ಮಧ್ಯಪ್ರದೇಶದ ಕಾಲೇಜಿನಲ್ಲಿ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಜಾತಿಸೂಚಕ ಬ್ಯಾಗ್‌ಗಳು
ಮಂದಸೌರ್,(ಮ.ಪ್ರ.),ಅ.27: ಮಂದಸೌರ್ ಜಿಲ್ಲೆಯ ಸರಕಾರಿ ಕಾಲೇಜೊಂದರ ಸುಮಾರು 250 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಅವರ ಜಾತಿಯನ್ನು ಸೂಚಿಸುವ ಬ್ಯಾಗುಗಳನ್ನು ವಿತರಿಸಲಾಗಿದೆ. ಈ ಬ್ಯಾಗುಗಳ ಮೇಲೆ ‘ಎಸ್‌ಸಿ/ಎಸ್‌ಟಿ ಯೋಜನೆ ’ಎಂದು ಢಾಳಾದ ಅಕ್ಷರಗಳಲ್ಲಿ ಮುದ್ರಿಸಲಾಗಿದೆ.
ಈ ಬ್ಯಾಗುಗಳನ್ನು ಕಲ್ಯಾಣ ಯೋಜನೆಯೊಂದರ ಅಡಿಯಲ್ಲಿ ವಿತರಿಸಲಾಗಿದೆ, ಹೀಗಾಗಿ ಯೋಜನೆಯ ಹೆಸರು ಅದರ ಮೇಲಿದ್ದರೇನು ತಪ್ಪು? ಕೆಲವರಿಗೆ ಬೇಡವಾದರೆ ಉಳಿದಿರುವ ಬ್ಯಾಗುಗಳ ಮೇಲಿನ ಹೆಸರನ್ನು ಅಳಿಸಲು ನಾವು ಸಿದ್ಧ. ಪೂರೈಕೆದಾರರು ಯೋಜನೆಯ ಹೆಸರನ್ನು ಬ್ಯಾಗುಗಳ ಮೇಲೆ ಮುದ್ರಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಬಿ.ಆರ.ನಲ್ವಯಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಈ ಬ್ಯಾಗುಗಳನ್ನು ವಿತರಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ಆಡಳಿತ ಬಿಜೆಪಿ ಮತ್ತು ಆರೆಸ್ಸೆಸ್‌ಗಳನ್ನು ತರಾಟೆಗೆತ್ತಿಕೊಂಡಿದೆ.
ಈ ಬ್ಯಾಗುಗಳು ಆರೆಸ್ಸೆಸ್ ಬೆಂಬಲಿತ ಬಿಜೆಪಿ ಸರಕಾರದ ‘ದಲಿತ ವಿರೋಧಿ ಮತ್ತು ಗಿರಿಜನ ವಿರೋಧಿ’ಮನೋಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅರುಣ್ ಯಾದವ್ ಟ್ವೀಟಿಸಿದ್ದಾರೆ.