ಚಿತ್ರ ನಿರ್ಮಾಪಕರಿಂದ ಸೇನಾ ಕಲ್ಯಾಣ ನಿಧಿಗೆ 5 ಕೋ.ರೂ.ಕೊಡುಗೆಯನ್ನು ವಿರೋಧಿಸಿದ್ದೆ:ಫಡ್ನವೀಸ್

Update: 2016-10-25 13:19 GMT

ಮುಂಬೈ,ಅ.25: ‘ಎ ದಿಲ್ ಹೈ ಮುಷ್ಕಿಲ್ ’ ಚಿತ್ರದ ನಿರ್ಮಾಪಕರು ಮತ್ತು ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆ ಅವರ ನಡುವೆ ಒಪ್ಪಂದವೊಂದನ್ನು ಕುದುರಿಸುವಲ್ಲಿ ಮಧ್ಯವರ್ತಿಯಾಗಿದ್ದಕ್ಕೆ ವ್ಯಾಪಕ ಟೀಕೆಗೊಳಗಾಗಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಚಿತ್ರ ನಿರ್ಮಾಪಕರಿಂದ ಸೇನಾ ಕಲ್ಯಾಣ ನಿಧಿಗೆ ಐದು ಕೋ.ರೂ.ವಂತಿಗೆಯ ಕೊಡುಗೆಯನ್ನು ತಾನು ವಿರೋಧಿಸಿದ್ದೆ ಎಂದು ಪ್ರತಿಪಾದಿಸಿದ್ದಾರೆ.
ಮಾತುಕತೆ ವೇಳೆ ಠಾಕ್ರೆಯವರು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇತರ ಎರಡು ಬೇಡಿಕೆಗಳಿಗೆ ಯಾವುದೇ ಆಕ್ಷೇಪವಿರಲಿಲ್ಲ. ಐದು ಕೋ.ರೂ.ವಿಷಯ ಪ್ರಸ್ತಾಪವಾದಾಗ ತಾನು ಮಧ್ಯಪ್ರವೇಶಿಸಿ ಇದಕ್ಕೆ ಒಪ್ಪಿಕೊಳ್ಳುವ ಅಗತ್ಯವಿಲ್ಲ ಎಂದು ಚಿತ್ರ ನಿರ್ಮಾಪಕರ ಗಿಲ್ಡ್‌ಗೆ ಸ್ಪಷ್ಟಪಡಿಸಿದ್ದೆ. ಅಲ್ಲದೇ ವಂತಿಗೆ ಸ್ವಯಂಇಚ್ಛೆಯಿಂದ ಬರಬೇಕು ಎಂದೂ ಹೇಳಿದ್ದೆ. ಆದರೆ ಬೇಡಿಕೆಯನ್ನು ಒಪ್ಪಿಕೊಳ್ಳುವ ನಿರ್ಧಾರ ಚಿತ್ರನಿರ್ಮಾಪಕರದಾಗಿತ್ತು ಎಂದು ಸುದ್ದಿಗಾರರೊಡನೆ ಮಾತನಾಡಿದ ಫಡ್ನವೀಸ್ ಹೇಳಿದರು.
 ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುವ ಗಿಲ್ಡ್ ನಿರ್ಧಾರ ಒಳ್ಳೆಯದು, ಆದರೆ ಅದು ಕಡ್ಡಾಯವಲ್ಲ ಎಂದು ತಾನು ಸ್ಪಷ್ಟಪಡಿಸಿದ್ದೆ. ಆದರೂ ವಂತಿಗೆ ಕೊಡಲು ನಿರ್ಧರಿಸಿದರೆ ಸೂಕ್ತ ಕಂಡ ಮೊತ್ತವನ್ನು ನೀಡಬಹುದು ಎಂದೂ ತಾನು ಸೂಚಿಸಿದ್ದೆ. ಎಂಎನ್‌ಎಸ್ ಐದು ಕೋ.ರೂ.ವಿಷಯವನ್ನು ಪ್ರಸ್ತಾಪಿಸಿತ್ತು, ಆದರೆ ಅದನ್ನು ಸಭೆಯಲ್ಲಿ ಒಪ್ಪಿಕೊಳ್ಳಲಾಗಿರಲಿಲ್ಲ ಎಂದರು.
ಒಪ್ಪಂದದ ‘ದಲ್ಲಾಳಿ’ಯಾಗಿದ್ದ ಆರೋಪದ ಬಗ್ಗೆ ಪ್ರಶ್ನೆಗೆ,ಚಿತ್ರ ಬಿಡುಗಡೆ ಸಂದರ್ಭ ಚಿತ್ರಮಂದಿರಗಳ ಹೊರಗೆ ಸಾವಿರಾರು ಪೊಲೀಸರನ್ನು ನಿಯೋಜಿಸುವುದು ಇನ್ನೊಂದು ಆಯ್ಕೆಯಾಗಿತ್ತು. ಆದರೆ ಹಾಗೆ ಮಾಡಿದರೆ ಪೊಲೀಸರ ದೀಪಾವಳಿ ಸಂಭ್ರಮವನ್ನು ಹಾಳು ಮಾಡಿದ ಆರೋಪ ಎದುರಿಸಬೇಕಿತ್ತು. ವಿವಾದಗಳನ್ನು ಮಾತುಕತೆಗಳ ಮೂಲಕವೇ ಬಗೆಹರಿಸಬೇಕು ಮತ್ತು ನಮ್ಮದು ಪ್ರಜಾಸತ್ತಾತ್ಮಕ ಸರಕಾರವಾಗಿದೆ ಎಂದು ಅವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News