ಕಾರು, ಮನೆ, ಒಡವೆಗಳ ದೀಪಾವಳಿ ಬೋನಸ್ ನೀಡಿದ್ದ ಧೋಲಾಕಿಯಾ ಮತ್ತೆ ಸುದ್ದಿಯಲ್ಲಿ !
ಅಹ್ಮದಾಬಾದ್, ಅ. 27 : 2014 ರಲ್ಲಿ ತಮ್ಮ 1300 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ಕಾರು, ಮನೆ ಹಾಗು ಒಡವೆ ನೀಡಿ ಸುದ್ದಿಯಾಗಿದ್ದ ಗುಜರಾತಿನ ರಫ್ತು ಉದ್ಯಮಿ ಸಾವಜಿ ಭಾಯ್ ಧೋಲಾಕಿಯ ಈ ವರ್ಷ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ದೀಪಾವಳಿಗೆ ಮತ್ತೆ ಮನಸ್ಸು ದೊಡ್ಡದು ಮಾಡಿರುವ ಈ 71 ದೇಶಗಳಲ್ಲಿ ವಹಿವಾಟು ಹೊಂದಿರುವ ೬ ಸಾವಿರ ಕೋಟಿಗಳ ಒಡೆಯ ತಮ್ಮ 1761 ಉದ್ಯೋಗಿಗಳಿಗೆ ಬೋನಸ್ ರೂಪದಲ್ಲಿ ಕಾರು, ಮನೆ ಹಾಗು ಆಭರಣ ನೀಡಲಿದ್ದಾರೆ !
1260 ಮಂದಿಗೆ ಕಾರು , 400 ಮಂದಿಗೆ ಮನೆ ಹಾಗು 56 ಮಂದಿಗೆ ಆಭರಣ ನೀಡಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 2014 ರಲ್ಲಿ ಈ ಕೊಡುಗೆಗಳನ್ನು ಪಡೆದವರನ್ನು ಹೊರತು ಪಡಿಸಿ ಉಳಿದವರಿಗೆ ಈ ಬಾರಿ ನೀಡಲಾಗಿದೆ. ಇವರಲ್ಲಿ ಮಾಸಿಕ 10 ರಿಂದ 60 ಸಾವಿರ ಸಂಬಳ ಪಡೆಯುವವರಿದ್ದಾರೆ.
ಈ ವರ್ಷ ಜುಲೈಯಲ್ಲೂ ಧೋಲಾಕಿಯ ಸುದ್ದಿಯಾಗಿದ್ದರು. ಅಮೇರಿಕಾದಲ್ಲಿ ಎಂಬಿಎ ಪದವಿ ಪಡೆಯುತ್ತಿರುವ ತಮ್ಮ ಪುತ್ರನನ್ನು ಕೇವಲ 7 ಸಾವಿರ ರೂಪಾಯಿ ಹಣ ಹಾಗು ಮೂರು ಜೊತೆ ಬಟ್ಟೆ ನೀಡಿ ಕೊಚ್ಚಿಯಲ್ಲಿ ನಾಲ್ಕು ಸಾವಿರ ರೂ ಸಂಬಳದ ಸಾಮಾನ್ಯ ಉದ್ಯೋಗ ಮಾಡಿಸಿದ್ದರು.
ಈ ಸಂದರ್ಭದಲ್ಲಿ ತಮ್ಮ ಗುರುತು ಹೇಳದೆ ಸಾಮಾನ್ಯನಂತೆ ಉದ್ಯೋಗ ಅರಸಿ ಅದರಲ್ಲಿ ಕಲಿಯಬೇಕು ಎಂದು ಅವರು ಪುತ್ರನಿಗೆ ಷರತ್ತು ಹಾಕಿದ್ದರು ಎಂದು ಹೇಳಲಾಗಿದೆ. ಈ ಅವರಧಿಯಲ್ಲಿ ಅವರ ಪುತ್ರ ಒಂದು ಬೇಕರಿ ಹಾಗು ಮ್ಯಾಕ್ ಡೊನಾಲ್ಡ್ ಮಳಿಗೆಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಕೆಲಸ ಮಾಡಿದ್ದು ಭಾರೀ ಸುದ್ದಿಯಾಗಿತ್ತು.