ಬೀದಿ ನಾಯಿ ನಿಯಂತ್ರಣಕ್ಕೆ ಕೇರಳ ನಿರ್ಧಾರ
ತಿರುವನಂತಪುರ, ಅ.27: ಬೀದಿ ನಾಯಿಗಳು ಈ ವರ್ಷ ಬುಧವಾರ 10ನೆ ವ್ಯಕ್ತಿಗೆ ಕಚ್ಚಿದ ಬಳಿಕ, ಅವುಗಳ ಜನನ ನಿಯಂತ್ರಣಕ್ಕೆ ಸಮರೋಪಾದಿ ಕ್ರಮ ಜಾರಿಗೊಳಿಸುವಂತೆ ಎಲ್ಲ ಸ್ಥಳೀಯಾಡಳಿತಗಳಿಗೆ ಕೇರಳ ಸರಕಾರ ಆದೇಶ ನೀಡಿದೆ.
ಬೀದಿ ನಾಯಿಗಳನ್ನು ಕೊಲ್ಲುವವರ ಮೇಲೆ ಗೂಂಡಾ ಕಾಯ್ದೆ(ಕೇರಳ ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆ) ಹೇರಬೇಕೆಂಬ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿಯವರ ಸಲಹೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ.
ಕೇರಳದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳಿಂದ ಬೆದರಿಕೆಗೊಳಗಾಗಿರುವ ಜನರು ಅವುಗಳನ್ನು ಕೊಲ್ಲತೊಡಗಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಮೇನಕಾರ ಈ ಸಲಹೆ ಹೊರಬಿದ್ದಿತ್ತು.
ಬುಧವಾರ ತನ್ನ ಮನೆಯ ಜಗಲಿಯಲ್ಲಿ ಮಲಗಿದ್ದ 90ರ ಹರೆಯದ ವೃದ್ಧನೊಬ್ಬನ ಮೇಲೆ ವರ್ಕಳದಲ್ಲಿ ಬೀದಿನಾಯಿಗಳ ಗುಂಪೊಂದು ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಆತ ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಡರಾತ್ರಿ ಕೊನೆಯುಸಿರೆಳೆದಿದ್ದನು. ಮೂರು ತಿಂಗಳ ಹಿಂದೆ ತಿರುವನಂತಪುರದ ಹೊರ ವಲಯದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ್ದ ಬೀದಿ ನಾಯಿಗಳು ಆಕೆಯ ದೇಹದ ಒಂದು ಭಾಗವನ್ನೇ ಕಬಳಿಸಿದ್ದವು.
ಮೇನಕಾರ ಸಲಹೆ ಪ್ರಾಯೋಗಿಕವಲ್ಲ. ಅವರಿಗೆ ವಾಸ್ತವ ಅಪಾಯವನ್ನು ತಿಳಿಯಬೇಕೆಂದಿದ್ದಲ್ಲಿ ಅವರು ರಾಜ್ಯಕ್ಕೆ ಭೇಟಿ ನೀಡಿ, ಕೆಲವು ಬೀದಿ ನಾಯಿ ಕಡಿತ ಸಂತ್ರಸ್ತರನ್ನು ಭೇಟಿಯಾಗಲಿ ಎಂದು ಸ್ಥಳೀಯಾಡಳಿತ ಸಚಿವ ಕೆ.ಟಿ. ಜಲೀಲ್ ಹೇಳಿದ್ದಾರೆ.
ವಿಪಕ್ಷ ಕಾಂಗ್ರೆಸ್ ಸಹ ಕೇಂದ್ರ ಸಚಿವೆಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಪ್ರಾಣಿ ಪ್ರೀತಿಯಿಂದ ಕುರುಡಾಗಿರುವಂತೆ ಕಾಣುತ್ತಿದೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೊದಲು ಇಲ್ಲಿನ ಜನರು ಎದುರಿಸುತ್ತಿರುವ ಬೆದರಿಕೆಯ ಕುರಿತು ಅವರು ತಿಳಿದುಕೊಳ್ಳಲಿ ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಕಿಡಿಗಾರಿದ್ದಾರೆ.
2015-16ರಲ್ಲಿ ಸುಮಾರು 1 ಲಕ್ಷ ಮಂದಿಗೆ ಕೇರಳದಲ್ಲಿ ಬೀದಿ ನಾಯಿಗಳು ಕಚ್ಚಿವೆಯೆಂದು ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿರಿ ಜಗನ್ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿತ ಸಮಿತಿಯೊಂದು ವರದಿ ನೀಡಿದೆ.