×
Ad

ಸೈರಸ್ ಮಿಸ್ತ್ರಿ ರಾಜೀನಾಮೆ, ಟಾಟಾ ಗ್ರೂಪ್ ಗೆ ಮತ್ತೆ ರತನ್ ಟಾಟಾ ಅಧ್ಯಕ್ಷ

Update: 2016-10-24 18:07 IST

ಮುಂಬೈ,ಅ.24: ಟಾಟಾ ಸಮೂಹದ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು, ಟಾಟಾ ಸನ್ಸ್‌ನ ಆಡಳಿತ ಮಂಡಳಿಯು ಸಮೂಹದ ಮಧ್ಯಂತರ ಅಧ್ಯಕ್ಷರನ್ನಾಗಿ ರತನ್ ಟಾಟಾ ಅವರನ್ನು ನೇಮಕಗೊಳಿಸಿದೆ. ಇದು ಕಾರ್ಪೊರೇಟ್ ಕ್ಷೇತ್ರದಲ್ಲಿನ ಅತ್ಯಂತ ದೊಡ್ಡ ಮತ್ತು ಮಹತ್ವದ ಬದಲಾವಣೆಯೆಂದು ಬಣ್ಣಿಸಲಾಗಿದೆ.

 ಇಂದಿಲ್ಲಿ ಸಭೆ ಸೇರಿದ ಟಾಟಾ ಸನ್ಸ್‌ನ ಆಡಳಿತ ಮಂಡಳಿಯು ಈ ನಿರ್ಧಾರವನ್ನು ಕೈಗೊಂಡಿತಲ್ಲದೆ, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಮಿತಿಯೊಂದನ್ನು ರಚಿಸಿತು. ರತನ್ ಟಾಟಾ,ವೇಣು ಶ್ರೀನಿವಾಸನ್,ಅಮಿತ್ ಚಂದ್ರ,ರೊನೆನ್ ಸೇನ್ ಮತ್ತು ಲಾರ್ಡ್ ಕುಮಾರ್ ಭಟ್ಟಾಚಾರ್ಯ ಅವರು ಈ ಸಮಿತಿಯಲ್ಲಿದ್ದಾರೆ. ನಾಲ್ಕು ತಿಂಗಳೊಳಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ರತನ್ ಟಾಟಾ ಅವರು 1991ರಿಂದ 2012,ಡಿ.28ರಂದು ತನ್ನ ನಿವೃತ್ತಿಯವರೆಗೂ ಟಾಟಾ ಸಮೂಹದ ಅಧ್ಯಕ್ಷರಾಗಿದ್ದರು. ಅವರು ಪ್ರಮುಖ ಟಾಟಾ ಕಂಪನಿಗಳಾದ ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಟಿಸಿಎಸ್,ಟಾಟಾ ಪವರ್, ಟಾಟಾ ಗ್ಲೋಬಲ್ ಬಿವರೇಜಿಸ್,ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿಸರ್ವಿಸಿಸ್‌ನ ಅಧ್ಯಕ್ಷರೂ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ ಟಾಟಾ ಸಮೂಹದ ಆದಾಯ ಹಲವಾರು ಪಟ್ಟು ಹೆಚ್ಚಳಗೊಂಡು, 2011-12ರಲ್ಲಿ 100 ಶತಕೋಟಿ ಡಾಲರ್‌ಗಳನ್ನು ದಾಟಿತ್ತು.

ರತನ್ ಟಾಟಾರ ನಿವೃತ್ತಿಯ ಬಳಿಕ 2012,ಡಿಸೆಂಬರ್‌ನಲ್ಲಿ ಸೈರಸ್ ಮಿಸ್ತ್ರಿ ಅವರು ಸಮೂಹದ ಆರನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು 2006ರಿಂದಲೂ ಕಂಪನಿಯ ನಿರ್ದೇಶಕರಾಗಿದ್ದರು. ಅವರು ಹಿಂದೆ ಶಾಪೂರ್ಜಿ ಪಲ್ಲೋಂಜಿ ಸಮೂಹದ ನಿರ್ದೇಶಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News