ಲಿಂಗ ಸಮಾನತೆಯಲ್ಲಿ ಭಾರತಕ್ಕೆ 87ನೆ ಸ್ಥಾನ
ಜಿನಿವಾ/ಹೊಸದಿಲ್ಲಿ, ಅ.26: ಲಿಂಗ ಸಮಾನತೆಯ ವಿಚಾರದಲ್ಲಿ ಭಾರತವು ಕಳೆದ ವರ್ಷಕ್ಕಿಂತ 21 ಸ್ಥಾನ ಮೇಲೆ ನೆಗೆದಿದೆ. ಶಿಕ್ಷಣ ರಂಗದಲ್ಲಾಗಿರುವ ಪ್ರಗತಿ ಇದಕ್ಕೆ ಕಾರಣವಾಗಿದೆ. ಆದಾಗ್ಯೂ, ಜಾಗತಿಕವಾಗಿ ಭಾರತ 87ನೆ ಸ್ಥಾನದಲ್ಲಿದೆ. ಐಸ್‌ಲ್ಯಾಂಡ್ ಲಿಂಗಸಮಾನತೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಜಿನಿವಾ ಮೂಲದ ಜಾಗತಿಕ ಆರ್ಥಿಕ ವೇದಿಕೆ ರಚಿಸಿದ್ದ ವಾರ್ಷಿಕ ಜಾಗತಿಕ ಲಿಂಗ ಅಂತರ ಸೂಚಿಯಲ್ಲಿ ಭಾರತ 108ನೆ ಸ್ಥಾನದಲ್ಲಿತ್ತು. ಅದು ಒಂದು ವರ್ಷದಲ್ಲಿ ಈ ಅಂತರವನ್ನು ಶೇ.2ರಷ್ಟು ತಗ್ಗಿಸಿದ್ದು, ಆರ್ಥಿಕತೆ, ಶಿಕ್ಷಣ, ಆರೋಗ್ಯ ಹಾಗೂ ರಾಜಕೀಯ ಪ್ರಾತಿನಿಧ್ಯಗಳೆಂಬ ಡಬ್ಲುಇಎಫ್ ಅಳಗೆಯ 4 ಸ್ತಂಭಗಳಲ್ಲಿ ಈ ಅಂತರವು ಶೇ.68ರಲ್ಲಿ ನಿಂತಿದೆ.
ಈ ಮಹತ್ತ್ವದ ಸುಧಾರಣೆಗೆ ಶಿಕ್ಷಣ ಕಾರಣವಾಗಿದ್ದು, ಭಾರತವು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಈ ಅಂತರವನ್ನು ಸಂಪೂರ್ಣವಾಗಿ ಮುಚ್ಚಲು ಸಮರ್ಥವಾಗಿದೆ. ಆರ್ಥಿಕ ವಲಯದಲ್ಲಿ ಹೆಚ್ಚಿನ ಕೆಲಸ ಮಾಡಲು ಬಾಕಿಯಿದೆ. 144 ದೇಶಗಳೊಳಗೆ ಭಾರತವು ಈ ಸ್ತಂಭದಲ್ಲಿ 136ನೆ ಸ್ಥಾನದಲ್ಲಿದೆಯೆಂದು ಡಬ್ಲುಇಎಫ್ ಹೇಳಿದೆ.
ಶೈಕ್ಷಣಿಕ ಸಾಧನೆಯಲ್ಲಿ ಭಾರತ 113ನೆ ಸ್ಥಾನದಲ್ಲಿದೆ.ಆರೋಗ್ಯ ಹಾಗೂ ಬದುಕುವಿಕೆಯಲ್ಲಿ ಅದು 142 ರಷ್ಟು ಕೆಳಗಿನ ಸ್ಥಾನದಲ್ಲಿದ್ದರೆ, ರಾಜಕೀಯ ಸಬಲೀಕರಣದಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ.
ಡಬ್ಲುಇಎಫ್‌ನ ಜಾಗತಿಕ ಲಿಂಗ ಅಂತರ ವರದಿ-2016ರನ್ವಯ ಜಾಗತಿಕ ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಮತ್ತಷ್ಟು ಕುಸಿದಿದೆ. ಲಿಂಗಗಳ ನಡುವೆ ಆರ್ಥಿಕ ಸಮಾನತೆ 170 ವರ್ಷಗಳ ಬಳಿಕ ಪ್ರಗತಿಯಲ್ಲಿ ನಾಟಕೀಯ ಕುಸಿತ ಕಂಡಿದೆ.
ಜಾಗತಿಕವಾಗಿ ಲಿಂಗ ಸಮಾನತೆಯಲ್ಲಿ ನಾಲ್ಕು ಸ್ಕಾಂಡಿನೇವಿಯನ್ ರಾಷ್ಟ್ರಗಳಾದ ಐಸ್‌ಲ್ಯಾಂಡ್, ಫಿನ್ಲೆಂಡ್, ನಾರ್ವೆ ಹಾಗೂ ಸ್ವೀಡನ್ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ. ರ್ವಾಂಡಾ 5, ಐರ್ಲೆಂಡ್ 6, ಫಿಲಿಪ್ಪೀನ್ಸ್ 7, ಸ್ಲೊವೇನಿಯ 8, ನ್ಯೂಝಿಲೆಂಡ್ 9 ಹಾಗೂ ನಿಕರಾಗುವ 10ನೆ ಸ್ಥಾನಗಳಲ್ಲಿವೆ.