×
Ad

ಉತ್ತರ ಪ್ರದೇಶ: ಕದಡಿದ ನೀರು

Update: 2016-10-24 23:34 IST

ಮುಂದಿನ ಮಾರ್ಚ್ ತಿಂಗಳ ಹೊತ್ತಿನಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿರುವ ಸಮಾಜವಾದಿ ಪಕ್ಷ, ಅದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸುತ್ತಿರುವುದು ಮಾಧ್ಯಮಗಳಲ್ಲಿ ದಿನನಿತ್ಯ ಚರ್ಚೆಯ ವಿಷಯವಾಗಿ ಬಿಟ್ಟಿದೆ. ಯಾರು ಯಾರನ್ನು ವಜಾ ಮಾಡುತ್ತಿದ್ದಾರೆ ಎನ್ನುವುದು ಸ್ವತಃ ಕಾರ್ಯಕರ್ತರಿಗೂ ಸ್ಪಷ್ಟವಾಗುತ್ತಿಲ್ಲ. ಒಟ್ಟಿನಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಪುತ್ರ ಅಖಿಲೇಶ್ ಸಿಂಗ್ ಯಾದವ್ ನಡುವಿನ ತಿಕ್ಕಾಟ, ದಶಕದ ಹಿಂದೆ ದೇವೇಗೌಡರು ಮತ್ತು ಕುಮಾರಸ್ವಾಮಿಯ ನಡುವೆ ನಡೆದ ತಿಕ್ಕಾಟಗಳನ್ನು ನೆನಪಿಸುತ್ತಿದೆ. ಆದರೆ ಅಂದಿನ ಗೌಡರ ಮಕ್ಕಳ ಜಗಳ ಅಧಿಕಾರ ಹಿಡಿಯುವುದಕ್ಕಾಗಿ ನಡೆಸಿದ ಒಂದು ರಾಜಕೀಯ ಪ್ರಹಸನವಾಗಿತ್ತು. ಆದರೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಕೈಯಲ್ಲಿರುವ ಅಧಿಕಾರವನ್ನು ಹಂಚಿಕೊಳ್ಳುವ ವಿಷಯದಲ್ಲಿ. ಇಂದು ಸಮಾಜವಾದಿ ಪಕ್ಷ ಅಮರ್ ಸಿಂಗ್ ಎನ್ನುವ ತಕ್ಕಡಿಯ ಮುಳ್ಳಿನ ನಡುವೆ ಏಳು ಬೀಳುಗಳ ಹಂತದಲ್ಲಿದೆ. ಸಮಾಜವಾದಿ ಪಕ್ಷದಲ್ಲಿ ಕಳೆದುಕೊಂಡ ಹಿಡಿತವನ್ನು ಅಮರ್ ಸಿಂಗ್ ಮತ್ತೆ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಮುಲಾಯಂ ಸಿಂಗ್ ಅವರನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಈ ದಿಗ್ಗಜಗಳಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಆದರೆ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿ ಹಲವೆಡೆ ಸೋತಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಅಖಿಲೇಶ್ ಆಡಳಿತದಲ್ಲಿ ದಲಿತರ ಮೇಲೆ, ಮುಸ್ಲಿಮರ ಮೇಲೆ ತೀವ್ರತರವಾದ ಹಲ್ಲೆಗಳು ನಡೆಯುತ್ತಿವೆ. ಸಂಘಪರಿವಾರ ತನ್ನ ಕೋಮುದ್ವೇಷ ಚಟುವಟಿಕೆಗಳನ್ನು ಉತ್ತರಪ್ರದೇಶಾದ್ಯಂತ ವಿಸ್ತರಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಸಂದರ್ಭದಲ್ಲೇ ಅಖಿಲೇಶ್ ವಿರುದ್ಧ ಅವರ ತಂದೆಯನ್ನೇ ಬಳಸಿಕೊಂಡು ಭಿನ್ನಮತೀಯರು ತಿರುಗಿ ಬಿದ್ದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಕುಟುಂಬ ಕಲಹವೆಂಬಂತೆ ಭಾಸವಾಗುತ್ತಿದೆಯಾದರೂ, ಅದರಾಚೆಗೆ ಎಸ್ಪಿಯ ಮುಂದಿನ ನಾಯಕತ್ವಕ್ಕಾಗಿ ತಿಕ್ಕಾಟಗಳು ನಡೆಯುತ್ತಿವೆ. ಮುಲಾಯಂ ಸದ್ಯದ ಸ್ಥಿತಿಯಲ್ಲಿ ಅಸಹಾಯಕರಂತೆ ಕಂಡು ಬರುತ್ತಿದ್ದಾರೆ ಮತ್ತು ಅಮರ್ ಸಿಂಗ್ ಅವರ ರಾಜಕೀಯ ಚದುರಂಗದಾಟಕ್ಕೆ ತಲೆದೂಗುತ್ತಿದ್ದಾರೆ. ಅಖಿಲೇಶ್ ಅವರ ಆಡಳಿತ ವೈಫಲ್ಯ ಮುಲಾಯಂ ಅವರೊಳಗೆ ಉಂಟು ಮಾಡಿರುವ ಹತಾಶೆಯೂ ಇದಕ್ಕೆ ಕಾರಣವಾಗಿರಬಹುದು. ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟು ಅಧಿಕಾರವನ್ನು ಅಖಿಲೇಶ್‌ಗೆ ವರ್ಗಾಯಿಸಿದ್ದ ಮುಲಾಯಂ ಇದೀಗ ಸಮಾಜವಾದಿ ಪಕ್ಷವೇ ತನ್ನ ಕೈ ತಪ್ಪಿ ಹೋಗಬಹುದಾದ ಆತಂಕದಲ್ಲಿದ್ದಾರೆ. ಸಮಾಜವಾದಿ ಪಕ್ಷ ಭರ್ಜರಿಯಾಗಿ ಅಧಿಕಾರ ಹಿಡಿದಾಗ, ಎಲ್ಲರ ಕಣ್ಣು ಹೊಸ ತರುಣ ಅಖಿಲೇಶ್ ಮೇಲೆ ಇತ್ತು. ಇದೀಗ ಅವರ ವೈಫಲ್ಯ ಕಣ್ಣಿಗೆ ರಾಚುವಂತಿರುವುದರಿಂದ, ಹೊಸ ಮುಖವೊಂದನ್ನಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸುವುದು ಮುಲಾಯಂ ಸಿಂಗ್ ಯೋಜನೆ. ಆದರೆ ಉತ್ತರ ಪ್ರದೇಶದ ಸದ್ಯದ ಸ್ಥಿತಿ ನೋಡಿದರೆ ಯಾವ ಯೋಜನೆಯೂ ಫಲಿಸುವ ಸಾಧ್ಯತೆಗಳು ಕಾಣುತ್ತಿಲ್ಲ.

ಕಳೆದ ಚುನಾವಣೆಯಲ್ಲಿ ಎಸ್ಪಿಯನ್ನು ಸಂಪೂರ್ಣ ಬೆಂಬಲಿಸಿದ್ದ ಮುಸ್ಲಿಮರು ಸರ್ವ ರೀತಿಯಲ್ಲೂ ಭ್ರಮನಿರಸನಗೊಂಡಿದ್ದಾರೆ. ಸಂಘಪರಿವಾರ ಹೇಗಾದರೂ ಮಾಡಿ ಉತ್ತರಪ್ರದೇಶದಲ್ಲಿ ತಲೆಯೆತ್ತಲು ಹವಣಿಸುತ್ತಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಬೇರೆಯೇ ರೀತಿಯಾಗಿರುವ ಕಾರ್ಯಯೋಜನೆಯನ್ನು ರೂಪಿಸಿದೆ. ದಿಲ್ಲಿಯಲ್ಲಿ ಕಾಂಗ್ರೆಸನ್ನು ನಾಶಮಾಡುವಲ್ಲಿ ಯಶಸ್ವಿಯಾಗಿರುವ ಶೀಲಾದೀಕ್ಷಿತ್‌ರನ್ನು ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಕಣಕ್ಕಿಳಿಸಿದೆ. ಬಹುಶಃ ಉತ್ತರಪ್ರದೇಶದಲ್ಲಿ ಕಳೆದುಕೊಳ್ಳುವಂತಹದ್ದು ಏನೂ ಇಲ್ಲದೇ ಇರುವುದರಿಂದ ಪಕ್ಷದ ವರಿಷ್ಠರು ಅವರನ್ನು ಮುಂದಿಟ್ಟು ಬಾವಿಯ ಆಳ ನೋಡಲು ಹೊರಟಿರಬಹುದು. ಈ ಹಿಂದೆ ಮಾಯಾವತಿಯವರು ಬಹುಜನಪಕ್ಷವನ್ನು ‘ಸರ್ವಜನಪಕ್ಷ’ ಎಂದು ಘೋಷಿಸಿ ಬ್ರಾಹ್ಮಣರ ಮತಗಳನ್ನು ಸೆಳೆದು ಮುಖ್ಯಮಂತ್ರಿಯಾದುದನ್ನು ಮುಂದಿಟ್ಟು ಕಾಂಗ್ರೆಸ್ ಶೀಲಾದೀಕ್ಷಿತ್‌ರನ್ನು ಉತ್ತರಪ್ರದೇಶದಲ್ಲಿ ತನ್ನ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿರಬಹುದು. ಬ್ರಾಹ್ಮಣ ಮತಗಳು ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ತನಗೆ ಬಿದ್ದರೆ, ಒಂದಿಷ್ಟು ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳುವ ಮತ್ತು ಈ ಮೂಲಕ ಬಿಜೆಪಿಯ ಮತಗಳನ್ನೂ ಸೆಳೆಯುವ ಉದ್ದೇಶ ಅದರ ಜೊತೆಗಿರಬಹುದು.

ಆದರೆ ಸದ್ಯದ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಬಿಕ್ಕಟ್ಟಿನ ಎಲ್ಲ ಲಾಭಗಳನ್ನು ಬಹುಜನ ಸಮಾಜವಾದಿ ಪಕ್ಷ ತನ್ನದಾಗಿಸಿಕೊಳ್ಳುವ ಸಾಧ್ಯತೆಗಳು ಕಾಣುತ್ತವೆ. ಸರ್ವಜನರ ಸಹವಾಸದಿಂದ ಬೇಸತ್ತು, ಮತ್ತೆ ಬಹುಜನರ ಕಡೆಗೆ ವಾಲಿರುವ ಮಾಯಾವತಿಯ ಕಡೆಗೆ ಉತ್ತರ ಪ್ರದೇಶ ವಾಲುವ ಸಾಧ್ಯತೆಗಳೆಲ್ಲ ಕಾಣುತ್ತಿವೆ. ಸಮಾಜವಾದಿ ಪಕ್ಷದ ಜಾತ್ಯತೀತ ಮತಗಳನ್ನೂ ಈ ಬಾರಿ ಮಾಯಾವತಿಯೇ ತನ್ನದಾಗಿಸಲಿದ್ದಾರೆ. ಶೀಲಾಧೀಕ್ಷಿತ್‌ರ ನಾಯಕತ್ವದಿಂದ ಕಾಂಗ್ರೆಸ್ ಕಳೆದುಕೊಳ್ಳುವುದೇ ಹೆಚ್ಚು. ಅಖಿಲೇಶ್ ಆಡಳಿತಾವಧಿಯಲ್ಲಿ ಸಂಘಪರಿವಾರದಿಂದ ತಮಗಾದ ಅನ್ಯಾಯಗಳನ್ನೆಲ್ಲ ಮಾಯಾವತಿಗೆ ಮತ ಹಾಕುವ ಮೂಲಕ ಮುಸ್ಲಿಮರು ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳು ಕಾಣುತ್ತವೆ. ಆರೆಸ್ಸೆಸ್‌ಗೂ ಈ ಬಾರಿ ಉತ್ತರ ಪ್ರದೇಶದ ಮೇಲೆ ಹಿಡಿತ ಸಾಧಿಸಲೇ ಬೇಕಾಗಿದೆ. ಮೋದಿ ಪ್ರಧಾನಿಯಾಗಿರುವ ಈ ಸಂದರ್ಭದಲ್ಲೇ ಉತ್ತರಪ್ರದೇಶದ ಚುಕ್ಕಾಣಿಯೂ ಕೈಗೆ ಸಿಕ್ಕಿದರೆ ಅದರ ಹಲವು ಅಜೆಂಡಾಗಳನ್ನು ಜಾರಿಗೆ ತರಲು ದಾರಿ ಇನ್ನಷ್ಟು ಸುಗಮವಾಗಲಿದೆ. ಅದಕ್ಕಾಗಿಯೇ ಕೋಮುಗಲಭೆಗಳ ಮೂಲಕ, ವದಂತಿಗಳ ಮೂಲಕ ತನ್ನ ಪ್ರಯತ್ನವನ್ನು ಅದು ಮುಂದುವರಿಸುತ್ತಲೇ ಇದೆ.

ಸಂಘಪರಿವಾರದ ಈ ಕೃತ್ಯಗಳೆಲ್ಲ ಮುಸ್ಲಿಮರಲ್ಲಿ ರಾಜಕೀಯ ಜಾಗೃತಿಯೊಂದನ್ನು ಬಿತ್ತಿದರೆ ಅದರ ಲಾಭ ಬಿಎಸ್ಪಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ, ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ಉಲ್ಬಣಗೊಂಡರೂ, ಶಮನವಾದರೂ ಭವಿಷ್ಯದಲ್ಲಿ ಅದು ಅಧಿಕಾರ ಹಿಡಿಯುವ ಯಾವ ಲಕ್ಷಣಗಳೂ ಇಲ್ಲ. ಒಟ್ಟಿನಲ್ಲಿ, ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿ, ಉತ್ತರಪ್ರದೇಶದಲ್ಲಿ ತಕ್ಕ ಮಟ್ಟಿಗೆ ಜಾತ್ಯತೀತತೆ ಉಸಿರಾಡುವುದಕ್ಕೆ ಕಾರಣವಾಗಿದ್ದ ಮುಲಾಯಂ ಸಿಂಗ್‌ರ ಯುಗ ಅಂತ್ಯವಾಗುವ ಸೂಚನೆಗಳು ಕಾಣುತ್ತಿವೆ. ಬಿಕ್ಕಟ್ಟು ಹೀಗೆ ಮುಂದುವರಿದರೆ ಎಸ್ಪಿ ಇಬ್ಭಾಗವಾಗಲಿದೆ. ಮುಲಾಯಂ ಅವರನ್ನು ಬಳಸಿಕೊಂಡು ಅಮರ್ ಸಿಂಗ್ ಬಳಗ ಮತ್ತೆ ಹೊಸತೊಂದು ಸಮಾಜವಾದವನ್ನು ಬೆಳೆಯುವ ಸಾಧ್ಯತೆಗಳಿವೆ. ಸಮಾಜವಾದಿ ಪಕ್ಷದ ಪತನ ಬಿಜೆಪಿಗೂ ಸಾಕಷ್ಟು ಪ್ರಯೋಜನವಾಗಲಿದೆ ಎನ್ನುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಉತ್ತರ ಪ್ರದೇಶದ ಬಲಿಷ್ಠ ಸಮುದಾಯಗಳು ಬಿಜೆಪಿಯನ್ನು ನೆಚ್ಚಿಕೊಂಡು, ದಲಿತರ ವಿರುದ್ಧ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಕಟ್ಟುವ ಕನಸುಕಂಡರೆ ಅದರಲ್ಲಿ ಅಚ್ಚರಿಯೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News