ರಣಜಿ ಟ್ರೋಫಿ :ಅಸ್ಸಾಂಗೆ ಅಮಿತ್ ಶತಕದ ಆಸರೆ
ಮುಂಬೈ, ಅ.27: ಮಧ್ಯಮ ಸರದಿಯ ಅಮಿತ್ ವರ್ಮ ಶತಕದ ನೆರವಿನಿಂದ ಅಸ್ಸಾಂ ತಂಡ ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಇಂದು ಆರಂಭಗೊಂಡ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಗ್ರೂಪ್ ‘ಬಿ’ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಮೊದಲ ದಿನದಾಟದಂತ್ಯಕ್ಕೆ ಅಸ್ಸಾಂ ತಂಡ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 268 ರನ್ ಗಳಿಸಿದೆ.
ಅಮಿತ್ ವರ್ಮ ಔಟಾಗದೆ125 ರನ್(259ಎ, 18ಬೌ,1ಸಿ) ಮತ್ತು ಸ್ವರೂಪಕಮ್ ಪುರ್ಕಾಯಸ್ತ ಔಟಾಗದೆ 56 ರನ್(88ಎ, 7ಬೌ,1ಸಿ) ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಅಸ್ಸಾಂ ತಂಡಕ್ಕೆ ಆರಂಭದಲ್ಲಿ ಎಸ್.ಅರವಿಂದ್ ಕಾಡಿದರು. ಅವರ ಪ್ರಹಾರಕ್ಕೆ ಸಿಲುಕಿ 10 ಓವರ್‌ಗಳಲ್ಲಿ 16 ರನ್ ಗಳಿಸುವಷ್ಟರಲ್ಲಿ ಅಗ್ರ ಸರದಿಯ ಮೂರು ವಿಕೆಟ್‌ಗಳು ಉರುಳಿದವು. ಆರಂಭಿಕ ದಾಂಡಿಗ ರಾಹುಲ್ ಹಝಾರಿಕಾ (4),ರಿಷವ್ ದಾಸ್(0) ಮತ್ತು ನಾಯಕ ಗೋಕುಲ್ ಶರ್ಮ(8) ಬೇಗನೆ ನಿರ್ಗಮಿಸಿದರು.
ನಾಲ್ಕನೆ ವಿಕೆಟ್‌ಗೆ ಅಮಿತ್ ವರ್ಮಗೆ ವಿಕೆಟ್ ಕೀಪರ್ ಕೆ.ಬಿ.ಅರುಣ್ ಕಾರ್ತಿಕ್ ಜೊತೆಯಾದರು.ಇವರು ಜೊತೆಯಾಟದಲ್ಲಿ 76ರನ್ ಸೇರಿಸಿದರು. ಇದರಿಂದಿಗೆ ಅಸ್ಸಾಂ ನಿಧಾನವಾಗಿ ಚೇತರಿಸಿಕೊಂಡಿತು.
35 ರನ್ ಗಳಿಸಿದ ಕಾರ್ತಿಕ್ ಅವರನ್ನು 29.2ನೆ ಓವರ್‌ನಲ್ಲಿ ಅರವಿಂದ್ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಬಳಿಕ ತರ್ಜಿಂದರ್ ಸಿಂಗ್ ಕ್ರೀಸ್‌ಗೆ ಆಗಮಿಸಿದರು. ಇವರ ಜೊತೆಯಾಟದಲ್ಲಿ ಐದನೆ ವಿಕೆಟ್‌ಗೆ 54 ರನ್ ಬಂತು.
ತರ್ಜಿಂದರ್ ಸಿಂಗ್ (26) ವಿಕೆಟ್‌ನ್ನು ಸ್ಟುವರ್ಟ್ ಬಿನ್ನಿ ಉಡಾಯಿಸಿದರು.
ಸೈಯದ್ ಮುಹಮ್ಮದ್(0) ಅವರನ್ನು ಅರವಿಂದ್ ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸಿದರು. ಅರವಿಂದ್ ಇದರೊಂದಿಗೆ 5 ವಿಕೆಟ್‌ಗಳ ಗೊಂಚಲನ್ನು ಪಡೆದರು. 59.1 ಓವರ್‌ಗಳಲ್ಲಿ 166 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಅಸ್ಸಾಂ 200 ರನ್ ಗಳಿಸುವ ಸಾಧ್ಯತೆ ಕಡಿಮೆ ಇತ್ತು. ಆಗ ಸ್ವರೂಪಮ್ ಪುರ್ಕಾಯಸ್ತ ಕ್ರೀಸ್‌ಗೆ ಆಗಮಿಸಿದರು. ಇವರು ಮುರಿಯದ ಜೊತೆಯಾಟದಲ್ಲಿ 102 ರನ್ ಸೇರಿಸಿ ಕರ್ನಾಟಕದ ದಾಳಿಯನ್ನು ಚಿಂದಿ ಉಡಾಯಿಸಿದರು.
ಮೂಲತಃ ಬೆಂಗಳೂರು ಹುಡುಗ ಅಮಿತ್ ವರ್ಮ 62ನೆ ಪ್ರಥಮ ದರ್ಜೆ ಪಂದ್ಯದಲ್ಲಿ 11ಶತಕ ಪೂರ್ಣಗೊಳಿಸಿದರು. ಪುರ್ಕಾಯಸ್ತ ಮೂರನೆ ಅರ್ಧಶತಕ ದಾಖಲಿಸಿ ಬ್ಯಾಟಿಂಗ್‌ನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ಧಾರೆ.
ಎಸ್. ಅರವಿಂದ್ 49ಕ್ಕೆ 5 ವಿಕೆಟ್ ಮತ್ತು ಸ್ಟುವರ್ಟ್ ಬಿನ್ನಿ 67ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ವಿವರ
ಅಸ್ಸಾಂ ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 268(ಅಮಿತ್ ವರ್ಮ ಔಟಾಗದೆ 125, ಪುರ್ಕಾಯಸ್ತ ಔಟಾಗದೆ 56ರನ್, ಅರುಣ್ ಕಾರ್ತಿಕ್ 35, ತರ್ಜಿಂದರ್ ಸಿಂಗ್ 26; ಅರವಿಂದ್ 49ಕ್ಕೆ 5, ಬಿನ್ನಿ 67ಕ್ಕೆ 1).