×
Ad

ಶಿವಾಯ್ ಚಿತ್ರದ ಮೊದಲ ದೃಶ್ಯ, ಕತೆ ವಿವರ ಬಹಿರಂಗಪಡಿಸಿದ ಕೆಆರ್ ಕೆ !

Update: 2016-10-27 16:14 IST

ದುಬೈ, ಅ. 27 : ಸ್ವಯಂ ಘೋಷಿತ ಚಿತ್ರ ವಿಮರ್ಶಕ, ವಿವಾದಾಸ್ಪದ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಕಮಾಲ್ ಆರ್ ಖಾನ್ ಈಗ ಎಲ್ಲ ಮಿತಿಯನ್ನು ದಾಟಿ ಬಿಟ್ಟಿದ್ದಾರೆ. ದುಬೈ ಯಲ್ಲಿ ಥಿಯೇಟರ್ ಒಂದರಲ್ಲಿ ಅಜಯ್ ದೇವ್ಗನ್ ಅವರ ಹೊಸ ಚಿತ್ರ ಶಿವಾಯ್ ವೀಕ್ಷಿಸಿದ ಕೆಆರ್ ಕೆ ಅದರ ಮೊದಲ ದೃಶ್ಯವನ್ನು ರೆಕಾರ್ಡ್ ಮಾಡಿ ಟ್ವಿಟ್ಟರ್ ನಲ್ಲಿ ಲೀಕ್ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೇ ನಿಲ್ಲದೆ  ಚಿತ್ರದ ಕತೆಯ ಕುರಿತ ಕುತೂಹಲಕಾರಿ ವಿಷಯಗಳನ್ನೆಲ್ಲಾ ಬಹಿರಂಗಗೊಳಿಸಿಬಿಟ್ಟಿದ್ದಾರೆ. 

" ಶಿವಾಯ್ ಬಲ್ಗೇರಿಯಾದಲ್ಲಿ ವೇಶ್ಯಾವಾಟಿಕೆ ಕುರಿತ ಕತೆ ಹೊಂದಿದೆ. ಇದಕ್ಕೂ ಭಾರತೀಯರಿಗೂ ಏನು ಸಂಬಂಧ ? ಅವರು ಏಕೆ ಇದನ್ನು ನೋಡಬೇಕು ? " ಎಂದು ಟ್ವೀಟ್ ಮಾಡಿದ್ದಾರೆ ಕೆ ಆರ್ ಕೆ. 

ಇತ್ತೀಚಿಗೆ ಕೆಆರ್ ಕೆ ಜೊತೆ ತಮ್ಮ ಪಾಲುದಾರ ಮಾತನಾಡಿದ ಆಡಿಯೋವನ್ನು ಅಜಯ್ ಬಿಡುಗಡೆ ಮಾಡಿದ್ದರು. ಅದರಲ್ಲಿ ಶಿವಾಯ್ ಜೊತೆ ಜೊತೆ ಬಿಡುಗಡೆಯಾಗುವ  ತಮ್ಮ ಚಿತ್ರ ಅಯ್ ದಿಲ್ ಹೈ ಮುಷ್ಕಿಲ್ ಗೆ ಪ್ರಚಾರ ನೀಡಲು ಕರಣ್ ಜೋಹರ್ ತನಗೆ 25 ಲಕ್ಷ ರೂ. ನೀಡಿದ್ದಾರೆ ಎಂದು ಕೆಆರ್ ಕೆ ಹೇಳಿದ್ದಾರೆ ಎಂದು ಹೇಳಲಾಗಿತ್ತು. 

ಈಗ ಕೆಆರ್ ಕೆ ಮಾಡಿರುವ ಕೆಲಸ ಅಜಯ್ ದೇವ್ಗನ್ ಅವರ ಮಹತ್ವಾಕಾಂಕ್ಷೆಯ ಚಿತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಚಿತ್ರದ ಕತೆ ಕುರಿತ ವಿವರಗಳು ಬಹಿರಂಗವಾಗದಂತೆ ಅಜಯ್ ಭಾರೀ ಎಚ್ಚರಿಕೆ ವಹಿಸಿದ್ದರು. ಇದನ್ನು ಅಜಯ್ ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಾಗಿದೆ. 

ಬಳಿಕ ಎಚ್ಚೆತ್ತ ಕೆ ಆರ್ ಕೆ ವೀಡಿಯೊ ವನ್ನು ಡಿಲೀಟ್ ಮಾಡಿದ್ದರೂ ಆಗಲೇ ದೊಡ್ಡ ಸಂಖ್ಯೆಯಲ್ಲಿ ಜನ ಅದನ್ನು ನೋಡಿ ಹಂಚಿಕೊಂಡು ಆಗಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News