ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಪಾಕ್ ದಾಳಿ, ಭಾರತ ತಿರುಗೇಟು

Update: 2016-10-30 02:51 GMT

ಶ್ರೀನಗರ, ಅ.30: ಪಾಕಿಸ್ತಾನ ಸೇನೆ ಶನಿವಾರ ಭಾರತದ ಭದ್ರತಾ ಪಡೆ ಶಿಬಿರಗಳ ಮೇಲೆ ನಡೆಸಿದ ದಾಳಿಯಲ್ಲಿ ಗಡಿಭದ್ರತಾ ಪಡೆಯ ಸೈನಿಕನೊಬ್ಬ ಮೃತಪಟ್ಟಿರುವ ಬೆನ್ನಲ್ಲೇ ಭಾರತ ಪ್ರತಿದಾಳಿ ನಡೆಸಿದ್ದು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ವಾಸ್ತವ ನಿಯಂತ್ರಣ ರೇಖೆಯ ಆರ್.ಎಸ್.ಪುರ ಹಾಗೂ ಕೆರಾನ್ ವಲಯದಲ್ಲಿ ಮತ್ತು ಅಂತಾರಾಷ್ಟ್ರೀಯ ಗಡಿಯ ಕಟುವಾ ವಲಯದಲ್ಲಿ ಭಾರತ ಸೇನೆ, ಪಾಕಿಸ್ತಾನದ ಮೇಲೆ ಗುಂಡಿನ ಮಳೆಗೆರೆದಿದೆ.

ಶುಕ್ರವಾರ ತಡರಾತ್ರಿ ಪಾಕಿಸ್ತಾನ ಸೇನೆ ಬೊರಿವಲ್ಲಾ ಪೋಸ್ಟ್ ಬಳಿ ನಡೆಸಿದ ಶೆಲ್ ದಾಳಿಯಲ್ಲಿ 156ನೆ ಬೆಟಾಲಿಯನ್‌ನ ನಿತಿನ್ ಕೋಲಿ ಎಂಬ ಸೈನಿಕ ಮೃತಪಟ್ಟಿದ್ದಾಗಿ ಅಧಿಕೃತ ಮೂಲಗಳು ಹೇಳಿವೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ವಲಯದಲ್ಲಿ 17ನೆ ಸಿಕ್ಖ್ ಲೈಟ್ ಇನ್‌ಫ್ಯಾಂಟ್ರಿಯ ಯೋಧ, ಉಗ್ರರ ಜತೆಗಿನ ಗುಂಡಿನ ಚಟುವಟಿಕೆಯಲ್ಲಿ ಮೃತಪಟ್ಟ ಮರುದಿನವೇ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯರು ಕೂಡಾ ಘಟನೆಯಲ್ಲಿ ಗಾಯಗೊಂಡಿದ್ದರು.

ಗಡಿಯಲ್ಲಿ ಉಭಯ ಕಡೆಗಳಿಂದ ಶೆಲ್ ದಾಳಿ ವ್ಯಾಪಕವಾಗಿ ನಡೆಯುತ್ತಿದ್ದು, ಹಲವು ಮಂದಿ ನಾಗರಿಕರಿಗೂ ತೊಂದರೆಯಾಗಿದೆ ಎಂದು ಮೂಲಗಳು ಹೇಳಿವೆ. ಈ ಪ್ರದೇಶದಲ್ಲಿ ಪರಿಸ್ಥಿತಿ ಭಯಾನಕವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News