ್ಡನ್ ನಿಷ್ಪಕ್ಷಪಾತ ರೀತಿಯಲ್ಲಿ ವರ್ತಿಸಲಿಲ್ಲ. ಅವರ ಕಚೇರಿಯೊಳಗೆ ನಡೆದ ವಿಚಾರಣೆಯಲ್ಲಿ ನಜೀಬ್‌ನ ಮೇಲೆಯೇ ತಪ್ಪು ಹೊರಿಸಲಾಯಿತು. ಅಲ್ಲೂ ಆತನನ್ನು ನಿಂದಿಸಲಾಯಿತು. ಅಲ್ಲಿ ಕೆಲವರು ಈತನನ್ನು 72 ಕನ್ಯೆಯರ ಬಳಿ ಕಳಿಸುತ್ತೇವೆ ಎಂದು ಹಂಗಿಸುತ್ತಿದ್ದರು... ಇದರ ಅರ್ಥ ನಿಮಗೆ ಗೊತ್ತಿರಬೇಕು ಎಂದು ಘಟನೆಯ ಬಗ್ಗೆ ವಿವರಿಸುತ್ತಾನೆ ಶಹೀದ್. ಮೆಸ್‌ನ ಕಾರ್ಯದರ್ಶಿ ಸ್ಥಾನಕ್ಕೆ ನಡೆಯುವ ಚುನಾವಣೆಯ ಪ್ರಚಾರಕ್ಕೆಂದು ಎಬಿವಿಪಿ ಕಾರ್ಯಕರ್ತ ವಿಕ್ರಾಂತ್ ನಜೀಬ್‌ನ ಕೋಣೆಗೆ ಹೋಗಿದ್ದ. ಅಲ್ಲಿ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ವಿಕ್ರಾಂತ್ ಕೈಯಲ್ಲಿ ಹಾಕಿಕೊಂಡಿದ್ದ ಕೇಸರಿ ದಾರವನ್ನು ಕಂಡು ನಜೀಬ್ ಜಗಳಕ್ಕೆ ಇಳಿದಿದ್ದ ಎಂಬುದು ಎಬಿವಿಪಿ ವಿದ್ಯಾರ್ಥಿಗಳ ಹೇಳಿಕೆ. ನಜೀಬ್ ಜಾಮಿಯಾ ಮಿಲಿಯಾ ವಿವಿಗೆ ಪ್ರವೇಶ ಪತ್ರ ಪಡೆದಿದ್ದರೂ ಆತ ಜೆಎನ್‌ಯು ವಿವಿಯಲ್ಲಿ ಶಿಕ್ಷಣ ಮುಂದು ವರಿಸಲು ನಿರ್ಧರಿಸಿದ್ದ. ಕೇವಲ 15 ದಿನಗಳ ಹಿಂದೆಯಷ್ಟೇ ಹಾಸ್ಟೆಲ್‌ಗೆ ಸೇರಿದ್ದ. ಆತ ಅಲ್ಲಿ ಜಗಳವಾಡುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ನಜೀಬ್‌ನ ಸೋದರ ಮುಜೀಬ್. ನಜೀಬ್ ನಾಪತ್ತೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ, ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News