ಹುತಾತ್ಮ ಯೋಧನ ಹೆಸರಲ್ಲಿ ಆಸ್ಪತ್ರೆ ಕಟ್ಟಿಸುವಂತೆ ಸರಕಾರಕ್ಕೆ ಕುಟುಂಬದ ಆಗ್ರಹ..!

Update: 2016-10-23 07:38 GMT

ಹೊಸದಿಲ್ಲಿ, ಅ.23: ಹುತಾತ್ಮ  ಬಿಎಸ್ಎಫ್ ಯೋಧ ಗುರ್ನಾಮ್ ಸಿಂಗ್‌ ಹೆಸರಲ್ಲಿ ಆಸ್ಪತ್ರೆ ಕಟ್ಟಿಸುವಂತೆ ಅವರ ಕುಟುಂಬ ಇಂದು ಸರಕಾರವನ್ನು ಆಗ್ರಹಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಗಡಿಯಲ್ಲಿ ಶುಕ್ರವಾರ ಪಾಕ್  ಸೈನಿಕರ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಬಿಎಸ್ಎಫ್ ಯೋಧ ಗುರ್ನಾಮ್ ಸಿಂಗ್ (26) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ  ರಾತ್ರಿ ಮೃತಪಟ್ಟಿದ್ದರು.
ಮಗ ಗುರ್ನಾಮ್ ಸಿಂಗ್‌ ಸಾವಿನ ಹಿನ್ನೆಲೆಯಲ್ಲಿ  ಪ್ರತಿಕ್ರಿಯೆ ನೀಡಿರುವ ತಂದೆ ಕುಲ್ಬೀರ್‌ ಸಿಂಗ್‌ " ಅವನು ಧೈರ್ಯವಂತ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ. ಇದಕ್ಕಾಗಿ ಯಾರೂ ದುಃಖಪಡಬೇಕಿಲ್ಲ... ದೇಶಕ್ಕಾಗಿ ಆತನ ಬಲಿದಾನ ಸಂತಸ ತಂದಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅ.20ರಂದು  ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಗಡಿಯಲ್ಲಿ  ಗುರ್ನಾಮ್ ಸಿಂಗ್ ಕರ್ತವ್ಯನಿರ್ವಹಿಸುತ್ತಿದ್ದ ವೇಳೆ ಪಾಕಿಸ್ತಾನ ಸೈನಿಕರು ಭಾರತದ  ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದರು. ಇದರಿಂದಾಗಿ ಗುರ್ನಾಮ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು.ಅವರ ತಲೆಗೆ ಗುಂಡು ತಗುಲಿತ್ತು.

ಪಾಕಿಸ್ತಾನ ಸೇನೆಯ ದಾಳಿಗೆ ಭಾರತದ  ಸೇನೆ ಪ್ರತಿದಾಳಿ ನಡೆಸಿ ಪಾಕಿಸ್ತಾನದ ಓರ್ವ ಉಗ್ರ ಸೇರಿದಂತೆ 7 ಸೈನಿಕರನ್ನು ಕೊಂದಿದ್ದರು.
" ಅಮ್ಮಾ ನಾನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರೆ ನೀನು ದುಃಖಪಡಬೇಕಿಲ್ಲ ಎಂದು ಮಗ ಗುರ್ನಾಮ್ ಸಿಂಗ್   ಹೇಳಿದ್ದ. ಈ ಕಾರಣದಿಂದಾಗಿ ನಾನು ಅಳುವುದಿಲ್ಲ.ಆದರೆ ಮೋದಿ ಸರಕಾರಕ್ಕೆ ನಾವು ಮಾಡುವ ಮನವಿ ಏನೆಂದರೆ ಸರಕಾರ ಬಿಎಸ್‌ಎಫ್‌ ಯೋಧರಿಗಾಗಿ ಪ್ರತ್ಯೇಕ  ಆಸ್ಪತ್ರೆ ಕಟ್ಟಿಸಲಿ.ಯೋಧರಿಗೆ ಪ್ರತ್ಯೇಕ ಆಸ್ಪತ್ರೆ ಇರುತ್ತಿದ್ದರೆ ಮಗ ಜೀವಂತವಾಗಿರುತ್ತಿದ್ದ. ದೇಶ ಕಾಯುವ ಯೋಧರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು” ಎಂದು ಹುತಾತ್ಮ ಯೋಧ ಗುರ್ನಾಮ್‌ ಸಿಂಗ್‌ ತಾಯಿ ಜಸ್ವಂತ್ ಕೌರ್‌ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News